ಚಳ್ಳಕೆರೆ: ಸಾರ್ವಜನಿಕರು ಹಾಗೂ ವಿವಿಧ ಸಂಘಟನೆಗಳು ಶಾಂತಿಯುತವಾಗಿ ಪ್ರತಿಭಟನೆ, ಧರಣಿ ಹಾಗೂ ಮನವಿ ಸಲ್ಲಿಕೆ ನಡೆಸುವ ಉದ್ದೇಶದಿಂದ ಶಾಸಕ ಟಿ. ರಘುಮೂರ್ತಿ ಅವರ ಆದೇಶದ ಮೇರೆಗೆ ಬೆಂಗಳೂರು ಫ್ರೀಡಂಪಾರ್ಕ್ ಮಾದರಿಯಲ್ಲಿ ಚಳ್ಳಕೆರೆ ನಗರದಲ್ಲಿ ವಿಶೇಷವಾಗಿ ಒಂದು ಜಾಗವನ್ನು ನಿಗದಿಪಡಿಸಲಾಗಿದೆ.
ನಗರದ ಬಳ್ಳಾರಿ ರಸ್ತೆ ಬನ್ನಿಮರ ಮೈದಾನದಲ್ಲಿ ಮೂರು ಗುಂಟೆ ಜಾಗವನ್ನು ನಗರಸಭೆ ಹಾಗೂ ಕಂದಾಯ ಇಲಾಖೆ ಸಹಯೋಗದಲ್ಲಿ ಪ್ರತಿಭಟನೆಗಾಗಿ ಮೀಸಲಿರಿಸಲಾಗಿದ್ದು, ನಗರಸಭೆಯ ವತಿಯಿಂದ ಭೂಮಿಸಮತಟ್ಟು ಕಾರ್ಯವನ್ನು ಕೈಗೊಳ್ಳಲಾಗಿದೆ.
ನಗರದ ಸಂಚಾರ ವ್ಯವಸ್ಥೆಗೆ ಯಾವುದೇ ಅಡಚಣೆ ಆಗದಂತೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ನಿಗದಿತ ಜಾಗದಲ್ಲಿ ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ ವಿಷಯಗಳ ಕುರಿತು ಪ್ರತಿಭಟನೆ ನಡೆಸಲು ಅವಕಾಶ ಕಲ್ಪಿಸಲಾಗಿದ್ದು, ಅನುಮತಿ ಹಾಗೂ ನಿಗದಿತ ನಿಯಮಾವಳಿಗಳೊಂದಿಗೆ ಕಾರ್ಯಕ್ರಮಗಳನ್ನು ಆಯೋಜಿಸಬಹುದಾಗಿದೆ ಎಂದು ತಹಶೀಲ್ದಾರ್ ರೇಹಾನ್ ಪಾಷ ಹಾಗೂ ಪೌರಾಯುಕ್ತ ಜಗ್ಗರೆಡ್ಡಿ ಅವರು ಮಾಹಿತಿ ನೀಡಿದ್ದಾರೆ.
ಈ ವ್ಯವಸ್ಥೆಯಿಂದ ನಗರದಲ್ಲಿ ಅಸ್ತವ್ಯಸ್ತತೆ ತಪ್ಪಿಸಿ ಶಾಂತಿಯುತವಾಗಿ ಪ್ರತಿಭಟನೆ ನಡೆಸಲು ಅನುಕೂಲವಾಗಲಿದ್ದು, ಸಾರ್ವಜನಿಕರಿಂದ ಹಾಗೂ ವಿವಿಧ ಸಂಘಟನೆಗಳಿಂದ ನಗರಸಭೆಯ ಈ ಕ್ರಮಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

