ಹಟ್ಟಿ ತಿಪ್ಪೇಶನ ದೊಡ್ಡ ಕಾರ್ತಿಕೋತ್ಸವ ಸಂಭ್ರಮ
ನಾಯಕನಹಟ್ಟಿ-: ಚಿತ್ರದುರ್ಗ ಜಿಲ್ಲೆಯ ಐತಿಹಾಸಿಕ ತಿಪ್ಪೇರುದ್ರಸ್ವಾಮಿ, ದೊಡ್ಡ ಕಾರ್ತಿಕೋತ್ಸವ ನೂರಾರು ಭಕ್ತರ ಸಮ್ಮುಖದಲ್ಲಿ ಶುಕ್ರವಾರ ಸಂಭ್ರಮದಿಂದ ಜರುಗಿತು.
ಕಾರ್ತಿಕೋತ್ಸವ ನಿಮಿತ್ತ ರಥವನ್ನು ಬಣ್ಣ ಬಣ್ಣದ ಬಾವುಟ, ಬೃಹತ್ ಹೂ ಹಾರಗಳಿಂದ ಸಿಂಗರಿಸಲಾಗಿತ್ತು.
ಮಧ್ಯಾಹ್ನ 3 ಗಂಟೆಗೆ ಸಕಲ ಪೂಜಾ ವಿಧಿ-ವಿಧಾನಗಳೊಂದಿಗೆ ಸ್ವಾಮಿಯ ಉತ್ಸವ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪಿಸಲಾಯಿತು.
ಭಕ್ತರು ಸಂಭ್ರಮದಿಂದ ತೇರು ಎಳೆದು ಶ್ರೀ ತಿಪ್ಪೇರುದ್ರಸ್ವಾಮಿ ನಾಮಸ್ಮರಣೆ ಮಾಡಿದರು.
ರಥ ಸಾಗಿದ ದಾರಿಯುದ್ದಕ್ಕೂ ಮಹಿಳೆಯರು,
ಮಕ್ಕಳು, ಬಾಳೆಹಣ್ಣು, ಕಾಳುಮೆಣಸು, ಮಂಡಕ್ಕಿ ಬೆಲ್ಲದ
ಚೂರನ್ನು ರಥಕ್ಕೆ ತೂರಿ ಭಕ್ತಿ ಸಮರ್ಪಿಸಿದರು.
ಉತ್ಸವ ಒಳಮಠದಿಂದ ಸಾಗಿ ಆಂಜನೇಯ ದೇವಸ್ಥಾನದ ಮುಂಭಾಗದಿಂದ ಮತ್ತೆ ಒಳಮಠ ಸೇರಿತು.
ದೇವರ ಪಟ್ಟದ ಬಸವನನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು.
ರಥದ ಮುಂದೆ ಬಸವಸಾಗುತ್ತಿದ್ದರೆ ಭಕ್ತರು ಪಾದಗಳಿಗೆ ಎರಗಿ ನಮಸ್ಕರಿಸುತ್ತಿದ್ದರು.
ಸಂಜೆ ಸಕಲ ಬಿರುದಾವಳಿಗಳೊಂದಿಗೆ ಸ್ವಾಮಿಯನ್ನು ಗುಡಿ ತುಂಬಿಸಲಾಯಿತು.
ರಥೋತ್ಸವದ ನಂತರ ಭಕ್ತರಿಗೆ ಸಜ್ಜೆ ಮತ್ತು ಕಡ್ಲೆಕಾಳು ಮೊಳಕೆ, ಪ್ರಸಾದವಾಗಿ ವಿತರಿಸಲಾಯಿತು.
ರಥೋತ್ಸವಕ್ಕೆ ನಂದಿಧ್ವಜ ಕುಣಿತ, ಕರಡಿ ವಾದ್ಯ ಮೆರುಗು ನೀಡಿದವು.
ಶ್ರೀ ಗುರುತಿಪ್ಪೇರುದ್ರಸ್ವಾಮಿ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಎಚ್. ಗಂಗಾಧರಪ್ಪ, ತಿಪ್ಪೆರುದ್ರಪ್ಪ, ಪಟ್ಟಣ ಪಂಚಾಯತಿ ಸದಸ್ಯ ಎನ್ ಮಹಾಂತಣ್ಣ, ಮಾಜಿ ಪಟ್ಟಣ ಪಂಚಾಯತಿ ಸದಸ್ಯ ಟಿ ಬಸಪ್ಪ ನಾಯಕ, ಪೂಜಾರಿ ಶಿವಮೂರ್ತಿ, ಓಂ ಪ್ರಕಾಶ್, ಮಹಾಂತೇಶ್ ದಿವಾಕರ್, ಬಸವರಾಜ್ ಹಿರೇಮಠ್, ದಳವಾಯಿ ರುದ್ರಮುನಿ, ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನದ ಸಿಬ್ಬಂದಿಗಳಾದ ಎಸ್.ಸತೀಶ್, ಮನು, ಮಹೇಶ್ ,ನಾಯಕನಹಟ್ಟಿ ಪೊಲೀಸ್ ಠಾಣೆಯ ಪಿಎಸ್ಐ ಜಿ. ಪಾಂಡುರಂಗಪ್ಪ, ಹಾಗೂ ಸಿಬ್ಬಂದಿಗಳು ಸೇರಿದಂತೆ
ಅಪಾರ ಭಕ್ತರು ಭಾಗವಹಿಸಿದ್ದರು.

