ವಿದ್ಯಾರ್ಥಿಗಳ ಆಲೋಚನಾ ಪ್ರವೃತ್ತಿ ಬೆಳೆಸಲು ವಿಜ್ಞಾನ ವಸ್ತು ಪ್ರದರ್ಶನ ಸಹಕಾರಿಯಾಗಲಿದೆ: ಕ್ಷೇತ್ರ ಶಿಕ್ಷಣಾಧಿಕಾರಿ ಕೆ ಎಸ್ ಸುರೇಶ್
ಚಳ್ಳಕೆರೆ: ವಿದ್ಯಾರ್ಥಿಗಳು ಮೂಡ ನಂಬಿಕೆಗಳಿಂದ ಹೊರಬರಲು ವಾಸ್ತವಿಕ ನೆಲಗಟ್ಟಿನಲ್ಲಿ ಆಲೋಚಿಸಿದಾಗ ಮಾತ್ರ ವಿಜ್ಞಾನ ಮತ್ತು ವಿಶ್ವದ ಎಲ್ಲ ಸಂಗತಿಗಳನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ ಎಸ್ ಸುರೇಶ್ ಅಭಿಪ್ರಾಯಪಟ್ಟರು.
ನಗರದ ಕುವೆಂಪು ಶಾಲೆಯಲ್ಲಿ ಹಮ್ಮಿಕೊಂಡಿದ್ದ ಪ್ರೌಢಶಾಲಾ ಹಂತದ ತಾಲೂಕು ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳಿಗೆ ವಿಜ್ಞಾನ ವಸ್ತು ಪ್ರದರ್ಶನದಿಂದಾಗಿ ಸ್ವಂತ ಆಲೋಚನೆಗಳ ಮೂಲಕ ಮಾರ್ಗದರ್ಶಕರ ಸಹಾಯ ಪಡೆದು ಗುಣಮಟ್ಟದ ಸಾಮಗ್ರಿಗಳನ್ನು ತಯಾರಿಸಿದರೆ ಉತ್ತಮ ಕೌಶಲ್ಯಗಳನ್ನು ಅಳವಡಿಸಿಕೊಳ್ಳಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳಲ್ಲಿ ವಿಭಿನ್ನ ಆಲೋಚನೆಗಳು ಮೂಡಬೇಕಾದರೆ ವಿಜ್ಞಾನ ವಸ್ತು ಪ್ರದರ್ಶನ ಸಹಕಾರಿಯಾಗಲಿದೆ.ಈ ಬಾರಿಯ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ತಾಲೂಕು ನೂರರಷ್ಟು ಫಲಿತಾಂಶ ಪಡೆಯಲು ಎಲ್ಲ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಶ್ರಮ ವಹಿಸಬೇಕು ಎಂದು ಇದೇ ವೇಳೆ ಕರೆ ನೀಡಿದರು.
ಸಾಹಿತಿ ಹಾಗೂ ಶಾಲೆಯ ನಿರ್ದೇಶಕ ಡಾ.ಶಿವಲಿಂಗಪ್ಪ ಮಾತನಾಡಿ ವಿಜ್ಞಾನ ಇಂದು ವಿಶ್ವದಲ್ಲಿ ಅಘಾದವಾಗಿ ಮುಂದುವರೆದಿದ್ದರೂ ಸಹ ಭಾರತದಂತಹ ದೇಶದಲ್ಲಿ ಇಂದಿಗೂ ಸಹ ಮೂಢನಂಬಿಕೆಗಳು ಪ್ರಚಲಿತದಲ್ಲಿವೆ ಇದನ್ನು ಇಂದಿನ ಸಮೂಹಕ್ಕೂ ಹಿಂದಿನ ತಲೆಮಾರು ಹೇರುತ್ತಿರುವುದು ಸರಿಯಲ್ಲ ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ವೈಚಾರಿಕ ಹಾಗೂ ವೈಜ್ಞಾನಿಕ ಪ್ರಜ್ಞೆ ಇರುತ್ತದೆ. ಅವರ ಪ್ರತಿಭೆ ವಿಕಸನಗೊಳ್ಳಲು ವಿಜ್ಞಾನ ವಸ್ತು ಪ್ರದರ್ಶನಗಳು ಅವಕಾಶ ಮಾಡಿಕೊಟ್ಟಿದೆ. ವಿದ್ಯಾರ್ಥಿಗಳು ಮೂಢನಂಬಿಕೆಗಳಿಂದ ಹೊರಬಂದು ಕಠಿಣ ಪರಿಶ್ರಮದಿಂದ ಯಶಸ್ಸು ಪಡೆಯುವತ್ತ ಗಮನಹರಿಸಬೇಕು ಎಂದು ಕಿವಿಮಾತು ಹೇಳಿದರು.
ಸಾಹಿತಿ ಪತ್ರಕರ್ತ ಕೊರಲಕುಂಟೆ ತಿಪ್ಪೇಸ್ವಾಮಿ ಮಾತನಾಡಿ ವಿದ್ಯಾರ್ಥಿಗಳು ಪ್ರತಿ ವಿಚಾರದಲ್ಲಿಯೂ ಪ್ರಶ್ನೆ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು ಆಗ ಮಾತ್ರ ವಿದ್ಯಾರ್ಥಿಗಳು ಕುತೂಹಲಕಾರಿ ವಿಷಯಗಳನ್ನು ಕಲಿಯಲು ಸಾಧ್ಯವಾಗುತ್ತದೆ ಮುಂದಿನ ದಿನಗಳಲ್ಲಿ ಉತ್ತಮ ವಿಜ್ಞಾನಿ ದೊರೆಯಬಹುದು ಆದರೆ ಉತ್ತಮ ಶಿಕ್ಷಕ ದೊರೆಯಲು ಸಾಧ್ಯವಿಲ್ಲ ಈ ನಿಟ್ಟಿನಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿ ಶಿಕ್ಷಕ ವೃತ್ತಿಯನ್ನು ಉಳಿಸುವ ಜವಾಬ್ದಾರಿ ಎಲ್ಲರ ಹೆಗಲ ಮೇಲಿದೆ ಎಂದರು.
ಕಾರ್ಯಕ್ರಮದಲ್ಲಿ ಇಸಿಓ ತಿಪ್ಪೇಸ್ವಾಮಿ ಬಿ ಆರ್ ಸಿ ಮಂಜುನಾಥ ಬಾಬು ಮಾತನಾಡಿದರು.
ಈ ವೇಳೆ ತಾಲೂಕಿನ ವಿವಿಧ ಶಾಲೆಗಳ ವಿದ್ಯಾರ್ಥಿಗಳು ತಯಾರಿಸಿದ ವಸ್ತು ಪ್ರದರ್ಶನಗಳನ್ನು ವೀಕ್ಷಿಸಿ ಮಾಹಿತಿ ಪಡೆದು ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಶಿಕ್ಷಣ ಇಲಾಖೆಯ ಇಸಿಓ ದೇವೇಂದ್ರಪ್ಪ ತಿಪ್ಪೇಸ್ವಾಮಿ ಮಂಜುನಾಥ್ ರೈತ ದಯಾನಂದ ಮೂರ್ತಿ ಬಸವರಾಜ್ ಮುಖ್ಯ ಶಿಕ್ಷಕ ತಿಪ್ಪೇಸ್ವಾಮಿ ನಾಗಭೂಷಣ್ ಪ್ರದೀಪ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

