ಚಳ್ಳಕೆರೆ : ತಾಲೂಕಿನಲ್ಲಿ ಕಡಲೆ ಬಿತ್ತನೆಗೆ ರೈತರು ಮುಂದಾಗಿದ್ದು ಬಿತ್ತನೆ ಬೀಜಕ್ಕಾಗಿ ರೈತ ಸಂಪರ್ಕ ಕೇಂದ್ರದ ಮುಂದೆ ಮುಂಜಾನೆಯಿಂದ ಕಾಯುವ ಪರಸ್ಪಿತಿ ನಿರ್ಮಾಣವಾಗಿದೆ , ಏಕಕಾಲಕ್ಕೆ ಎಲ್ಲಾ ರೈತರು ಒಟ್ಟಿಗೆ ವಿತರಣಾ ಕೇಂದ್ರಕ್ಕೆ ದೌಡಾಯಿಸುವುದರಿಂದ ಕೊಂಚ ಬಿತ್ತನೆ ಬೀಜ ವಿತರಿಸುವ ಅಧಿಕಾರಿಗಳಿಗೆ ಒತ್ತಡವಾಗಿದೆ ಆದ್ದರಿಂದ ಯಾವುದೇ ರೈತರು ದೃತಿಗೆಡುವುದು ಬೇಡ ಎಲ್ಲಾ ರೈತರಿಗೂ ಬಿತ್ತನೆ ಬೀಜ ನೀಡಲಾಗುತ್ತದೆ ಎಂದು ರೈತ ಸಂಪರ್ಕ ಕೇಂದ್ರ ಸಹಾಯಕ ಅಧಿಕಾರಿ ತಿಪ್ಪೇಸ್ವಾಮಿ ಹೇಳಿದ್ದಾರೆ.
ಅವರು ನಗರದ ರೈತ ಸಂಪರ್ಕ ಕೇಂದ್ರದಲ್ಲಿ ರೈತರಿಗೆ ಬಿತ್ತನೆ ಬೀಜ ವಿತರಿಸಿ ಮಾತನಾಡಿದರು, ತಾಲೂಕಿನ ಕುರುಡಿಹಳ್ಳಿ, ಬಾಲೇನಹಳ್ಳಿ ಸೋಮಗಂದು, ಫೇಲರಹಟ್ಟಿ ಹೀಗೆ ತಾಲೂಕಿನ ಅರ್ಧದಷ್ಟು ರೈತರು ಕಡಲೆ ಬಿತ್ತನೆಗೆ ಮುಂದಾಗಿದ್ದಾರೆ. ಆದ್ದರಿಂದ ರೈತರಿಗೆ ಕಡಲೆ ಬಿತ್ತನೆ ಬೀಜ ಈಗಾಗಲೇ ದಾಸ್ತಾನು ಮಾಡಿದ್ದು, ಎಲ್ಲ ರೈತರಿಗೂ ಬಿತ್ತನೆ ಬೀಜ ನೀಡಲಾಗುವುದು ಎಂದು ಮಾಹಿತಿ ನೀಡಿದರು.
ಇದೆ ಸಂದರ್ಭದಲ್ಲಿ ರೈತರು ಮಾಧ್ಯಮದೊಂದಿಗೆ ಮಾತನಾಡಿ ಸರ್ಕಾರ ರೈತರಿಗೆ ಸಬ್ಸಿಡಿ ದರದಲ್ಲಿ ಬಿತ್ತನೆ ಬೀಜ ನೀಡುವುದು ಮಾರುಕಟ್ಟೆ ದರಕ್ಕಿಂತ ಹೆಚ್ಚಳವಾಗಿದೆ, ಆದ್ದರಿಂದ ಸರ್ಕಾರ ರೈತರನ್ನು ಪರಿಗಣಿಸಿ ಕಡಲೆ ಬಿತ್ತನೆ ಬೀಜವನ್ನು ಮಾರ್ಕೆಟ್ ದರಕ್ಕಿಂತ ಕಡಿಮೆ ದರದಲ್ಲಿ ಅರ್ಹ ಸಬ್ಸಿಡಿಯುಳ್ಳ ರೈತರಿಗೆ ಕಡಿಮೆ ದರದಲ್ಲಿ ಬಿತ್ತನೆ ಬೀಜ ನೀಡಬೇಕೆಂದು ಒತ್ತಾಯ ಮಾಡಿದರು.


