ಈರುಳ್ಳಿ ಬೆಲೆ ಕುಸಿತದಿಂದ ಸಾಲದ ಸುಳಿಗೆ ಸಿಲುಕಿದ ರೈತ
ನಾಯಕನಹಟ್ಟಿ:-ಪಾತಾಳ ಮುಟ್ಟಿದ ಈರುಳ್ಳಿ ಬೆಲೆಯಿಂದ ರೈತಾಪಿ ವರ್ಗ ಕಂಗಾಲಾಗಿದ್ದು, ಮೊದಲೇ ನೀರಿಲ್ಲದೆ ಬರಗಾಲ ಬವಣೆಯಿಂದ ಬಳಲುತ್ತಿರುವ ಚಳ್ಳಕೆರೆ ತಾಲೂಕಿನ ರೈತರಿಗೆ ಈರುಳ್ಳಿ ಬೆಲೆ ನೆಲ ಕಚ್ಚಿರುವುದರಿಂದ ಗಾಯದ ಮೇಲೆ ಬರೆ ಎಳೆದಂತಾಗಿದೆ. ಈರುಳ್ಳಿ ಬೆಳೆದ ರೈತನ ಸಂಕಷ್ಟ ಜೀವನವೇ ದುಸ್ತರಗೊಳಿಸಿದೆ. ಬದುಕಿಗೆ ಆಸರೆಯಾಗಬೇಕಿದ್ದ ಈರುಳ್ಳಿ ಬಾಳಲ್ಲಿ ಕಣ್ಣಿರು ಹಾಕುವಂತೆ ಮಾಡಿದೆ.ಕಳೆದ ತಿಂಗಳಿದ್ದ ಅರ್ಧದಷ್ಟು ಈಗ ಬೆಲೆಯಿಲ್ಲದೆ ಅನ್ನದಾತ ಕಂಗಲಾಗಿದ್ದಾನೆ.
ಹೌದು ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಹೋಬಳಿಯ ಬೋಸದೇವರಹಟ್ಟಿ ಗ್ರಾಮದ ರೈತ ರುದ್ರಮುನಿ ತನ್ನ ಎರಡು ಎಕರೆ ಹೊಲದಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಈರುಳ್ಳಿ ಬೆಳೆದಿದ್ದಾನೆ ಆದರೆ ಈರುಳ್ಳಿ ಬೆಲೆ ಕುಸಿತದಿಂದ ಸಾಲದ ಸುಳಿಗೆ ಸಿಲುಕಿದ್ದಾನೆ,ಬೆಂಗಳೂರು ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ 50ಕೆಜಿ ತುಂಡು ಪ್ಯಾಕೆಟ್ ಗೆ ₹400-₹500ರೂಪಾಯಿ ಇದೆ.ಈರುಳ್ಳಿ ಕಿತ್ತು, ಗ್ರೇಡಿಂಗ್ ಮಾಡಿ ಮಾರುಕಟ್ಟೆಗೆ ಸಾಗಿಸಲು 50 ಕೆಜಿಯ ಪ್ರತಿ ಪಾಕಿಟ್ಗೆ ₹300ರಿಂದ ₹400 ಖರ್ಚು ತಗುಲುತ್ತದೆ. ಕಟಾವು, ಆಳುಗಳ ಖರ್ಚು, ಸಾಗಣೆ ವೆಚ್ಚದ ಹಣವೂ ಮರಳಿ ಬರುವುದಿಲ್ಲ ಹೀಗಾಗಿ ತುಂಬಾ ನಷ್ಟ ಉಂಟಾಗಿದೆ.
ಈರುಳ್ಳಿ ಬೆಲೆ ಕುಸಿತದಿಂದ ರೈತರು ಆರ್ಥಿಕ ನಷ್ಟ ಅನುಭವಿಸುತ್ತಿದ್ದಾರೆ. ಸಾಲಗಾರರಾಗುವ ಭೀತಿ ಎದುರಾಗಿದೆ. ಈರುಳ್ಳಿ ಬೆಳೆ ಬೆಳೆದ ರೈತರು ವಿಷ ಕುಡಿಯುವ ಪರಿಸ್ಥಿತಿಗೆ ತಲುಪಿದ್ದಾರೆ,ಸರ್ಕಾರ ಬೆಲೆ ಕುಸಿತ ತಡೆಯಲು ಬೆಂಬಲ ಬೆಲೆ ನಿಗದಿಪಡಿಸಬೇಕು. ಈರುಳ್ಳಿ ಶೇಖರಿಸಿಡಲು ಸೂಕ್ತವಾದ ಶೈತ್ಯಾಗಾರ ನಿರ್ಮಿಸಬೇಕು. ಮಧ್ಯವರ್ತಿಗಳ ಹಾವಳಿಯನ್ನು ನಿಯಂತ್ರಿಸಿ ರೈತರು ಬೆಳೆದ ಬೆಳೆಗೆ ನ್ಯಾಯಯುತ ಬೆಲೆ ಸಿಗುವಂತೆ ನೋಡಿಕೊಳ್ಳಬೇಕು. ರೈತರು ಬೆಳೆದ ಬೆಳೆಯನ್ನು ಮಾರಾಟ ಮಾಡಲು ಸಮರ್ಪಕ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಬೇಕು’ ಎಂದು ರೈತ ರುದ್ರಮುನಿ ಸರ್ಕಾರಕ್ಕೆ ಒತ್ತಾಯಿಸಿದ್ದಾನೆ.
ಇದೇ ವೇಳೆ ರೈತರಾದ ಅಜ್ಜಯ್ಯ, ಬಂಗಾರಪ್ಪ, ಮಂಜಪ್ಪ, ಲಕ್ಷ್ಮಮ್ಮ, ತಿಪ್ಪಜ್ಜಿ, ಹೊನ್ನಮ್ಮ, ಶಂಕ್ರಪ್ಪ, ರುದ್ರಪ್ಪ, ವೆಂಕಟೇಶ್, ಇದ್ದರು.

