ತಳಕು:- ‘ಎತ್ತ ನೋಡಿದರೂ ಭಕ್ತ ಸಾಗರ,ಉಘೇ, ಉಘೇ ಮಾರಮ್ಮ ಎಂಬ ಘೋಷಣೆ, ಕಲ್ಲಿನಕಂಬ ಹತ್ತಿ ದೀಪ ಹಚ್ಚುತ್ತಿದ್ದಂತೆಯೇ ಮುಗಿಲುಮುಟ್ಟಿದ ಭಕ್ತರ ಜಯಘೋಷ, ಭರದಿಂದ ನಡೆಯುತ್ತಿದ್ದ ಮಂಡಕ್ಕಿ, ಬೆಂಡು, ಬತ್ತಾಸು ವ್ಯಾಪಾರ…
ಈ ದೃಶ್ಯಗಳು ಕಂಡು ಬಂದಿದ್ದು ಚಳ್ಳಕೆರೆ ತಾಲ್ಲೂಕಿನ ತಳಕು ಹೋಬಳಿಯ ಗಡಿಗ್ರಾಮವಾದ ಗೌರಸಮುದ್ರದ ತುಂಬಲು ಪ್ರದೇಶದಲ್ಲಿ ಮಂಗಳವಾರ ಜರುಗಿದ ಮಾರಮ್ಮದೇವಿ ಜಾತ್ರೆಯ ಚಿತ್ರಣ.
ಪ್ರತಿವರ್ಷ ಶ್ರಾವಣವಾಸದ ಕೊನೆಯ ಅಮವಾಸ್ಯೆ ನಂತರ ಬರುವ ಮಂಗಳವಾರ ನಡೆಸಿಕೊಂಡು ಬರುವ ಮಾರಮ್ಮದೇವಿ ಜಾತ್ರೆಗೆ ಈ ವರ್ಷ ನಿರೀಕ್ಷೆಗೂ ಮೀರಿ ಭಕ್ತರು ಆಗಮಿಸಿದ್ದರು. ಬೆಳಗಿನ ಜಾವದಿಂದಲೇ ಭಕ್ತರು ತುಂಬಲು ಕಟ್ಟೆಯನ್ನು ಪ್ರದಕ್ಷಿಣೆ ಹಾಕಿದರು. ಸಂಜೆ ತನಕವೂ ಅಪಾರ ಭಕ್ತರು ದರ್ಶನ ಪಡೆದು ಹಕರೆ ತೀರಿಸಿದರು.
ದೇವಸ್ಥಾನದಲ್ಲಿ ಮಹಾಮಂಗಳಾರತಿ ಸಲ್ಲಿಸಿದ ನಂತರ ದೇವಿ ಮೂಲವಿಗ್ರಹವನ್ನು 4 ಕಿ.ಮೀ. ದೂರದ ತುಂಬಲು ಎಂಬಲ್ಲಿಗೆ ಮೆರವಣಿಗೆಯಲ್ಲಿ ಕರೆದುಕೊಂಡು ಹೋಗಲು ಚಾಲನೆ ನೀಡಲಾಯಿತು. ದಾರಿಯುದ್ದಕ್ಕೂ ಹರಕೆಹೊತ್ತ ಭಕ್ತರು ಕೋಳಿ, ಮೆಣಸು, ವಿವಿಧ ಧಾನ್ಯ, ಈರುಳ್ಳಿಯನ್ನು ತೂರಿದರು. ಉರುಮೆ, ಚಾಮರ, ತಪ್ಪಡೆ, ಡೊಳ್ಳು ವಾದ್ಯಗಳು ಸೇರಿದಂತೆ ಹತ್ತಾರು ಬುಡಕಟ್ಟು ಸಂಸ್ಕೃತಿಗಳು ಗಮನ ಸೆಳೆದವು.
ತೂರಿದ ಮೆಣಸು ಆರಿಸಿಕೊಂಡು ಅನೇಕರು ಮನೆಗೆ ತೆಗೆದುಕೊಂಡು ಹೋದರು. ಅದನ್ನು ಬಳಸಿದರೆ ಚರ್ಮವ್ಯಾಧಿ, ರೋಗರುಜಿನ ಬರುವುದಿಲ್ಲ ಎಂಬ ನಂಬಿಕೆಯಿದೆ. ದೇವಿ ತುಂಬಲು ಪ್ರದೇಶ ಪ್ರವೇಶ ಮಾಡುತ್ತಿದ್ದಂತೆಯೇ ಭಕ್ತರ ಜಯಘೋಷ ಮುಗಿಲು ಮುಟ್ಟಿತು. ಜನಸಂದಣಿ ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು.
ತುಂಬಲು ಕಟ್ಟೆಗೆ ಆಗಮಿಸಿ ಕಟ್ಟೆಯನ್ನು ಪ್ರದಕ್ಷಿಣೆ ಹಾಕಿಸಿದ ನಂತರ ಕಟ್ಟೆಮೇಲೆ ದೇವಿ ಪ್ರತಿಷ್ಠಾಪನೆ ಮಾಡಲಾಯಿತು. ಹರಕೆ ಹೊತ್ತ ಭಕ್ತರು ಬೇವಿನಸೀರೆ ಹಕರೆ, ಬಾಯಿಗೆ ಬೀಗ, ದವಸ-ಧಾನ್ಯ ಅರ್ಪಣೆ, ವಸ್ತ್ರ ಅರ್ಪಿಸಿದರು. ರೈತರು ಜಾನುವಾರುಗಳನ್ನು ಕಟ್ಟೆ ಸುತ್ತಲೂ ಪ್ರದಕ್ಷಿಣೆ ಹಾಕಿಸಿ ಕಾಪಾಡುವಂತೆ ಪ್ರಾರ್ಥಿಸಿದರು.
ಮಧ್ಯಾಹ್ನ ವೇಳೆ ದರ್ಶನ ನೀಡುವ ಕಾರಣಕ್ಕಾಗಿ ಈ ದೇವಿಗೆ ‘ಮಧ್ಯಾಹ್ನ ಮಾರಿ’ ಎಂಬ ಹೆಸರಿಗೆ. ದೊಡ್ಡಪರಿಷೆಯಲ್ಲಿ ಮಾತ್ರ ದೇವಿಯನ್ನು ತುಂಬಲಿಗೆ ಕರೆದುಕೊಂಡು ಬರಲಾಗುತ್ತದೆ. ಮರಿಪರಿಷೆಯಲ್ಲಿ ದೇವಿ ಆಭರಣಗಳನ್ನು ಮಾತ್ರ ತರಲಾಯಿತು.
ವಾಡಿಕೆಯಂತೆ ಸಂಜೆಯಾಗುತ್ತಲೇ ತುಂಬಲಿನಲ್ಲಿ ಯಾರೂ ಉಳಿಯುವಂತಿಲ್ಲ. ಈ ಕಾರಣಕ್ಕೆ ಸಂಜೆ ವೇಳೆಗೆ ಸ್ಥಳ ಖಾಲಿಯಾಗುತ್ತದೆ.ರಾಜ್ಯದ ವಿವಿಧ ಜಿಲ್ಲೆಗಳಿಂದ ಮತ್ತು ನೆರೆಯ ಆಂಧ್ರಪ್ರದೇಶದಿಂದ ಅಪಾರ ಭಕ್ತರು ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕ ಟಿ ರಘುಮೂರ್ತಿ, ಕರ್ನಾಟಕ ರಾಜ್ಯ ದ್ರಾಕ್ಷಿ ಮತ್ತು ವೈನ್ ಬೋರ್ಡ್ ಅಧ್ಯಕ್ಷ ಡಾ. ಬಿ ಯೋಗೇಶ್ ಬಾಬು, ಜಯಲಕ್ಷ್ಮಿ ತಹಸಿಲ್ದಾರ್ ರೇಹಾನ್ ಪಾಷಾ, ಪಟೇಲ್ ಜಿ.ಎಂ. ತಿಪ್ಪೇಸ್ವಾಮಿ ಎತ್ತಿನಹಟ್ಟಿ ಗೌಡ್ರು, ನಿವೃತ್ತ ತಹಸಿಲ್ದಾರ್ ಎನ್ ರಘುಮೂರ್ತಿ, ಡಿವೈಎಸ್ಪಿ
ಟಿ. ರಾಜಣ್ಣ, ತಳಕು ಮತ್ತು ನಾಯಕನಹಟ್ಟಿ ವೃತ ನಿರೀಕ್ಷಕ ಹನುಮಂತಪ್ಪ ಎಂ ಶೀರೇಹಳ್ಳಿ, ತಳಕು ಪಿಎಸ್ಐ .ಕೆ. ಶಿವಕುಮಾರ್, ಸೇರಿದಂತೆ ಸಾವಿರಾರು ಭಕ್ತರು ಉಪಸ್ಥಿತರಿದ್ದರು.

