ಭದ್ರಾ ಮೇಲ್ದಂಡೆ ಯೋಜನೆ: ವರ್ಷಾಂತ್ಯಕ್ಕೆ ಶೇ.90ರಷ್ಟು ಕಾಮಗಾರಿ ಪೂರ್ಣ
ಜಲಸಂಪನ್ಮೂಲ ಸಚಿವ ಗೋವಿಂದ ಎಂ ಕಾರಜೋಳ
ಚಿತ್ರದುರ್ಗ :
ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಯು ಭೂಸ್ವಾಧೀನ ಪ್ರಕ್ರಿಯೆಯಿಂದಾಗಿ ಬಹಳಷ್ಟು ವಿಳಂಬವಾಗುತ್ತಿತ್ತು. ಸದ್ಯ ಭೂ ಸ್ವಾಧೀನ ಪ್ರಕ್ರಿಯೆ ತ್ವರಿತವಾಗಿದ್ದು ವರ್ಷಾಂತ್ಯಕ್ಕೆ ಶೇ.90ರಷ್ಟು ಕಾಮಗಾರಿಯು ಪೂರ್ಣಗೊಳ್ಳಲಿದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಎಂ ಕಾರಜೋಳ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
ಭದ್ರಾ ಮೇಲ್ದಂಡೆ ಯೋಜನೆಯು ರಾಷ್ಟ್ರೀಯ ಯೋಜನೆಯಾಗಿ ಘೋಷಣೆ ಮಾಡಲು ಈಗಾಗಲೇ ಎಲ್ಲ ಪ್ರಕ್ರಿಯೆಗಳು ಮುಕ್ತಾಯವಾಗಿದೆ. ಇದಕ್ಕಾಗಿ ಹಣಕಾಸು ಇಲಾಖೆಯು ಒಪ್ಪಿಗೆ ನೀಡಿದೆ. ಈ ಯೋಜನೆಗೆ ಕೇಂದ್ರ ಸರ್ಕಾರದಿಂದ ರೂ. 9600 ಕೋಟಿ ರೂಪಾಯಿಗಳು ಲಭ್ಯವಾಗಲಿದೆ ಎಂದು ಹೇಳಿದರು.
ಭದ್ರಾ ಮೇಲ್ದಂಡೆ ಯೋಜನೆಯಡಿಯಲ್ಲಿ ಚಿತ್ರದುರ್ಗ ಶಾಖಾ ಕಾಲುವೆ ನಿರ್ಮಾಣಕ್ಕಾಗಿ 2223 ಎಕರೆಯನ್ನು ಭೂಸ್ವಾಧಿನ ಮಾಡಲು 91ಅಧಿಸೂಚನೆ ಹೊರಡಿಸಲಾಗಿದೆ. ಕಂದಾಯ, ಲೋಕೋಪಯೋಗಿ, ಅರಣ್ಯ, ತೋಟಗಾರಿಕೆ ಇಲಾಖೆಗಳ ಜಂಟಿ ಸರ್ವೇ ಸಂದರ್ಭದಲ್ಲಿ ಕಾಮಗಾರಿ ವ್ಯಾಪ್ತಿಯಿಂದ ಹೊರಗಡೆ ಇರುವ 421 ಎಕರೆ ಭೂಮಿಯನ್ನು ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡಲಾಗಿದೆ. ಒಟ್ಟು 1617 ಎಕರೆ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ. ಭೂಸ್ವಾಧೀನಕ್ಕಾಗಿ ರೂ.25 ಕೋಟಿಯನ್ನು 377 ರೈತರಿಗೆ ಪಾವತಿಸಲಾಗಿದೆ.
ಇನ್ನೂ ಬಾಕಿ ಉಳಿದ ಭೂ ಸ್ವಾಧೀನಕ್ಕೆ ರೂ. 75 ಕೋಟಿ ಅನುದಾನವನ್ನು ಆದಷ್ಟು ಶೀಘ್ರದಲ್ಲಿ ಮಂಜೂರು ಮಾಡಲು ಕ್ರಮಹಿಸಲಾಗುವುದು. ಚಿಕ್ಕಮಗಳೂರು ಜಿಲ್ಲೆಯಲ್ಲಿ ಭೂಸ್ವಾಧೀನ ಪ್ರಕ್ರಿಯೆಗೆ ತೊಂದರೆಯಾಗಿದೆ. ಕೆಲವು ಎಂಟು ಜನ ರೈತರು ಭೂಸ್ವಾಧೀನ ಪ್ರಕ್ರಿಯೆಗೆ ಸಹಕಾರ ನೀಡುತ್ತಿಲ್ಲ. ತರೀಕೆರೆ ತಾಲ್ಲೂಕಿನ ರೈತರು ಭೂಸ್ವಾಧೀನ ಪ್ರಕ್ರಿಯೆಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.