ಚಳ್ಳಕೆರೆ :
ಚಿತ್ರದುರ್ಗ ಜಿಲ್ಲೆಯವರಾದ ಎಸ್. ಲಕ್ಷ್ಮಣ ಮಾಜಿ ಅಧ್ಯಕ್ಷರು ಜಿಲ್ಲಾ ಉಪನ್ಯಾಸಕರ ಸಂಘ ಚಿತ್ರದುರ್ಗ ಅವರನ್ನು ಬೀದರ್ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ ) ಉಪ ನಿರ್ದೇಶಕರಾದ ಚಂದ್ರಕಾಂತ ಎಂ ಶಾಹಾಬಾದಕರ್ ರವರು ಸನ್ಮಾನಿಸಿದರು.
ಸನ್ಮಾನಿಸಿ ನಂತರ ಉಪ ನಿರ್ದೇಶಕರು ಮಾತನಾಡಿ ಎಸ್. ಲಕ್ಷ್ಮಣ ಮತ್ತು ನಾನು ಅರ್ಥಶಾಸ್ತ್ರ ಮೌಲ್ಯಮಾಪನ ಕೇಂದ್ರಗಳಲ್ಲಿ ಜೊತೆಗೆ ಕೆಲಸ ನಿರ್ವಹಿಸಿರುತ್ತೇವೆ ಹಾಗೂ ಉಪನ್ಯಾಸಕರ ಬೇಡಿಕೆಗಳ ಈಡೇರಿಕೆಗಾಗಿ ಮೌಲ್ಯಮಾಪನ ಕೇಂದ್ರಗಳಲ್ಲಿ ಸಕ್ರಿಯ ಹೋರಾಟ ಮಾಡುತ್ತಾ ಬಂದಿರುವುದನ್ನು ಗಮನಿಸಿದ್ದೇನೆ ಹಾಗೂ ಚಿತ್ರದುರ್ಗ ಜಿಲ್ಲಾ ಅರ್ಥಶಾಸ್ತ್ರ ವೇದಿಕೆಯಲ್ಲಿಯೂ ಸಹ ಉತ್ತಮ ಕೆಲಸ ನಿರ್ವಹಿಸಿರುತ್ತಾರೆ ಎಂದು ತಿಳಿದಿರುತ್ತೇನೆ ಎಂದು ಹೇಳಿದರು.
ಸನ್ಮಾನಿತ ಎಸ್. ಲಕ್ಷ್ಮಣ ಮಾತನಾಡಿ ಬೀದರ್ ಜಿಲ್ಲೆ ಕರ್ನಾಟಕದ ಕೊನೆಯ ಭಾಗದ ಜಿಲ್ಲೆಯಾಗಿದ್ದು ಆಂಧ್ರ ಮತ್ತು ಮಹಾರಾಷ್ಟ್ರ ರಾಜ್ಯದ ಗಡಿ ಭಾಗವನ್ನೊoದಿದೆ.ಈ ಜಿಲ್ಲೆ ತನ್ನದೇ ಆದ ಸಾಮಾಜಿಕ ಧಾರ್ಮಿಕ ಐತಿಹಾಸಿಕ ಮತ್ತು ವಿಭಿನ್ನ ಭಾಷೆಯ ವೈಶಿಷ್ಟತೆಯನ್ನು ಹೊಂದಿದ ಬಸವಣ್ಣನ ನಾಡು ಈ ಜಿಲ್ಲೆಯಾಗಿದೆ. ಇಲ್ಲಿನ ಕೋಟೆ ಕೊತ್ತಲಗಳು ಹೈದರಾಬಾದ್ ನಿಜಾಮರ ಆಳ್ವಿಕೆಯ ಇತಿಹಾಸವನ್ನು ಪ್ರತಿಬಿಂಬಿಸುತ್ತೇವೆ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಪ್ರವಾಸೋದ್ಯಮ ಇಲಾಖೆ ಗುಲಬರ್ಗಾ ವಿಭಾಗ ಜಂಟಿ ನಿರ್ದೇಶಕ ಡಾ. ಎಸ್.ತಿಪ್ಪೇಸ್ವಾಮಿ ಮಾತನಾಡಿ ನಾನು ಸಹ ಮೂಲತಃ ಪದವಿ ಪೂರ್ವ ಕಾಲೇಜಿನ ಇತಿಹಾಸ ಉಪನ್ಯಾಸಕ. ನಾನು ಪದವಿ ಪೂರ್ವ ಶಿಕ್ಷಣ ಮಂಡಳಿ ಬೆಂಗಳೂರು ಇಲ್ಲಿ ಶಾಖಾಧಿಕಾರಿಯಾಗಿ ಹಾಗೂ ಪದವಿ ಕಾಲೇಜಿನಲ್ಲಿ ಇತಿಹಾಸ ಪ್ರಾಧ್ಯಾಪಕನಾಗಿ ಕೆಲಸ ನಿರ್ವಹಿಸಿರುತ್ತೇನೆ. ಅನಿವಾರ್ಯ ಕಾರಣದಿಂದ ಪ್ರವಾಸೋದ್ಯಮ ಇಲಾಖೆಗೆ ಬಂದಿದ್ದೇನೆ.ಈ ಬಸವಣ್ಣನ ನಾಡಿನಲ್ಲಿ ಸೇವೆ ಸಲ್ಲಿಸುವ ಸೌಭಾಗ್ಯ ನನಗೆ ದೊರೆತಿದ್ದು ತುಂಬಾ ಸಂತೋಷವಾಗಿದೆ.ನನ್ನ ಅಧಿಕಾರ ಅವಧಿಯಲ್ಲಿ ಉತ್ತಮ ಕಾರ್ಯಗಳನ್ನು ಮಾಡಿ ಪ್ರವಾಸೋದ್ಯಮ ಇಲಾಖೆ ಗುಲಬ ರ್ಗಾ ವಿಭಾಗದ ಕೀರ್ತಿಗಾಗಿ ಶ್ರಮಿಸುತ್ತೇನೆ ಎಂದರು.
ಇದೇ ಸಂದರ್ಭದಲ್ಲಿ ಜಂಟಿ ನಿರ್ದೇಶಕರನ್ನು ಸನ್ಮಾನಿಸಲಾಯಿತು.
ಜಿಲ್ಲಾ ಅನುದಾನಿತ ಪದವಿ ಪೂರ್ವ ಕಾಲೇಜುಗಳ ನೌಕರರ ಸಂಘದ ಅಧ್ಯಕ್ಷ ಡಾ. ವಿಜಯಕುಮಾರ್. ಕೆ. ಪಾಟೀಲ್ ಮಾತನಾಡಿ ಎಸ್. ಲಕ್ಷ್ಮಣ ರವರು ತನ್ನ ಜಿಲ್ಲಾಧ್ಯಕ್ಷರ ಅವಧಿಯಲ್ಲಿ ಸಂಘಟನೆಯೊಂದಿಗೆ ಉತ್ತಮ ಕೆಲಸ ನಿರ್ವಹಿಸಿದ್ದಾರೆ ಇವರ ಸೇವೆ ಶ್ಲಾಘನೀಯ ಎಂದರು.
ಕಾರ್ಯದರ್ಶಿ ಶಿವರಾಜ್ ಪಾಟೀಲ್ ಮಾತನಾಡಿ ಲಕ್ಷ್ಮಣ ಮತ್ತು ನಾನು ಅರೆ ಕಾಲಿಕ ಉಪನ್ಯಾಸಕರಿಂದ ಉಪನ್ಯಾಸಕರಾಗಿ ಸಕ್ರಮಗೊಂಡವರು. ಇವರು ಅರೆಕಾಲಿಕ ಉಪನ್ಯಾಸಕರ ಖಾಯಂ ಗತಿಗಾಗಿ ಹಲವಾರು ವರ್ಷಗಳ ಕಾಲ ಸಕ್ರಿಯ ಹೋರಾಟ ಮಾಡಿ ಬಂದವರು. ಅದೇ ರೀತಿ ಇವರು ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉನ್ಯಾಸಕರ ಸಂಘದ ಸಹಕಾರ್ಯದರ್ಶಿ, ಕಾರ್ಯದರ್ಶಿ ಮತ್ತು ಚಿತ್ರದುರ್ಗ ಜಿಲ್ಲಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು ಉಪನ್ಯಾಸಕರ ಬೇಡಿಕೆಗಳ ಈಡೇರಿಕೆಗೆ ಶ್ರಮಿಸಿದ್ದಾರೆ ಎಂದು ಹೇಳಿ, ಉಪನ್ಯಾಸಕರ ವೇತನ ತಾರತಮ್ಯ ನಿವಾರಣೆಗಾಗಿ ಬೆಂಗಳೂರು ಫ್ರೀಡಂ ಪಾರ್ಕ್ ನಲ್ಲಿ ನಡೆದ 18 ದಿನಗಳ ಹೋರಾಟವನ್ನು ಸ್ಮರಿಸಿದರು.
ಈ ಸಂದರ್ಭದಲ್ಲಿ ಸಹಾಯಕ ನಿರ್ದೇಶಕರಾದ ಶಿವಲಿಂಗಪ್ಪ, ಮಾನೆ ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

