ಚಳ್ಳಕೆರೆ :
“ಕವಿಗಳ ಬರಹದ ಮೂಲ ಸ್ಪೂರ್ತಿ ಪ್ರಕೃತಿ”-ಸತ್ಯಪ್ರಭ ವಸಂತಕುಮಾರ್ ಅಭಿಪ್ರಾಯ.
ಚಳ್ಳಕೆರೆ-ಕವಿಗಳ ಬರವಣಿಗೆಯ ಸ್ಪೂರ್ತಿಯ ಮೂಲಸೆಲೆ ಪ್ರಕೃತಿ ಎಂದು ಚಿನ್ಮೂಲದ್ರಿ ಸಾಹಿತ್ಯ ವೇದಿಕೆಯ ಸಾಹಿತಿ ಸತ್ಯಪ್ರಭಾ ವಸಂತಕುಮಾರ್ ಅಭಿಪ್ರಾಯಪಟ್ಟರು.
ಹಿರಿಯೂರು ತಾಲೂಕಿನ ಬಬ್ಬೂರು ಸಮೀಪದ ಕೌಶಿಕ್ ಅವರ “ಮಾಹೆ” ಫಾರ್ಮ್ ಹೌಸ್ ನಲ್ಲಿ ಚಿನ್ಮೂಲದ್ರಿ ಸಾಹಿತ್ಯ ವೇದಿಕೆಯ ಸಂಸ್ಥಾಪಕ ಅಧ್ಯಕ್ಷರಾದ ಶ್ರೀಮತಿ ದಯಾವತಿ ಪುತ್ತೂರ್ಕರ್ ಅವರ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ “ಪರಿಸರ ಮತ್ತು ಬದ್ಧತೆ”ಯ ಕಾರ್ಯಕ್ರಮವನ್ನು ಕುದುರೆಗೆ ಹುಲ್ಲು ತಿನ್ನಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಕುದುರೆ ವಾದಿರಾಜರ ಆರಾಧ್ಯದೈವವಾಗಿದ್ದು ಹಯವದನ ಅವರ ಅಂಕಿತನಾಮವಾಗಿದ್ದು ಶ್ರೀಹರಿಯು ಕುದುರೆಯ ರೂಪದಲ್ಲಿ ದರ್ಶನವಿತ್ತು ಅವರು ಕೊಟ್ಟ ಹುರುಳಿಯ ಆಹಾರವನ್ನು ಸ್ವೀಕರಿಸುತ್ತಿದ್ದನಂತೆ ಇಂದು ಕುದುರೆಗೆ ಹುಲ್ಲು ತಿನ್ನಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದ್ದು ನನಗೆ ಧನ್ಯತೆ ಕೊಟ್ಟಿದೆ ಎಂದರು.
ಪ್ರಕೃತಿ ಮತ್ತು ಮನುಷ್ಯನ ನಡುವೆ ಸಾಮರಸ್ಯದ ಕೊರತೆ ಇದ್ದು ಅದನ್ನು ಪಾಲಿಸಿದಲ್ಲಿ ಮಾತ್ರ ನಾವು ಉಳಿದೆವು.ಆದ್ದರಿಂದ ಇಂದು ಮಾನವ ನಿಸರ್ಗದೊಂದಿಗೆ ಹೊಂದಾಣಿಕೆಯ ಜೀವನ ನಡೆಸಬೇಕಿದೆ ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ.ಬಸವರಾಜ್ ಹರ್ತಿಸರ್ ಅವರು ಸಾಹಿತ್ಯ ಮತ್ತು ಪ್ರಕೃತಿಯ ನಡುವೆ ಅವಿನಾಭಾವ ಸಂಬಂಧವಿದ್ದು ಇವುಗಳ ಪ್ರತಿಫಲವಾಗಿಯೇ ಇಂದು ಅನೇಕ ಸಾಹಿತ್ಯ ಕೃತಿಗಳನ್ನು ಕಾಣುತ್ತೇವೆ.ಇಂತಹ ಮನೋಹರವಾದ ತೋಟದ ಮನೆಯ ಆವರಣದಲ್ಲಿ ಸಾಹಿತ್ಯಿಕ ಕಾರ್ಯಕ್ರಮದ ಆಯೋಜನೆ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಕಾರ್ಯಕ್ರಮದ ನಿರೂಪಣೆಯನ್ನು ವಿನಾಯಕ ಅವರು ಮಾಡಿದರು,ತಿಪ್ಪಿರಮ್ಮ ಸ್ವಾಗತಿಸಿದರೆ ನಿರ್ಮಲ ಭಾರದ್ವಾಜ್ ವಂದಿಸಿದರು. ಕಾರ್ಯಕ್ರಮದಲ್ಲಿ ದಯಾವತಿ ಪುತ್ತೂರ್ಕರ್, ಆಕಾಶವಾಣಿಯ ನಿರೂಪಕ ನವೀನ್ ಮಸ್ಕಲ್,ನವೀನ್ ಸಜ್ಜನ್,ರಂಗಲಕ್ಷ್ಮೀ ಸೇರಿದಂತೆ ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು.

