ದಕ್ಷಿಣ ಕಾಶಿ ಶ್ರೀ ನುಂಕಮಲೇ ಸಿದ್ದೇಶ್ವರ ಜಾತ್ರೆ ಪ್ರಯುಕ್ತವಾಗಿ ವೈಭವದಿಂದ ನಡೆದ ತುಪ್ಪದಮ್ಮ ದೇವಿ ಸಿಡಿ ಉತ್ಸವ
ಮೊಳಕಾಲ್ಮುರು:-ತಾಲೂಕಿನ ಆರಾಧ್ಯ ದೈವ ಹಾಗೂ ದಕ್ಷಿಣ ಕಾಶಿ ಎಂದೇ ಹೆಸರಾಗಿರುವ ಹಾನಗಲ್ ಗ್ರಾಪಂ ವ್ಯಾಪ್ತಿಯ ನುಂಕೆಮಲೆ ಬೆಟ್ಟದ ಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದ ಪ್ರಯುಕ್ತ ಶುಕ್ರವಾರ ಸಂಜೆ ತುಪ್ಪದಮ್ಮ ದೇವಿಯ ಸಿಡಿ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಕಳೆದ ನಾಲ್ಕು ದಿನಗಳಿಂದಲೂ ನಾನಾ ಧಾರ್ಮಿಕ ಆಚರಣೆಗಳನ್ನು ಜಾತ್ರಾ ಮಹೋತ್ಸವದ ಪ್ರಯುಕ್ತ ನಡೆಸಲಾಯಿತು. ಶುಕ್ರವಾರ ಬೆಳಿಗ್ಗೆ ತುಪ್ಪದಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಸಂಜೆ ದೇವಿಯ ಸಿಡಿಕಂಬವನ್ನು ನಾನಾ ಬಗೆಯ ಹೂಗಳಿಂದ ಆಕರ್ಷಕವಾಗಿ ಅಲಂಕರಿಸಲಾಗಿತ್ತು.
ಸಿಡಿಯಲ್ಲಿ ಪಾಲ್ಗೊಂಡಿದ್ದ ಸಾವಿರಾರು ಭಕ್ತರು ತುಪ್ಪದು ದೇವಿಗೆ ಹಾಗೂ ಕಾಲಭೈರವೇಶ್ವರನಿಗೆ ಜೈಕಾರ ಹಾಕುತ್ತಾ ಭಕ್ತಿ ಸಮರ್ಪಿಸಿದರು. ಸಿಡಿ ಕಂಬ ಏರಿದ ವ್ಯಕ್ತಿಯು ಮೂರು ಸುತ್ತು ಪ್ರದಕ್ಷಿಣೆ ಮುಗಿಸುವವರೆಗೂ ಜೈಕಾರಗಳ ಹರ್ಷೋದ್ಗಾರ ನಡೆಸಿದ ಭಕ್ತರು ದೇವರಿಗೆ ಕೈಮುಗಿದು ತಮ್ಮ ಇಷ್ಟಾರ್ಥಗಳನ್ನು ನೆರವೇರಿಸುವಂತೆ ಹರಕೆ ಮಾಡಿಕೊಳ್ಳುತ್ತಿದ್ದರು.
ಜಾತ್ರೆಯಲ್ಲಿ ಹರಕೆ ಹೊತ್ತ ಭಕ್ತರು ಬೇವಿನ ಸೀರೆ ತೊಟ್ಟು ಪೂಜೆ ಸಲ್ಲಿಸುತ್ತಿದ್ದದ್ದು ಕಂಡು ಬಂತು. ಸಿಡಿಕಂಬಕ್ಕೆ ಬಾಳೆಹಣ್ಣು, ಮೆಣಸು ಎರಚುತ್ತಿದ್ದರು.

