“ಉನ್ನತ ಸಾಧನೆಗೆ ಕಠಿಣ ಪರಿಶ್ರಮ ಅಗತ್ಯ”:- ಶ್ರೀಶಾರದಾಶ್ರಮದ ಮಾತಾಜೀ ತ್ಯಾಗಮಯೀ ಹೇಳಿಕೆ.
ಚಳ್ಳಕೆರೆ:-ಉನ್ನತ ಸಾಧನೆಗೆ ಕಠಿಣ ಪರಿಶ್ರಮ ಅಗತ್ಯ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ತ್ಯಾಗಮಯೀ ಅವರು ಅಭಿಪ್ರಾಯಪಟ್ಟರು.
ನಗರದ ಬೆಂಗಳೂರು ರಸ್ತೆಯ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದಲ್ಲಿ ನಗರದ ಎಸ್ ಆರ್ ಎಸ್ ಪ್ರೌಢಶಾಲೆಯ 9ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ “ವ್ಯಕ್ತಿತ್ವ ನಿರ್ಮಾಣಕಾರಿ ತರಗತಿ” ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು “ವಿದ್ಯಾರ್ಥಿ ಜೀವನ ಎನ್ನುವುದು ತಪಸ್ಸಿನ ರೀತಿಯ ಜೀವನವಾಗಿದ್ದು ಇದರಲ್ಲಿ ಯಶಸ್ಸಿಗಳಾಗಲು ವಿದ್ಯಾರ್ಥಿಗಳಾದವರು ಉನ್ನತ ಮಟ್ಟದ ಗುರಿಯನ್ನು ಇಟ್ಟುಕೊಂಡು ಕಠಿಣ ಪರಿಶ್ರಮ ಹಾಕಿದರೆ ಖಂಡಿತವಾಗಿಯೂ ಯಶಸ್ವಿಯಾಗಬಹುದು ಎಂದು ತಿಳಿಸಿದರು.
‘ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿದೆ’, ನಿತ್ಯ ದಿನಚರಿಯಲ್ಲಿ ವಿದ್ಯಾರ್ಥಿಗಳು “ವೈಯಕ್ತಿಕ ಶಿಸ್ತು, ಸಮಯಪ್ರಜ್ಞೆ, ಸಕಾರಾತ್ಮಕ ಮನೋಭಾವ, ಗುರು-ಹಿರಿಯರ ಮೇಲೆ ಗೌರವದ ಭಾವನೆ, ಮಹಾತ್ಮರ ಜೀವನ ಮತ್ತು ಸಂದೇಶಗಳ ಅಧ್ಯಯನ,ಭಜನೆ ಮತ್ತು ಸತ್ಸಂಗ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಶ್ರೀಶಾರದಾಶ್ರಮದ ಸ್ವಯಂಸೇವಕ ಯತೀಶ್ ಎಂ ಸಿದ್ದಾಪುರ ಮಾತನಾಡಿ:- ವಿಶ್ವವಿಖ್ಯಾತ ಸ್ವಾಮಿ ವಿವೇಕಾನಂದರ ಜೀವನ ಮತ್ತು ಸಂದೇಶಗಳು ಚೈತನ್ಯದಾಯಕವಾಗಿದ್ದು ಅವುಗಳನ್ನು ನಿತ್ಯ ಓದುವ ಮತ್ತು ಕೇಳುವ ಮೂಲಕ ಸಮರ್ಥ ವ್ಯಕ್ತಿತ್ವವನ್ನು ರೂಪಿಸಿಕೊಂಡು ಉತ್ತಮ ರಾಷ್ಟ್ರವನ್ನು ನಿರ್ಮಿಸಬಹುದು ಎಂದು ತಿಳಿಸಿದರು.ಈ ಪ್ರವಚನ ಕಾರ್ಯಕ್ರಮಕ್ಕೆ ಮೊದಲು ಶ್ರೀಶಾರದಾಶ್ರಮದ ಸದ್ಭಕ್ತ ಯತೀಶ್ ಎಂ ಸಿದ್ದಾಪುರ ಅವರು ವಿದ್ಯಾರ್ಥಿಗಳಿಗೆ ವಿವಿಧ ಭಜನೆಗಳನ್ನು ಹೇಳಿಕೊಟ್ಟರು.ಈ ಕಾರ್ಯಕ್ರಮದಲ್ಲಿ ಎಸ್ ಆರ್ ಎಸ್ ಪ್ರೌಢಶಾಲೆಯ ಶಿಕ್ಷಕರಾದ ಅಶ್ವಿನಿ, ಸುಷ್ಮಾ, ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಪಿ.ಎಸ್ ಮಾಣಿಕ್ಯ ಸತ್ಯನಾರಾಯಣ, ಮಾನ್ಯ, ಸಂತೋಷಕುಮಾರ್ ಅಗಸ್ತ್ಯ,ಜಯಾದಿತ್ಯ, ಸೇರಿದಂತೆ ವಿದ್ಯಾರ್ಥಿಗಳು ಭಾಗವಹಿಸಿದ್ದರು. ವರದಿ:-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.