“ಧನುರ್ಮಾಸದಲ್ಲಿ ಶ್ರೀವಿಷ್ಣು ಸಹಸ್ರನಾಮ ಪಠಣಕ್ಕೆ ಬಹಳ ಮಹತ್ವವಿದೆ”:- ಶ್ರೀಶಾರದಾಶ್ರಮದ ಸದ್ಭಕ್ತೆ ಯಶೋಧಾ ಪ್ರಕಾಶ್ ಅಭಿಮತ.
ಚಳ್ಳಕೆರೆ:-ಹಿಂದೂ ಪಂಚಾಂಗದಲ್ಲಿನ ಹನ್ನೆರಡು ಮಾಸಗಳಲ್ಲಿ ಬರುವ ಧನುರ್ಮಾಸದಲ್ಲಿ ಶ್ರೀವಿಷ್ಣು ಸಹಸ್ರನಾಮ ಪಠಣಕ್ಕೆ ಬಹಳ ಮಹತ್ವವಿದೆ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸದ್ಭಕ್ತೆ ಶ್ರೀಮತಿ ಯಶೋಧಾ ಪ್ರಕಾಶ್ ಅಭಿಪ್ರಾಯಪಟ್ಟರು.
ಶಿವನಗರದ ತಮ್ಮ ನಿವಾಸದಲ್ಲಿ ಧನುರ್ಮಾಸದ ಪ್ರಯುಕ್ತ ಆಯೋಜಿಸಿದ್ದ ಸಾಮೂಹಿಕ ಶ್ರೀವಿಷ್ಣು ಸಹಸ್ರನಾಮ ಪಠಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಸೂರ್ಯನು ವೃಶ್ಚಿಕ ರಾಶಿಯಿಂದ ಧನುರಾಶಿಗೆ ಪ್ರವೇಶಿಸಿ ಅಲ್ಲಿ ಒಂದು ತಿಂಗಳ ಕಾಲ ಇರುವ ಅವಧಿಯನ್ನು “ಧನುರ್ಮಾಸ”ಎಂದು ಕರೆಯಲಾಗುತ್ತದೆ.
ಧನುರ್ಮಾಸವು ಅಶುಭಕರವೆಂಬ ನಂಬಿಕೆಯಿಂದ ಮದುವೆ, ಗೃಹಪ್ರವೇಶ ಮುಂತಾದ ಕಾರ್ಯಕ್ರಮಗಳನ್ನು ಮಾಡುವುದಿಲ್ಲ. ಬದಲಾಗಿ ಈ ಮಾಸವಿಡೀ ಮಹಾವಿಷ್ಣುವಿನ ಆರಾಧನೆಯಲ್ಲೇ ಕಳೆಯುತ್ತಾರೆ. ಧನುರ್ಮಾಸದಲ್ಲಿ ವಿಶೇಷವಾಗಿ ಬೆಳಗ್ಗೆ ವಿಷ್ಣು ಸಹಸ್ರನಾಮ, ಪುರುಷಸೂಕ್ತ, ವಿಷ್ಣುಸೂಕ್ತ, ನಾರಾಯಣ ಉಪನಿಷತ್ ಅನ್ನು ಪಠಿಸಲಾಗುತ್ತದೆ. ಉತ್ಥಾನ ದ್ವಾದಶಿಯಂದು ಯೋಗನಿದ್ರೆಯಿಂದ ಏಳುವ ಮಹಾವಿಷ್ಣುವಿಗೆ ಧನುರ್ಮಾಸವು ಅರುಣೋದಯದ ಕಾಲ ಎನ್ನಲಾಗುತ್ತದೆ.
ಹಾಗಾಗಿ ಈ ಮಾಸವು ಶ್ರೀಹರಿಯ ಪೂಜೆಗೆ ಶ್ರೇಷ್ಠವಾದ ಕಾಲ ಎನಿಸಿದೆ. ಮಹಾವಿಷ್ಣುವಿನ ಜೊತೆ ಮಹಾಲಕ್ಷ್ಮೀಯನ್ನು ಪೂಜಿಸುವುದರಿಂದ ಸಂಪತ್ತು ಒಲಿಯುತ್ತದೆ ಎಂಬ ನಂಬಿಕೆಯಿದೆ ಎಂದು ತಿಳಿಸಿದರು. ಪಾಂಡವರು ಧನುರ್ಮಾಸದ ಪೂಜೆ ಮಾಡಿ ಕುರುಕ್ಷೇತ್ರ ಯುದ್ದದಲ್ಲಿ ಜಯ ಸಾಧಿಸಿದರೆಂದು ಹೇಳಲಾಗುತ್ತದೆ. ಧನುರ್ಮಾಸದ ಆಚರಣಿಯಲ್ಲಿ ಆಧ್ಯಾತ್ಮಿಕ, ವೈಜ್ಞಾನಿಕ, ಭಾವನಾತ್ಮಕ ಅಂಶಗಳೆಲ್ಲ ಸೇರಿವೆ.ದೇವರನ್ನು ಧ್ಯಾನಿಸಲು ಪೂಜಿಸಲು ಇದು ಶ್ರೇಷ್ಠ ಮಾಸವಾಗಿದೆ ಎಂದು ಧನುರ್ಮಾಸದ ಮಹತ್ವದ ಬಗ್ಗೆ ವಿಶೇಷ ಮಾಹಿತಿಯನ್ನು ನೆರೆದ ಭಕ್ತರಿಗೆ ಹೇಳಿದರು.
ಈ ಪ್ರವಚನ ಕಾರ್ಯಕ್ರಮಕ್ಕೆ ಮೊದಲು ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ ಶ್ರೀವಿಷ್ಣು ಸಹಸ್ರನಾಮ ಪಠಣ, ದೇವಿಸ್ತುತಿ ಪಾರಾಯಣ, ವಿಶೇಷ ಭಜನೆ, ಶ್ರೀಶಾರದಾದೇವೀ ಜೀವನಗಂಗಾ ಗ್ರಂಥ ಪಾರಾಯಣ ಕಾರ್ಯಕ್ರಮ ನಡೆಯಿತು.ಈ ಸಂದರ್ಭದಲ್ಲಿ “ಸುದ್ದಿ ಗಿಡುಗ” ದಿನಪತ್ರಿಕೆಯಲ್ಲಿ ಪ್ರಕಟವಾದ ಶ್ರೀಮಾತೆ ಶಾರದಾದೇವಿ ಅವರ ಜೀವನ ಮತ್ತು ಸಂದೇಶಗಳನ್ನು ಒಳಗೊಂಡ ಲೇಖನವನ್ನು ಬಿಡುಗಡೆ ಮಾಡಿ ಭಕ್ತರಿಗೆ ಹಂಚಲಾಯಿತು.
ಈ ಪಾರಾಯಣ ಕಾರ್ಯಕ್ರಮದಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಜಯಶೀಲಮ್ಮ, ಪಿ.ಭಾಗ್ಯಲಕ್ಷ್ಮೀ, ಲೀಲಾವತಿ, ದ್ರಾಕ್ಷಾಯಣಿ,ವೀರಮ್ಮ, ಶಾಂತಮ್ಮ, ವಿಮಲಾ ನಾಗರಾಜ್,ಕವಿತಮ್ಮ, ಪಿ.ಎಸ್ ಮಾಣಿಕ್ಯ ಸತ್ಯನಾರಾಯಣ, ಯತೀಶ್ ಎಂ ಸಿದ್ದಾಪುರ,ಕೆ.ಎಸ್, ವೀಣಾ, ವಿಜಯಲಕ್ಷ್ಮೀ, ರಶ್ಮಿ ರಮೇಶ್, ನಾಗರತ್ನಮ್ಮ, ಗೀತಾಲಕ್ಷ್ಮೀ, ಸಂಗೀತ,ರಶ್ಮಿ ವಸಂತ, ಕೃಷ್ಣವೇಣಿ, ಶೈಲಜ,ಜಯಮ್ಮ, ಯಶಸ್ವಿ,ಮಂಗಳ ಸೇರಿದಂತೆ ಶ್ರೀಶಾರದಾಶ್ರಮದ ಸದ್ಭಕ್ತರು ಪಾಲ್ಗೊಂಡಿದ್ದರು.