“ಉತ್ತಮ ಸಾಧನೆಗೆ ಮನೋನಿಗ್ರಹ ಮುಖ್ಯ”:- ಚೇತನಕುಮಾರ್ ಅನಿಸಿಕೆ. ಚಳ್ಳಕೆರೆ:-ಉತ್ತಮ ಸಾಧನೆಗೆ ಮನಸ್ಸಿನ ನಿಗ್ರಹ ಮುಖ್ಯ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸ್ವಯಂಸೇವಕ ಚೇತನಕುಮಾರ್ ಅಭಿಪ್ರಾಯಪಟ್ಟರು. ನಗರದ ಬೆಂಗಳೂರು ರಸ್ತೆಯ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದಲ್ಲಿ ಬಾಪೂಜಿ ಆರ್ಯುವೇದ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ “ವ್ಯಕ್ತಿತ್ವ ನಿರ್ಮಾಣಕಾರಿ ತರಗತಿ” ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. “ಮನಸ್ಸೇ ನಮ್ಮ ಉನ್ನತಿ-ಅವನತಿಗೆ ಕಾರಣವಾಗುತ್ತದೆ, ಇದರ ಸಮರ್ಪಕ ನಿಯಂತ್ರಣದಿಂದ ಉನ್ನತ ಮಟ್ಟದ ಗುರಿಯನ್ನು ಸಾಧಿಸಿ ಅದ್ಭುತವಾದದ್ದನ್ನು ಸಾಧಿಸುವ ಶಕ್ತಿ ಮನಸ್ಸಿಗಿದೆ.ಆದ್ದರಿಂದ ಮನಸ್ಸಿನ ಶಕ್ತಿಯನ್ನು ವಿವಿಧ ಕಡೆ ಹರಿದು ಹಂಚಿಹೋಗಲು ಬಿಡದೆ ಒಂದೇ ಕಡೆ ಕೇಂದ್ರೀಕರಿಸುವುದರಿಂದ ಮಹತ್ವದ ಕಾರ್ಯಗಳು ಸಾಕಾರಗೊಳ್ಳುತ್ತವೆ. ಇಂದ್ರೀಯಗಳ ಸಮರ್ಥ ನಿಗ್ರಹದಿಂದ ನಾವು ನಮ್ಮ ಮನಸ್ಸನ್ನು ಗುರಿಯ ಕಡೆಗೆ ಹರಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.ಇಂತಹ ಮನಸ್ಸನ್ನು ನಿಯಂತ್ರಿಸಲು ಭಜನೆ,ಧ್ಯಾನ, ಪ್ರಾರ್ಥನೆ ಮತ್ತು ಸತ್ಸಂಗ ಕಾರ್ಯಕ್ರಮಗಳು ನೆರವಾಗುತ್ತವೆ, ಇವುಗಳನ್ನು ದಿನಚರಿಯಲ್ಲಿ ರೂಢಿಸಿಕೊಳ್ಳುವ ಪ್ರಯತ್ನ ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.ಈ ಉಪನ್ಯಾಸಕ್ಕೆ ಮೊದಲು ಶ್ರೀಶಾರದಾಶ್ರಮದ ಸದ್ಭಕ್ತರಾದ ಯತೀಶ್ ಎಂ ಸಿದ್ದಾಪುರ ಅವರು ಭಜನಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು.ಈ ವ್ಯಕ್ತಿತ್ವ ನಿರ್ಮಾಣಕಾರಿ ತರಗತಿ ಕಾರ್ಯಕ್ರಮದಲ್ಲಿ ಶ್ರೀಶಾರದಾಶ್ರಮದ ಸ್ವಯಂಸೇವಕರಾದ ಸಂತೋಷಕುಮಾರ್, ಡಾ.ಭೂಮಿಕ, ಜಯಾದಿತ್ಯ, ಮಾನ್ಯ,ಮಾನಸ, ಪುಷ್ಪ,ಸುಕೃತಿ,ಶ್ರೀಮತಿ ಯಶೋಧಾ ಪ್ರಕಾಶ್, ಕೆ.ಎಸ್.ವೀಣಾ, ಮಂಜುಳ ಉಮೇಶ್, ಸೇರಿದಂತೆ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.