ಸಂಭ್ರಮದಿಂದ ಜರುಗಿದ ಮೈಲನಹಳ್ಳಿ ಮೊಹರಂ
ಚಳ್ಳಕೆರೆ: ತಾಲೂಕಿನ ಮೈಲಹಳ್ಳಿಯಲ್ಲಿ ಹಿಂದೂ ಮುಸ್ಲಿಂ ಗಳ ಭಾವೈಕ್ಯತೆ ಹಬ್ಬ ಮೊಹರಂ ಸಡಗರ ಸಂಭ್ರಮದಿಂದ ನಡೆಯಿತು. ಮಂಗಳವಾರ ಸಂಜೆಯಿಂದ ಗ್ರಾಮಸ್ಥರು ಮರಗಳನ್ನು ಸಂಗ್ರಹಿಸಿ, ಮಸೀದಿಯ ಮುಂದಿನ ಅಳಾಯಿ ಕುಣಿಯಲ್ಲಿ ಜೋಡಿಸಿದರು. ರಾತ್ರಿ ಎಂಟೆ ಗಂಟೆ ಸುಮಾರಿಗೆ ಮುಂಜಾನೆಯಿಂದ ಒಂದೊತ್ತಿನ ಹರಕೆ ಹೊತ್ತ ಭಕ್ತರು ಪಾನಕವನ್ನು ಮೊಹರಂ ಗುಡಿಗೆ ತಂದು ಸಮರ್ಪಿಸಿ ಹರಕೆ ತಿರಿಸಿದರು. ನಂತರ ಅಲಾಯಿ ಕುಣಿಯಲ್ಲಿ ಸಂಗ್ರಹಸಿದ್ದ ಕಟ್ಟಿಗೆಗೆ ಅಗ್ನಿ ಸ್ಪರ್ಶ ಮಾಡಿದರು. ರಾತ್ರಿಯೆಲ್ಲ ಕಟ್ಟಿಗೆ ದಹಿಸಿ ಮುಂಜಾನೆ ಮೂರರ ಸುಮಾರಿಗೆ ಕೆಂಡ ಸಿದ್ಧವಾಯಿತು. ಮೊದಲಿಗೆ ದೇವರುಗಳನ್ನು ಹೊತ್ತ ಮುಸ್ಲಿಂ ಸಮುದಾಯದ ಪೂಜಾರಿಗಳು ನಂತರ ದೇವರುಗಳನ್ನು ಹೊತ್ತ ಹಿಂದೂ ಬಾಂಧವರು ನಿಗಿ-ನಿಗಿ ಜಳಪಿಸುತ್ತಿದ್ದ ಕೆಂಡ ತುಳಿಯುವ ಮೂಲಕ ಹರಕೆ ಸಲ್ಲಿಸಿದರು. ಮುಂಜಾನೆ ಆರರಿಂದ ಗ್ರಾಮದ ಎಲ್ಲಾ ಬೀದಿಗಳಲ್ಲಿ ದೇವರು ಹೊತ್ತ ಯುವಕರು ಸಂಚರಿಸಿದರು. ಮನೆಯ ಅಂಗಳದಲ್ಲಿ ಬಂದ ದೇವರುಗಳನ್ನು ಜನ ಭಯ ಭಕ್ತಿ ಭಾವದಿಂದ ನಮಿಸಿ ಪೂಜಿಸಿದರು. ಸಂಜೆಯಾಗುತ್ತಿದ್ದಂತೆ ಗ್ರಾಮದ ಯುವಕರು ಹಲಗೆ ತಪ್ಪಡೆಗಳನ್ನ ಹೊಡೆಯುತ್ತಾ, ಅಲಾಯಿ ಕುಣಿಯ ಸುತ್ತ ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು. ದೇವರುಗಳನ್ನು ಹೊತ್ತ ಯುವಕರು ಜನರಿದ್ದಯೇ ಹೋಗಿ ಆಶೀರ್ವಾದಿಸಿದರು. ಕೊನೆಗೆ ಅಲಾಯಿ ಕುಣಿ ಮುಚ್ಚಿದ ಬಳಿಕ ದೇವರುಗಳನ್ನು ಮೂರು ಬಾರಿ ಪ್ರದಕ್ಷಿಣೆ ನಡೆಸಿ, ಸಮೀಪದ ನದಿಯಲ್ಲಿ ವಿಸರ್ಜಿಸಿದರು. ಇಲ್ಲಿಗೆ ಮೊಹರಂ ಹಬ್ಬ ಕೊನೆಗೊಂಡಿತು.