ಬಾಲ್ಯ ವಿವಾಹ ನಿಯಂತ್ರಿಸಿದರೆ ಆರೋಗ್ಯಪೂರ್ಣ ಸಮಾಜ ನಿರ್ಮಿಸಲು ಸಾಧ್ಯ: ಡಿವೈಎಸ್ಪಿ.ಟಿ.ಬಿ.ರಾಜಣ್ಣ
ಮಡಿಲು ಸಂಸ್ಥಯಿಂದ ಬಾಲ್ಯ ವಿವಾಹ ನಿರ್ಮೂಲನೆ ಹಾಗೂ ಪೋಕ್ಸೋ ಕಾಯ್ದೆ ಕುರಿತು ಉಪನ್ಯಾಸ
ಚಳ್ಳಕೆರೆ : ಸಾರ್ವಜನಿಕರು, ಪ್ರಜ್ಞಾವಂತರು ಬಾಲ್ಯ ವಿವಾಹ ಪದ್ಧತಿಯನ್ನು ನಿರ್ಮೂಲನೆಗೊಳಿಸಲು ಸರ್ಕಾರದೊಂದಿಗೆ ಕೈಜೋಡಿಸಿ, ಆರೋಗ್ಯಪೂರ್ಣ ಸಮಾಜ ನಿರ್ಮಿಸಲು ಸಾಧ್ಯ ಎಂದು ಚಳ್ಳಕೆರೆ ಡಿವೈಎಸ್ಪಿ ಟಿ.ಬಿ.ರಾಜಣ್ಣ ತಿಳಿಸಿದರು.
ತಾಲೂಕಿನ ಗೋಪನಹಳ್ಳಿ ಗ್ರಾಮದಲ್ಲಿ ಮಡಿಲು ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆ ವತಿಯಿಂದ ಬಾಪೂಜಿ ಗ್ರಾಮಾಂತರ ಪ್ರೌಢಶಾಲೆಯಲ್ಲಿ ಬಾಲ್ಯ ವಿವಾಹ ಹಾಗೂ ಪೋಕ್ಸೋ ಕಾಯ್ದೆ ಕುರಿತು ಕಾನೂನು-ಅರಿವು ಕಾರ್ಯಕ್ರಮದಲ್ಲಿ ಗಿಡಕ್ಕೆ ನೀರು ಎರೆಯುವುದರ ಮೂಲಕ ಚಾಲನೆ ನೀಡಿ ಮಾತನಾಡಿದರು ದೇಶದಲ್ಲಿ ಬಾಲ್ಯ ವಿವಾಹವನ್ನು ನಿಷೇಧಿಸಲಾಗಿದ್ದರೂ ಸಂಪೂರ್ಣ ನಿಯಂತ್ರಣಕ್ಕೆ ತರಲು ಸಾಧ್ಯವಾಗಿಲ್ಲ, ಬಾಲ್ಯ ವಿವಾಹದಿಂದ ಮಕ್ಕಳ ಜನನ ಮತ್ತು ಶಿಶು ಮರಣ ಧರ ಕಡಿಮೆಯಾಗುತ್ತದೆ ಎಂದರು.
ಹುಡುಗಿಯರಿಗೆ 18 ಹಾಗೂ ಹುಡುಗರಿಗೆ 21 ವರ್ಷವೆಂದು ವಿವಾಹಕ್ಕೆ ವಯಸ್ಸನ್ನು ನಿಗದಿಪಡಿಸಲಾಗಿದ್ದರೂ ಸಹ ಬಾಲ್ಯ ವಿವಾಹವನ್ನು ಮಾಡುತ್ತಲೇ ಇದ್ದಾರೆ. ಬಾಲ್ಯ ವಿವಾಹವನ್ನು ನಡೆಸುವವರಿಗೆ ಕಠಿಣ ಶಿಕ್ಷೆಗೆ ಗುರಿಪಡಿಸಲಾಗುವುದು ಅಲ್ಲದೆ ಅಂತಹವರನ್ನು ಬಂಧಿಸಲು ಹಿಂಜರಿಯುವುದಿಲ್ಲ, ಒಂದು ವೇಳೆ ತಮ್ಮ ಸುತ್ತ ಮುತ್ತಲು ಯಾವುದೇ ಬಾಲ್ಯ ವಿವಾಹ ನಡೆಯುವ ಬಗ್ಗೆ ಸಾರ್ವಜನಿಕರ ಗಮನಕ್ಕೆ ಬಂದಲ್ಲಿ ಕೂಡಲೆ 1098 ಸಹಾಯವಾಣಿ ಉಚಿತ ಕರೆಗೆ ಮಾಹಿತಿ ನೀಡಿ, ಮಾಹಿತಿ ನೀಡುವವರ ವಿವರವನ್ನು ಸಂಪೂರ್ಣ ಗೌಪ್ಯವಾಗಿಡಲಾಗುವುದು. ಎಂದು ತಿಳಿಸಿದರು.
ಬಾಲ್ಯ ವಿವಾಹಕ್ಕೆ ಕಡಿವಾಣ ಹಾಕಲು ಸರ್ಕಾರ ಹಾಗೂ ಸಂಘ ಸಂಸ್ಥೆಗಳು ವಿವಿಧ ಇಲಾಖೆಗಳ ಅಧಿಕಾರಿಗಳು ಮುಂದಾಗುತ್ತಿದ್ದಾರೆ. ಇದಕ್ಕಾಗಿ ಪೋಕ್ಸೋ ಹಾಗೂ ಬಾಲ್ಯ ವಿವಾಹದ ಕಾನೂನು ಅರಿವು ಎನ್ನುವ ಕಾರ್ಯಕ್ರಮ ಕೈಗೊಂಡಿದ್ದಾರೆ. ಈ ಮೂಲಕ ತಾಲ್ಲೂಕಿನ ಶಾಲಾ, ಕಾಲೇಜು, ಹಾಸ್ಟೆಲ್‌ಗಳ ಮಕ್ಕಳಿಗೆ ಬಾಲ್ಯ ವಿವಾಹಕ್ಕೆ ಕಾನೂನಿನ ನಿಯಮಗಳ ಬಗ್ಗೆ ತಿಳಿಸಲಾಗುತ್ತಿದೆ ಎಂದರು.
ಹಲವು ಪ್ರಕರಣಗಳು ಬೆಳಕಿಗೆ ಬಂದಿಲ್ಲ, ಇದರ ಜೊತೆಗೆ ಕೆಲ ಮದುವೆ ಸ್ಥಳಕ್ಕೆ ಹೋಗಿ ದಾಖಲೆ ಕೇಳಿದರೆ, ಬಾಲಕಿಯ ಆಧಾರ್ ಕಾರ್ಡ್ ಅಥವಾ ಅದರ ಜೆರಾಕ್ಸ್ ಪ್ರತಿಯಲ್ಲಿ ತಿದ್ದಿ ನೀಡುತ್ತಾರೆ, ಸುಳ್ಳು ಜನನ ದಿನಾಂಕವನ್ನು ನಮೂದಿಸಿ ಜೆರಾಕ್ಸ್ ಮಾಡಿರುತ್ತಾರೆ. ಇದರಿಂದ ನಿಜವಾದ ವಯಸ್ಸು ತಿಳಿಯಲು ಜನನ ಪ್ರಮಾಣ ಪತ್ರ ಅಥವಾ ಟಿಸಿ, ಎಸ್ಸೆಸ್ಸೆಲ್ಸಿ ಅಂಕಪಟ್ಟಿಯನ್ನು ಪರೀಕ್ಷಿಸಲಾಗುತ್ತಿದೆ ಎಂದರು.
ಶಿಶು ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿಯರಾದ ಸುಮಿತ್ರಮ್ಮ ಮಾತನಾಡಿ ಬಾಲ್ಯ ವಿವಾಹವು ಬಡತನ, ಹೆಣ್ಣು ಮಕ್ಕಳ ಕಡಿಮೆ ಶಿಕ್ಷಣ ಮಟ್ಟ, ಹಾಗೂ ಹೆಣ್ಣು ಮಕ್ಕಳನ್ನು ಆರ್ಥಿಕವಾಗಿ ಹೊರೆ ಎಂದು ಭಾವಿಸುವುದರಿಂದ ಮತ್ತು ಹೆಣ್ಣುಮಕ್ಕಳಿಗೆ ಕಡಿಮೆ ಸ್ಥಾನಮಾನ ಸಾಮಾಜಿಕ ಪದ್ಧತಿ ಮತ್ತು ಸಂಪ್ರದಾಯಗಳು ಇವೆಲ್ಲವುಗಳು ಇರುವುದರಿಂದ ಹೆಚ್ಚಿನದಾಗಿ ಬಾಲ್ಯ ವಿವಾಹಗಳು ಆಗುತ್ತಿವೆ ಇದರಿಂದ ಮಕ್ಕಳಿಗೆ ಹಲವಾರು ದುಷ್ಪರಿಣಾಮಗಳು ಸಹ ಬೀರುತ್ತವೆ ವಯಸ್ಸಿಗೆ ಮೀರಿದ ಜವಾಬ್ದಾರಿಯನ್ನ ಹೆರಿಸಿದಂತಾಗುತ್ತದೆ, ಇದರಿಂದ ಮುಂದೆ ವಿಕಲಾಂಗ ಮಕ್ಕಳ ಜನನ ಉಂಟಾಗುತ್ತದೆ, ಲೈಂಗಿಕ ಕಾಯಿಲೆಗಳಿಂದ ಎಚ್ಐವಿ ಏಡ್ಸ್ ಗೆ ಗುರಿಯಾಗುವ ಸಾಧ್ಯತೆ ಹೆಚ್ಚಿರುತ್ತದೆ, ಶಿಶು ಮರಣ ಹಾಗೂ ಮಕ್ಕಳ ಮರಣ ಹೆಚ್ಚಾಗುತ್ತಿದ್ದು, ದೈಹಿಕ ಬೆಳವಣಿಗೆ ಕುಂಠಿತವಾಗುತ್ತದೆ, ಇದರಿಂದ ಗರ್ಭಪಾತ ಹೆಚ್ಚಾಗುತ್ತದೆ ಎಂದು ತಿಳಿಸಿದರು.
ಮಡಿಲು ಸಂಸ್ಥೆಯ ಅಧ್ಯಕ್ಷ ಹೆಚ್. ಕುಮಾರಸ್ವಾಮಿ ಮಾತನಾಡಿ ಬಯಲು ಸೀಮೆ ಪ್ರದೇಶವಾದ ಚಳ್ಳಕೆರೆ ಹಾಗೂ ಮೊಳಕಾಲ್ಮೂರು ತಾಲೂಕಿನಲ್ಲಿ ಹೆಚ್ಚಿನ ಬಾಲ್ಯ ವಿವಾಹಗಳು ಕಂಡುಬರುತ್ತಿವೆ ಇದರ ಬಗ್ಗೆ ಸರ್ಕಾರ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಸಂಘ ಸಂಸ್ಥೆಯವರು ಅರಿವು ಮೂಡಿಸಿದರು ಸಹ ಪೋಷಕರು ಮೂಢ ನಂಬಿಕೆಗಳಿಂದ ಹೊರಬರದೆ ಮಕ್ಕಳ ಬಾಲ್ಯಜೀವನವನ್ನು ಕಸಿದುಕೊಳ್ಳುತ್ತಿದ್ದಾರೆ. ಆಟ ಆಡಿ ಬೆಳೆಯುವ ವಯಸ್ಸಿನಲ್ಲಿ ತಾಯಂದಿರಾಗಿ ನೋವು ಅನುಭವಿಸುತ್ತಿದ್ದಾರೆ. ಕೆಲವು ಮಕ್ಕಳು ಚಿಕ್ಕ ವಯಸ್ಸಿನಲ್ಲಿ ಗರ್ಭ ಧರಿಸುವುದರಿಂದ ತನ್ನ ಪ್ರಾಣವನ್ನ ಕಳೆದುಕೊಳ್ಳುತ್ತಿದ್ದಾರೆ ಇದರಿಂದ ಪೋಷಕರು ಹಾಗೂ ಮಕ್ಕಳು ಜಾಗೃತರಾಗಿರಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಗೋಪನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷೆ ರಾಧಾ ತಿಪ್ಪೇಸ್ವಾಮಿ, ಸದಸ್ಯ ನಾಗರಾಜ್, ಮುಖ್ಯ ಶಿಕ್ಷಕರಾದ ಪತಕರ್ತರಾದ ಸುರೇಶ್ ಬೆಳಗೆರೆ, ಗ್ರಾಮದ ಮುಖಂಡರಾದ ಉಮೇಶ್, ಮಡಿಲು ಸಂಸ್ಥೆಯ ಕಾರ್ಯದರ್ಶಿ ಆನಂದ್.ಡಿ ಆಲಘಟ್ಟ, ನಿರ್ದೇಶಕರುಗಳಾದ ದ್ಯಾಮಕುಮಾರ್ ಟಿ, ಪ್ರವೀಣ್ ಎ,ಅರುಣ್, ಮನು, ಸುದೀಪ್, ದಿನೇಶ್, ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.