ಚಳ್ಳಕೆರೆ : ತಾಲ್ಲೂಕಿನ ಪರಶುರಾಮಪುರ ಹೋಬಳಿಯ ಚನ್ನಮ್ಮನಾಗತಿಹಳ್ಳಿ ಗ್ರಾಮದಲ್ಲಿ ಎರಡು ದಿನಗಳ ಕಾಲ ನಡೆದ ಶ್ರೀಪಾತಲಿಂಗೇಶ್ವರಸ್ವಾಮಿ ಜಾತ್ರೆ ಭಾನುವಾರ ನೂರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನಡೆಯಿತು.
ಪುರಾತನ ದೇವಾಲಯಗಳಲ್ಲಿ ಒಂದಾದ ಶ್ರೀಪಾತಲಿಂಗೇಶ್ವರ ಜಾತ್ರೆಗೆ ಕರ್ನಾಟಕವೂ ಸೇರಿದಂತೆ ಅಂಧ್ರಪ್ರದೇಶದಿಂದಲ್ಲೂ ನೂರಾರು ಭಕ್ತರು ಆಗಮಿಸಿ ಸ್ವಾಮಿಯ ದರ್ಶನ ಪಡೆದರು. ಗೊರವಿನಕೆರೆ ವಂಶದ ಪ್ರತಿಯೊಬ್ಬರು ಮನೆಗೆ ಇಂತಿಷ್ಟರಂತೆ ಅಕ್ಕಿ, ಬೆಲ್ಲ, ಬೇಳೆಯನ್ನು ಒಂದೆಡೆ ಸೇರಿಸಿ ಪ್ರಸಾದ ಮಾಡಿ ನೆರೆದಿದ್ದ ನೂರಾರು ಭಕ್ತರಿಗೆ ಉಣಬಡಿಸುವ ಪದ್ದತಿ ಇಂದಿಗೂ ನಡೆದು ಬಂದಿದೆ.
ಚೋಳರ ಕಾಲದಿಂದಲ್ಲೂ ಈ ದೇವರನ್ನು ಪೂಜಿಸುವ ಮಡಿವಾಳ ಸಮಾಜದ ಗೊರವಿನಕೆರೆ ವಂಶಸ್ಥರು ಎರಡು ದಿನಗಳಕಾಲ ಶ್ರದ್ದಾ ಭಕ್ತಿಯಿಂದ ಪೂಜಿಸಿ ತಮ್ಮ ಇಷ್ಟಾರ್ಥ ಈಡೇರಿಸುವಂತೆ ಬೇಡುತ್ತಾರೆ. ಗ್ರಾಮದಿಂದ ಸುಮಾರು ಎರಡ್ಮೂರು ಕಿ.ಮೀ ದೂರದ ಅಡವಿಯಲ್ಲಿ ನೆಲೆಸಿರುವ ಶ್ರೀಸ್ವಾಮಿಯ ದರ್ಶನಕ್ಕೆ ಉರಿಬಿಸಿಲನ್ನು ಲೆಕ್ಕಿಸದೆ ಕಾಲ್ನಡಿಗೆ ಮೂಲಕವೂ ಭಕ್ತರು ಆಗಮಿಸಿ ದರ್ಶನ ಪಡೆಯುತ್ತಾರೆ.
ಪ್ರತಿವರ್ಷದಂತೆ ಈ ವರ್ಷವೂ ಸಹ ಶ್ರೀಪಾತಲಿಂಗೇಶ್ವರ ಸ್ವಾಮಿ ಜಾತ್ರೆಯ ಪ್ರಾರಂಭದಿನ ಚನ್ನಮ್ಮನಾಗತಿಹಳ್ಳಿ ಗ್ರಾಮದಿಂದ ದೇಸ್ಥಾನದವರೆಗೂ ವಿವಿಧ ಕಲಾತಂಡಗಳೊಂದಿಗೆ ಸ್ವಾಮಿಯನ್ನು ಮೆರವಣಿಗೆ ನಡೆಸಲಾಯಿತು. ಭಾನುವಾರ ಬೆಳಗ್ಗೆಯಿಂದಲೇ ರುದ್ರಾಭಿಷೇಕ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಕಾರ್ಯಕ್ರಮಗಳು ಜರುಗಿದವು. ಗೊರವಿಕೆರೆ ವಂಶಸ್ಥರು ಮತ್ತು ನೂರಾರು ಭಕ್ತರು ಸ್ವಾಮಿಗೆ ನಮಿಸಿ ಇಷ್ಟಾರ್ಥ ಈಡೇರಿಸುವಂತೆ ನಮಿಸಿದರು.
ಪರಶುರಾಮಪುರ ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಿರಣ್‍ಶಂಕರ್, ದೇವಸ್ಥಾನ ಸಮಿತಿ ಅಧ್ಯಕ್ಷ ಆರ್. ಮಲ್ಲಣ್ಣ, ಉಪಾಧ್ಯಕ್ಷ ತಿಪ್ಪೇಸ್ವಾಮಿ, ಖಜಾಂಚಿ ವೇದಮೂರ್ತಿ, ಕಾರ್ಯದರ್ಶಿ ಕರೀಕೆರೆ ನಾಗರಾಜು, ಚಂದ್ರಣ್ಣ, ಪಾತಲಿಂಗಪ್ಪ, ಪಾಲ್ಗೊಂಡಿದ್ದರು.