ಚಳ್ಳಕೆರೆ: ರೈತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅಖಂಡ ಕರ್ನಾಟಕ ರಾಜ್ಯ ರೈತ ಸಂಘ ಇಂದು ನಗರದಲ್ಲಿ ಪ್ರತಿಭಟನೆ ನಡೆಸಿತು.
ನಗರದ ಪಾವಗಡ ರಸ್ತೆಯಿಂದ ಮೆರವಣಿಗೆ ಹೊರಟ ರೈತ ಮುಖಂಡರು ನೆಹರು ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು ನಂತರ ತಾಲೂಕು ಕಚೇರಿಗೆ ಆಗಮಿಸಿ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಅಖಂಡ ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಕೆ ಚಿಕ್ಕಣ್ಣ ಚಳ್ಳಕೆರೆ ತಾಲೂಕನ್ನು ಈಗಾಗಲೇ ಸರ್ಕಾರ ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡಿದೆ ರೈತರು ಬೆಳೆಯಿಲ್ಲದೆ ಸಾಲದ ಸುಳಿಯಲ್ಲಿ ಸಿಲುಕಿ ಪ್ರಾಣ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ ತಮ್ಮ ಮಕ್ಕಳ ಶಿಕ್ಷಣಕ್ಕೆ ಹಾಗೂ ಸಂಸಾರ ತೂಗಿಸಲು ಸಾಲ ಮಾಡಿ ಜೀವನ ಮಾಡಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ ರೈತರಿಗೆ ಬೆಳೆವಿಮೆ ಕಂಪನಿಗಳು ಪಾವತಿಸದೆ ಇರುವುದರಿಂದ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ ಕೂಡಲೇ ಸರ್ಕಾರ ಮಧ್ಯ ಪ್ರವೇಶಿಸಿ ವಿಮಾ ಕಂಪನಿಗಳಲ್ಲಿ ರೈತರು ಕಟ್ಟಿರುವ ಹಣವನ್ನು ರೈತರ ಖಾತೆಗೆ ಜಮ ಮಾಡಿಸಬೇಕು ಇಲ್ಲದಿದ್ದರೆ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಸೋಮಗದ್ದು ರಂಗಸ್ವಾಮಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ರೈತರ ಜೀವನದ ಜೊತೆ ಚೆಲ್ಲಾಟವಾಡುತ್ತಿವೆ ರೈತರ ವಿರುದ್ಧದ ಕಾನೂನುಗಳನ್ನು ಜಾರಿಗೆ ತಂದು ರೈತರನ್ನು ಶೋಷಣೆಗೆ ಒಳಪಡಿಸುತ್ತಿದ್ದಾರೆ ದೇಶಕ್ಕೆ ಅನ್ನ ಹಾಕುವ ರೈತ ಸುಮ್ಮನೆ ಕೂತರೆ ಭಿಕ್ಷೆ ಬೇಡಿದರು ಸಹ ಅನ್ನ ಸಿಗುವುದಿಲ್ಲ ಆದ್ದರಿಂದ ಕೂಡಲೇ ಸರ್ಕಾರಗಳು ತಮ್ಮ ಧೋರಣೆಗಳನ್ನು ಬದಲಾಯಿಸಿಕೊಂಡು ರೈತರ ನೆರವಿಗೆ ಧಾವಿಸದಿದ್ದಲ್ಲಿ ಹಸಿರು ಶಾಲಿನ ಪರಿಣಾಮ ಏನು ಎಂಬುದು ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಸಾಬೀತುಪಡಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ರೈತರ ಹಕ್ಕೊತ್ತಾಯಗಳು: ಬೆಳೆವಿಮೆ ಮತ್ತು ಬರ ಪರಿಹಾರ ಎಲ್ಲಾ ರೈತರ ಖಾತೆಗಳಿಗೆ ಜಮಾ ಮಾಡುವುದು
ವೇದಾವತಿ ನದಿಗೆ ವಿವಿ ಸಾಗರದಿಂದ ಕುಡಿಯಲು ನೀರು ಹರಿಸುವುದು
ಭದ್ರಾ ಮೇಲ್ದಂಡೆ ಕಾಮಗಾರಿ ಯೋಜನೆಗೆ 5300 ಕೋಟಿ ಹಣ ಬಿಡುಗಡೆ ಮಾಡುವುದು
ಪರಶುರಾಂಪುರ ಗ್ರಾಮದ ಸರ್ಕಾರಿ ಬಾಲಕ ಮತ್ತು ಬಾಲಕಿಯರ ಶಾಲೆಗಳಿಗೆ ಶೌಚಾಲಯ ಮತ್ತು ಶುದ್ಧ ಕುಡಿಯುವ ನೀರು ಒದಗಿಸುವುದು
ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಎಲ್ಲಾ ರೈತರ ರಾಷ್ಟ್ರೀಕೃತ ಬ್ಯಾಂಕುಗಳ ಸಾಲ ಮನ್ನಾ ಮಾಡುವುದು
ಕಳೆದ ಸಾಲಿನಲ್ಲಿ ಆಲಿಕಲ್ ಮಳೆಯಿಂದ 200 ಎಕರೆ ಬೆಳೆನಾಶವಾಗಿರುವುದರಿಂದ ಪರಿಹಾರ ಹಣ ನೀಡುವುದು
ವೇದಾವತಿ ನದಿ ಪ್ರವಾಹದಿಂದ ತೋಟದ ಬೆಳೆಗಳು ಹಾನಿಯಾಗಿರುವುದಕ್ಕೆ ಪರಿಹಾರ ನೀಡುವುದು
ಈ ಸಂದರ್ಭದಲ್ಲಿ ಅಖಂಡ ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ಹ CGನುಮಂತ ರಾಯ ಪ್ರಧಾನ ಕಾರ್ಯದರ್ಶಿ ಚೌಳೂರು ಪ್ರಕಾಶ್ ಸೇರಿದಂತೆ ಹಲವು ರೈತ ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.