ಚಿತ್ರದುರ್ಗ : ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕೇಂದ್ರ ಪುರಸ್ಕೃತ ಯೋಜನೆಗಳ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಕೇಂದ್ರ ಸಚಿವರು, ಚಿತ್ರದುರ್ಗ ಸಂಸದರಾದ ಎ.ನಾರಾಯಣಸ್ವಾಮಿ ರವರು ಅಧಿಕಾರಿಗಳ ವರ್ತನೆಗೆ ಬೇಸರ ವ್ಯಕ್ತಪಡಿಸಿದ ಅವರು ಇಂಥದ್ದನ್ನೆಲ್ಲಾ ನೋಡಿಯೇ ನನಗೆ ರಾಜಕೀಯ ನಿರಾಸಕ್ತಿ ಬಂದಿದೆ ಎಂದಿದ್ದಾರೆ.
ಸAಸದರ ಆದರ್ಶ ಗ್ರಾಮಗಳ ಕುರಿತು ಸರಿಯಾದ ಮಾಹಿತಿಯೊಂದಿಗೆ ಸಭೆಗೆ ಆಗಮಿಸದ ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಇಂಜಿನಿಯರ್ ಕುರಿತು ಅಸಮಾಧಾನ ವ್ಯಕ್ತಪಡಿಸಿದರು.
ಸಚಿವ ಎ.ನಾರಾಯಣಸ್ವಾಮಿ ಈ ಅಚ್ಚರಿಯ ಹೇಳಿಕೆ ರಾಜಾಕೀಯ ವಲಯದಲ್ಲಿ ಬಾರೀ ಸಂಚಲನ ಮೂಡಿಸಿದ್ದು ಅಧಿಕಾರಿಗಳನ್ನು ಬೆಚ್ಚಿಬೀಳಿಸಿದೆ. ಇಂಥದ್ದನ್ನೆಲ್ಲಾ ನೋಡಿಯೇ ನನಗೆ ರಾಜಕೀಯ ನಿರಾಸಕ್ತಿ ಬಂದಿದೆ. ಸಭೆಗೆ ಸರಿಯಾದ ಮಾಹಿತಿ ತರಲು ಆಗದಿದ್ದರೆ ನಿಮ್ಮ ಅಗತ್ಯ ಏನಿದೆ ಎಂದು ಪ್ರಶ್ನಿಸಿದರು.
ನಿಮ್ಮ ಈ ರೀತಿಯ ವರ್ತನೆ ಜಿಲ್ಲಾ ಆಡಳಿತಕ್ಕೆ ಮಾತ್ರ ಅಲ್ಲ, ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತಿ ಸಿಇಒ, ಮಂತ್ರಿಗಳು, ಸಂಸದರು ಎಲ್ಲರಿಗೂ ಜನ ಬೆರಳಿಟ್ಟು ಮಾತಾಡುವಂತೆ ಆಗುತ್ತದೆ ಎಂದು ಗರಂ ಆದರು.
2047ಕ್ಕೆ ಸ್ವಾವಲಂಬಿ ಭಾರತ, ಅಭಿವೃದ್ಧಿ ಹೊಂದಿದ ಭಾರತ ಎಂದು ಹೇಳುತ್ತಿದ್ದೇವೆ. ಬರೀ ಪೇಪರ್ ನಲ್ಲಿ ಮಾತ್ರ ಇರಬಾರದು. ಕೆಲಸ ಮಾಡಿ ಎಂದು ತಾಕೀತು ಮಾಡಿದರು. ಆದರ್ಶ ಗ್ರಾಮಗಳಿಗೆ ನರೇಗಾ ಕೆಲಸಗಳನ್ನು ಹೊಂದಿಕೆ ಮಾಡಿಲ್ಲ. ಇದು ಯಾರ ತಪ್ಪು ಎಂದು ಪ್ರಶ್ನಿಸಿದ ಸಂಸದರು, ಅನುದಾನ ವ್ಯರ್ಥವಾದರೆ ಜವಾಬ್ದಾರಿ ಯಾರು. ಇದರಲ್ಲಿ ನಾವು ಅಪರಾಧಿಗಳಾಗುತ್ತೇವೆ ಎಂದು ಹೇಳಿದರು.