ಬಡಜನರ ಪ್ರಗತಿಗೆ ಶ್ರಮಿಸಬೇಕು

ಚಿತ್ರದುರ್ಗ: ದೇಶದಲ್ಲಿ ಈಚೆಗೆ ಗುಡಿ-ಗೋಪುರಗಳನ್ನು ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಕಟ್ಟುವ ಪದ್ಧತಿ ಆರಂಭವಾಗಿದೆ. ಇದಕ್ಕಿಂತಲೂ ಮುಖ್ಯವಾಗಿ ಬಡವರಿಗೆ ಮನೆ, ದೇಶದ ಜನರ ಮನಸ್ಸುಗಳನ್ನು ಕಟ್ಟುವ ಕೆಲಸವಾಗಬೇಕು ಎಂಬ ಸಾಮಾಜಿಕ ಪ್ರಜ್ಞೆ ಹೆಚ್ಚಾಗಬೇಕಿದೆ ಎಂದು ಮಾಜಿ ಸಚಿವ ಎಚ್.ಆಂಜನೇಯ ಆಶಯ ವ್ಯಕ್ತಪಡಿಸಿದರು.

ಕುವೆಂಪು ಜನ್ಮದಿನಾಚರಣೆ ಹಾಗೂ ಸಂವಿಧಾನ ಸಮರ್ಪಣೆ ದಿನದ ಅಂಗವಾಗಿ ದಲಿತ ಸಂಘರ್ಷ ಸಮಿತಿಯು ಬೆಂಗಳೂರಿನ ವಸಂತನಗರದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಸಂವಿಧಾನ ರಕ್ಷಣೆಗಾಗಿ; ಪ್ರಜಾಪ್ರಭುತ್ವ ಉಳಿವಿಗಾಗಿ ಜಾಗೃತಿ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಹಸಿವು, ಬಡತನಕ್ಕೆ ದೇಶದಲ್ಲಿ ಕೋಟ್ಯಂತರ ಜನ ಸಿಲುಕಿದ್ದಾರೆ. ಇದರಿಂದ ಅವರನ್ನು ಹೊರತರುವ ಜವಾಬ್ದಾರಿ ಸರ್ಕಾರಗಳ ಮೇಲಿದೆ ಎಂದರು.

ದೇಶದಲ್ಲಿ ಆರ್ಥಿಕ, ಸಾಮಾಜಿಕ ಅಸಮಾನತೆ ಹೆಚ್ಚುತ್ತಿದೆ. ಬಡವರು, ದಲಿತರು ಮೋರಿ, ಮಲಮೂತ್ರ ವಿರ್ಸಜನೆ ಸ್ಥಳದ ಬಳಿ, ಕೊಳಚೆ ಪ್ರದೇಶದಲ್ಲಿ ಮುರುಕು ಗುಡಿಸಲುಗಳಲ್ಲಿ ವಾಸ ಮಾಡುತ್ತಿದ್ದಾರೆ. ಒಂದೊತ್ತು ಊಟಕ್ಕೂ ಪರದಾಡುತ್ತಿದ್ದಾರೆ. ಈ ಸತ್ಯ ಅರಿತುಕೊಂಡು, ಮಂದಿರ, ಮಸೀದಿ, ಚರ್ಚ್‌ಗಳ ನಿರ್ಮಾಣಕ್ಕೆ ವ್ಯಯಿಸುವ ಹಣವನ್ನು ಅಶಕ್ತರ ಬದುಕನ್ನು ಭದ್ರಗೊಳಿಸುವುದಕ್ಕೆ ಖರ್ಚು ಮಾಡಬೇಕಿದೆ ಎಂದು ಹೇಳಿದರು.

ಸಮಾಜ ಕಲ್ಯಾಣ ಸಚಿವನಾಗಿದ್ದ ಸಂದರ್ಭ ಎಸ್‌ಸಿಎಸ್‌ಪಿ, ಟಿಎಸ್‌ಪಿ ಕಾಯ್ದೆ ಜಾರಿಗೆ ತರಲಾಗಿದೆ. ಆದರೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಈ ಹಣವನ್ನು ದುರ್ಬಳಕೆ ಮಾಡಿಕೊಳ್ಳಲಾಯಿತು. ಇದಕ್ಕೆ ಕಡಿವಾಣ ಹಾಕಲು ಹಣವನ್ನು ಜನರಿಗೆ ನೇರ ವಿತರಿಸುವ ಯೋಜನೆ ರೂಪಿಸಬೇಕು. ರಸ್ತೆ, ಬೀದಿ ದೀಪ ಎಂದು ವೆಚ್ಚ ಮಾಡುವುದಕ್ಕಿಂತ ಎಸ್ಸಿ, ಎಸ್ಟಿ ಜನರ ಶ್ರೇಯೋಭಿವೃದ್ಧಿಗೆ ನೇರ ವ್ಯಯಿಸಬೇಕು ಎಂದು ತಿಳಿಸಿದರು.

ಮನೆ ಕಟ್ಟಿಕೊಳ್ಳಲು, ಸ್ವಯಂ ಉದ್ಯೋಗ, ಉದ್ಯಮ ಆರಂಭಿಸಲು, ಭೂಮಿ ಖರೀದಿ ಹೀಗೆ ವೈಯಕ್ತಿಕವಾಗಿ ಜನರ ಆರ್ಥಿಕ ಪ್ರಗತಿಗೆ ಎಸ್‌ಸಿಎಸ್‌ಪಿ, ಟಿಎಸ್‌ಪಿ ಅನುದಾವನ್ನು ಬಳಕೆ ಮಾಡಬೇಕು. ಈ ನಿಟ್ಟಿನಲ್ಲಿ ಸರ್ಕಾರ ಮುಂದಾಗಬೇಕು. ಇದರಿಂದ ಮಾತ್ರ ಬಡತನ ನಿರ್ಮೂಲನೆ ಸಾಧ್ಯ ಎಂದರು.

ದಲಿತ ಸಮುದಾಯ ಸಮಸ್ಯೆಗಳ ನೆಪವನ್ನೊಡ್ಡಿ ಮುಖ್ಯವಾಹಿನಿಗೆ ಬರುವ ಅವಕಾಶ ಕಳೆದುಕೊಳ್ಳಬಾರದು. ಸ್ವಾತಂತ್ರೃ ಪೂರ್ವದಲ್ಲಿ ಅಸ್ಪಶ್ಯತೆ ಕ್ರೂರವಾಗಿತ್ತು, ಬಡತನ ಹೆಚ್ಚಿತ್ತು. ಇಂತಹ ವ್ಯವಸ್ಥೆಯ ಮಧ್ಯೆ ಅರಳಿದ ದಲಿತ ಸೂರ್ಯ ಅಂಬೇಡ್ಕರ್ ದೇಶಕ್ಕೆ ವಿಶ್ವ ಮೆಚ್ಚುವ ಸಂವಿಧಾನ ಕೊಟ್ಟಿದ್ದಾರೆ. ಸರ್ವ ಸಮುದಾಯದ ಪ್ರಗತಿಗೆ ಬುನಾದಿ ಹಾಕಿದ್ದಾರೆ. ಅವರ ಮಾದರಿಯಲ್ಲಿ ಈಗಿನ ಯುವ ಪೀಳಿಗೆ ಸಾಗಬೇಕು ಎಂದರು.

ಪುಸ್ತಕಗಳನ್ನು ಓದುವ ಮೂಲಕ ಹಸಿವು, ಅಸ್ಪೃಶ್ಯತೆ, ಬಡತನದ ನೋವು ಮರೆಯುತ್ತಿದ್ದ ಅಂಬೇಡ್ಕರ್ ನಮ್ಮೆಲ್ಲರಿಗೂ ಆದರ್ಶವಾಗಬೇಕು. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವು ದಿಟ್ಟ ಹೆಜ್ಜೆ ಹಾಕಬೇಕು ಎಂದು ಸಲಹೆ ನೀಡಿದರು.

ಈಚೆಗೆ ಸಂವಿಧಾನ ಬದಲಾವಣೆ, ಮೀಸಲಾತಿ ರದ್ದು ವಿಷಯ ದೇಶದ ಕೆಲ ರಾಜಕಾರಣಿಗಳ ಬಾಯಲ್ಲಿ ವಿಜೃಂಭಿಸುತ್ತಿದೆ. ಅಂತಹವರ ಕೈಯಲ್ಲಿ ನಾವೆಲ್ಲರೂ ಅಧಿಕಾರ ಕೊಟ್ಟು ಸಂಕಷ್ಟಕ್ಕೆ ಸಿಲುಕಿದ್ದೇವೆ. ಈಗಾಲಾದರೂ ಎಚ್ಚೇತ್ತುಕೊಳ್ಳಬೇಕಿದೆ. ಹೋರಾಟಕ್ಕೆ ಮತ್ತೊಂದು ಹೆಸರೇ ದಲಿತ ಸಮುದಾಯವಾಗಿದ್ದು, ಒಂದೊಮ್ಮೆ ಸಂವಿಧಾನ ಬದಲಾವಣೆಗೆ ಕೈ ಹಾಕಿದರೆ ದೇಶದಲ್ಲಿ ರಕ್ತಕ್ರಾಂತಿ ಆಗಲಿದೆ ಎಂಬ ಎಚ್ಚರಿಕೆ ವಿಕೃತ ಮನಸ್ಸುಗಳಿಗೆ ಇರಲಿ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ದಸಂಸ ಸಂಚಾಲಕ ಮಾವಳ್ಳಿ ಶಂಕರ್ ಮಾತನಾಡಿ, ಈಚೆಗೆ ಹೋರಾಟಗಳ ಮನಸ್ಸು ದೇಶದಲ್ಲಿ ಕ್ಷೀಣಿಸುತ್ತಿವೆ. ಆದ್ದರಿಂದ ಈಗಾಗಲೇ 20 ಜಿಲ್ಲೆಗಳಲ್ಲಿ ಜನಜಾಗೃತಿ ಮೂಲಕ ಚಳವಳಿಯ ಕಿಚ್ಚು ಹಾಗೂ ಸಂವಿಧಾನದ ಆಶಯ ಮೂಡಿಸುವ ಕೆಲಸ ದಲಿತ ಸಂಘರ್ಷ ಸಮಿತಿ ಮಾಡಿದೆ ಎಂದರು.

ಜನರಲ್ಲಿ ಹೋರಾಟದ ಗುಣ ಕಡಿಮೆ ಆಗುತ್ತಿರುವ ಕಾರಣಕ್ಕೆ ಎಲ್ಲೆಡೆ ದೌರ್ಜನ್ಯ, ಮೀಸಲಾತಿ ಕಬಳಿಕೆ, ಎಸ್ಸಿ, ಎಸ್ಟಿ ಅನುದಾನ ದುರ್ಬಳಕೆ ಹೆಚ್ಚಾಗಿದೆ. ಇದಕ್ಕೆ ಕಡಿವಾಣ ಹಾಕಲು ಸಮುದಾಯದಲ್ಲಿ ಜಾಗೃತಿ ಮೂಡಬೇಕು ಎಂದು ಹೇಳಿದರು.

ಶೋಷಿತ ಸಮುದಾಯಗಳ ಒಕ್ಕೂಟದ ರಾಮಚಂದ್ರಪ್ಪ ಮಾತನಾಡಿ, ಶೋಷಿತ ವರ್ಗದ ಸಮಗ್ರ ಅಭಿವೃದ್ಧಿಗೆ ಜಾತಿಗಣತಿ ಪ್ರಕಟ ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ಸರ್ಕಾರದ ಮೇಲೆ ಒತ್ತಡ ಹಾಕುವ ಕೆಲಸ ಎಲ್ಲರೂ ಒಗ್ಗೂಡಿ ಮಾಡಬೇಕಿದೆ ಎಂದರು.

ಇಂದಿರಾ ಕೃಷ್ಞಪ್ಪ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಜೀರ್ ಅಹಮ್ಮದ್, ರವಿಕುಮಾರ್ ಬಾಗಿ, ಶ್ರೀಪಾಲ್ ಭಟ್, ರಮೇಶ್ ಡಾಕುಳಗಿ, ನಿರ್ಮಲಾ ಮತ್ತಿತರರು ಮಾತನಾಡಿದರು.

Namma Challakere Local News
error: Content is protected !!