ಚಳ್ಳಕೆರೆ : ಚಳ್ಳಕೆರೆ ನಗರದ ಬಾಪೂಜಿ ಆರ್ಯುವೇದ ಕಾಲೇಜ್ ನಲ್ಲಿ ಆರೋಗ್ಯ ಇಲಾಖೆಯಿಂದ ಆಯೋಜಿಸಿದ್ದ ಅನೀಮಿಯ ಮುಕ್ತ ಪೌಷ್ಟಿಕ ಕರ್ನಾಟಕ ಕಾರ್ಯಕ್ರಮದಲ್ಲಿ ತಾಲೂಕು ಕಾರ್ಯ ನಿರ್ವಾಹಕ ಅಧಿಕಾರಿ ಶಶಿಧರ್ ಭಾಗವಹಿಸಿ ಮಾತನಾಡಿದರು.
ಪ್ರತಿಯೊಬ್ಬರಿಗೂ ಪೌಷ್ಠಿಕ ಆಹಾರ ಅತ್ಯಗತ್ಯವಾಗಿದ್ದು, ಕಬ್ಬಿಣಾಂಶ ಹೆಚ್ಚಾಗಿರುವ ಆಹಾರ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸುವುದರಿಂದ ರಕ್ತಹೀನತೆ ತಡೆಗಟ್ಟಬಹುದು ಎಂದರು.
ಆರೋಗ್ಯ ಅಧಿಕಾರಿ ಡಾ.ಕಾಶಿ ಮಾತನಾಡಿ,ದೇಹದ ಅಂಗಾಂಗಗಳಿಗೆ ಸಾಕಷ್ಟು ಆಮ್ಲಜನಕವನ್ನು ಸಾಗಿಸಲು ಅಗತ್ಯವಾದ ಪ್ರಮಾಣದಲ್ಲಿ ಆರೋಗ್ಯಕರ ಕೆಂಪು ರಕ್ತಕಣಗಳ ಕೊರತೆ ಉಂಟಾಗುವ ಸನ್ನಿವೇಶವನ್ನು ರಕ್ತಹೀನತೆ ಎಂದು ಕರೆಯಲಾಗುತ್ತದೆ,
ರಾಜ್ಯ ಸರ್ಕಾರವು ಅನಿಮೀಯ ಮುಕ್ತ ಪೌಷ್ಟಿಕ ಕರ್ನಾಟಕ ಕಾರ್ಯಕ್ರಮವನ್ನು ಇಡೀ ರಾಜ್ಯಾದ್ಯಾಂತ ಆರಂಭಿಸಿದೆ. ಇದರಡಿಯಲ್ಲಿ 6 ತಿಂಗಳಿನಿಂದ 18 ವರ್ಷದೊಳಗಿನ ಹೆಣ್ಣು ಮಕ್ಕಳಿಗೆ, ಎಲ್ಲಾ ಗರ್ಭಿಣಿಯರಿಗೂ ಮತ್ತು ಹಾಲುಣಿಸುವ ತಾಯಂದಿರಿಗೆ ಹಾಗೂ ಸಂತಾನೋತ್ಪತ್ತಿ ವಯಸ್ಸಿನ ಎಲ್ಲಾ ಮಹಿಳೆಯರಿಗೆ ರಕ್ತಹೀನತೆಯ ಪರೀಕ್ಷೆಯನ್ನು ಕೈಗೊಂಡು ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು.
ಸಿಡಿಪಿಓ ಹರಿಪ್ರಸಾಧ್ ಮಾತನಾಡಿ, ರಕ್ತದಲ್ಲಿ ಮುಖ್ಯವಾಗಿ ಹಿಮೋಗ್ಲೋಬಿನ್ (ಕಬ್ಬಿಣಾಂಶ) ಕಡಿಮೆಯಾದಾಗ ಆಯಾಸ, ದುರ್ಬಲತೆ, ಉಸಿರಾಟದ ತೊಂದರೆ ತಲೆ ತಿರುಗುವಿಕೆ, ಕೂದಲು ಉದುರುವಿಕೆ, ಬೆಳವಣಿಗೆಯಲ್ಲಿ ಕುಂಠಿತ, ನೆನಪಿನ ಶಕ್ತಿ ಮತ್ತು ಏಕಾಗ್ರತೆಗೆ ತೊಂದರೆ ಉಂಟಾಗುತ್ತದೆ. ಮಕ್ಕಳಲ್ಲಿ ರಕ್ತಹೀನತೆ ಕಂಡುಬಂದಾಗ ಮಗುವಿನ ಓದುವಿನಲ್ಲಿ ಪರಿಣಾಮ ಬೀರುವ ಜೊತೆಗೆ ಬೆಳವಣಿಗೆಯಲ್ಲಿ ಕುಂಠಿತವಾಗುವ ಸಾಧ್ಯತೆಗಳಿವೆ. ಗರ್ಭಿಣಿಯರಲ್ಲಿ ರಕ್ತಹೀನತೆ ಉಂಟಾದಾಗ ಹೆರಿಗೆ ಪೂರ್ವದಲ್ಲಿ ಆಕಾಲಿಕ ಜನನ ಗರ್ಭದಾರಣೆಯ ತೊಡಕುಗಳು, ಗರ್ಭಪಾತ, ಹೆರಿಗೆ ಸಮಯದಲ್ಲಿ ತೀವ್ರ ರಕ್ತಸ್ರಾವ ಉಂಟಾಗಬಹುದು. ಆದ್ದರಿಂದ ಪ್ರತಿಯೊಬ್ಬರೂ ಕಬ್ಬಿಣಾಂಶ ಇರುವ ಆಹಾರ ಸೇವನೆ ಮಾಡಬೇಕು ಎಂದು ತಿಳಿಸಿದರು.
ಇದೇ ಸಂಧರ್ಭದಲ್ಲಿ ಆರೋಗ್ಯ ಇಲಾಖೆಯ ಸಹಾಯಕ ಅಧಿಕಾರಿ ಕುದಾಪುರ ತಿಪ್ಪೇಸ್ವಾಮಿ, ಸಿಡಿಪಿಓ ಸಹಾಯಕ ಅಧಿಕಾರಿ ನವೀನ್ ಕುಮಾರ್, ತಾಪಂ.ಸಹಾಯಕ ಅಧಿಕಾರಿ ಸಂಪತ್ ಕುಮಾರ್, ಉಪನ್ಯಾಸಕ ಜಗದೀಶ್, ತಿಪ್ಪೇಸ್ವಾಮಿ, ಆರ್ ಬಿ ಎಸ್ ಕೆ ವೈದ್ಯರು ಹಾಗೂ ತಂಡದವರು ಇತರರು ಪಾಲ್ಗೊಂಡಿದ್ದರು.