ಬರ ಪರಿಹಾರದಲ್ಲಿ ಬೆಳೆ ಸಮೀಕ್ಷೆ ದತ್ತಾಂಶ ಹಾಗೂ ಫ್ರೂಟ್ಸ್ ತಂತ್ರಾಂಶದಲ್ಲಿರುವ (ಎಫ್ಐಡಿ) ಅಂಶಗಳ ಆಧಾರದಲ್ಲಿ ಬೆಳೆ ಪರಿಹಾರ ಮೊತ್ತ ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಪಾವತಿಯಾಗುವುದರಿಂದ, ರೈತರು ತಮ್ಮ ಜಮೀನಿನ ನಿಖರವಾದ ವಿಸ್ತೀರ್ಣವನ್ನು ಫ್ರುಟ್ಸ್ ತಂತ್ರಾಂಶದಲ್ಲಿ ಆಧಾರ್-ಪಹಣಿ ಜೋಡಣೆ ಮಾಡಿಸಿಕೊಳ್ಳುವಂತೆ ಕೃಷಿ ಸಹಾಯಕ ನಿರ್ದೇಶಕ ಡಾ.ಆಶೋಕ್ ರೈತರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಈ ಹಿಂದೆ ಗ್ರಾಮ ಲೆಕ್ಕಾಧಿಕಾರಿಗಳು ಬೆಳೆ ನಷ್ಟ ವಿವರವನ್ನು ನಮೂದಿಸಿ, ಅದಕ್ಕನುಗುಣವಾಗಿ ಪರಿಹಾರ ಮೊತ್ತ ನೀಡುವ ವ್ಯವಸ್ಥೆ ಇತ್ತು. ಸರ್ಕಾರವು 2023 ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ನಷ್ಟ ಪರಿಹಾರವನ್ನು ಬೆಳೆ ಸಮೀಕ್ಷೆ ಮತ್ತು ಫ್ರುಟ್ಸ್ ನಲ್ಲಿ ನೊಂದಣಿಯಾಗಿರುವ ಬೆಳೆ ಮತ್ತು ಜಮೀನಿನ ವಿಸ್ತೀರ್ಣಕ್ಕೆ ಅನುಗುಣವಾಗಿ ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಲಿರುವುದರಿಂದ, ಈಗಾಗಲೆ ಫ್ರುಟ್ಸ್ ನಲ್ಲಿ ನೊಂದಣಿಯಾಗಿರುವ ರೈತರು ತಮ್ಮ ಜಮೀನಿನ ಯಾವುದೇ ಸರ್ವೆ ನಂಬರ್ ಬಿಟ್ಟುಹೋಗದಂತೆ, ಎಲ್ಲಾ ಸರ್ವೆ ನಂಬರ್‍ಗಳನ್ನು ನೊಂದಣಿ ಮಾಡಿಸಿಕೊಳ್ಳುವಂತೆ ತಿಳಿಸಲಾಗಿದೆ. ಇದುವರೆಗೂ ಫ್ರುಟ್ಸ್ ನಲ್ಲಿ ನೊಂದಣಿ ಆಗದೇ ಇರುವ ರೈತರು ಆಧಾರ್ ಕಾರ್ಡ್, ಪಹಣಿ, ಜಾತಿ ಪ್ರಮಾಣಪತ್ರ ಮತ್ತು ಬ್ಯಾಂಕ್ ಪಾಸ್ ಪುಸ್ತಕ ವಿವರಗಳನ್ನು ಫ್ರುಟ್ಸ್‍ನಲ್ಲಿ(ಎಫ್ ಐಡಿ) ದಾಖಲಿಸಿಕೊಂಡರೆ ಬೆಳೆಪರಿಹಾರವನ್ನು ಪಡೆಯಬಹುದು.
ಫ್ರುಟ್ಸ್ ತಂತ್ರಾಂಶದಲ್ಲಿ ರೈತರು ತಮ್ಮ ಜಮೀನಿನ ವಿವರವನ್ನು ನೊಂದಾಯಿಸಿ, ರೈತರ ಗುರುತಿನ ಚೀಟಿ ಸಂಖ್ಯೆ ಪಡೆದುಕೊಳ್ಳುವುದು ಅಗತ್ಯವಾಗಿರುತ್ತದೆ. ಈ ಮಾಹಿತಿಯು ಕೃಷಿ ಮತ್ತು ಕೃಷಿ ಸಂಬಂಧಿತ ಇಲಾಖೆಗಳಿಂದ ದೊರೆಯುವ ಸೌಲಭ್ಯಗಳನ್ನು ನೀಡುವುದಲ್ಲದೆ, ಇತರೆ ಇಲಾಖೆಗಳಿಗೂ ಸಹ ಉತ್ತಮ ಮಾಹಿತಿಯಾಗಿರುತ್ತದೆ. ಅತಿವೃಷ್ಟಿ ಹಾಗೂ ಅನಾವೃಷ್ಟಿ ಸಂದರ್ಭದಲ್ಲಿ ಪರಿಹಾರ, ಬೆಳೆ ವಿಮೆ, ಬೆಂಬಲ ಬೆಲೆ ಯೋಜನೆಯಡಿ ಫಲಾನುಭವಿಗಳಾಗಲು ಹಾಗೂ ಪರಿಹಾರ ಮೊತ್ತವನ್ನು ರೈತರ ಖಾತೆಗೆ ನೇರವಾಗಿ ಜಮಾ ಮಾಡಲು ರೈತರು ಫ್ರುಟ್ಸ್ ತಂತ್ರಾಂಶದಲ್ಲಿ ನೊಂದಣಿ ಮಾಡಿಸಿ, ಎಫ್‍ಐಡಿ ಸಂಖ್ಯೆ ಹೊಂದಿರುವುದು ಕಡ್ಡಾಯವಾಗಿದೆ.