ಚಳ್ಳಕೆರೆ : ಮಹಾತ್ಮ ಗಾಂಧೀಜಿಯವರ ಕನಸನ್ನು ನನಸು ಮಾಡಲು ಗ್ರಾಮೀಣ ಅಭಿವೃದ್ಧಿಯಲ್ಲಿ ನೇರವಾಗಿ ಪಾಲ್ಗೊಂಡು ಸಮುದಾಯ ಸೇವೆ ಮೂಲಕ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನದೊಂದಿಗೆ ಸಾಂಪ್ರದಾಯಿಕ ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳ ಮೂಲ ಸ್ವಭಾವದಲ್ಲಿ ಧನಾತ್ಮಕ ಪರಿವರ್ತನೆಯನ್ನು ಉಂಟು ಮಾಡಿ ಉತ್ತಮ ಚಾರಿತ್ಯವನ್ನು ರೂಪಿಸುವ ಎನ್‌ಎಸ್‌ಎಸ್ ಕಾರ್ಯಕ್ರಮ ಅಧಿಕಾರಿಗಳನ್ನು ಗುರುತಿಸಿ ನೀಡಲಾಗುವ ರಾಜ್ಯ ಪ್ರಶಸ್ತಿಯನ್ನು ಈ ಬಾರಿ ಚಳ್ಳಕೆರೆ ಸರಕಾರಿ ಕಾಲೇಜು ತನ್ನದಾಗಿಸಿಕೊಂಡಿದೆ.
ಕರ್ನಾಟಕ ಸರ್ಕಾರ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ರಾಷ್ಟ್ರೀಯ ಸೇವಾ ಯೋಜನಾ ಕೋಶ 2021-22ನೇ ಸಾಲಿನ ಎನ್‌ಎಸ್‌ಎಸ್ ರಾಜ್ಯ ಪ್ರಶಸ್ತಿಯನ್ನು ಚಳ್ಳಕೆರೆ ಸರಕಾರಿ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕಕ್ಕೆ ಅತ್ಯುತ್ತಮ ಎನ್‌ಎಸ್‌ಎಸ್ ಘಟಕ ಹಾಗೂ ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಬಿ.ಶಾಂತಕುಮಾರಿ ಅತ್ಯುತ್ತಮ ಎನ್ ಎಸ್ ಎಸ್ ಕಾರ್ಯಕ್ರಮಾಧಿಕಾರಿ ಎಂದು ಗುರುತಿಸಿ ಬೆಂಗಳೂರಿನ ರಾಜಭವನದಲ್ಲಿ ರಾಜ್ಯಪಾಲರಾದ ಥಾವರ್‌ಚಂದ್ ಗೆಹ್ಲೋಟ್ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಇನ್ನೂ ಅತ್ಯುತ್ತಮ ಎನ್‌ಎಸ್‌ಎಸ್ ಘಟಕ ಪ್ರಶಸ್ತಿಯನ್ನು ಪ್ರಾಚಾರ್ಯರಾದ ಎಂ.ರವೀಶ್ ನೀಡಿದ್ದಾರೆ.
ಕಾರ್ಯಕ್ರಮದಲ್ಲಿ ಪರಿಶಿಷ್ಟ ಪಂಗಡಗಳ ಕಲ್ಯಾಣ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ರಾಜ್ಯ ಸರ್ಕಾರದ ಸಚಿವ ಬಿ ನಾಗೇಂದ್ರ, ಸರ್ಕಾರದ ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ್‌ಪ್ರಸಾದ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ , ಡಿ.ಕಾರ್ತಿಕೇಯನ್, ಪ್ರಾದೇಶಿಕ ನಿರ್ದೇಶಕರು ಎನ್‌ಎಸ್‌ಎಸ್ ಪ್ರಾದೇಶಿಕ ಕಚೇರಿ ಬೆಂಗಳೂರು, ಡಾ.ಪ್ರತಾಪ ಲಿಂಗಯ್ಯ ರಾಜ್ಯ ಎನ್‌ಎಸ್‌ಎಸ್ ಅಧಿಕಾರಿಗಳು ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಉಪ್ಪಿನ್ ಯುವಜನ ಅಧಿಕಾರಿ, ಪ್ರಾದೇಶಿಕ ಕಚೇರಿ, ಬೆಂಗಳೂರು ಇವರು ಉಪಸ್ಥಿತರಿದ್ದರು.
ಎನ್‌ಎಸ್‌ಎಸ್ ರಾಜ್ಯ ಪ್ರಶಸ್ತಿ ವಿಜೇತರಾದ ಬಿ.ಶಾಂತಕುಮಾರಿ ಹಾಗೂ ಪ್ರಾಚಾರ್ಯರಾದ ಎಂ.ರವೀಶ್ ಅವರನ್ನು ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರಾದ ಸಿಂಧು ಬಿ.ರೂಪೇಶ್ ರವರು ಹಾಗೂ ರಾಜ್ಯ ಎನ್‌ಎಸ್‌ಎಸ್ ಸಂಯೋಜನಾಧಿಕಾರಿಗಳಾದ ಡಾ.ರಮೇಶ್ ಗುಬ್ಬಿಗೂಡು ಅವರು ಅಭಿನಂಧನೆ ಸಲ್ಲಿಸಿದ್ದಾರೆ.