ಮಾಜಿ ಸಚಿವ ಎಚ್.ಆಂಜನೇಯ ಹೇಳಿಕೆ

ಚಿತ್ರದುರ್ಗ:ಜೂ.1
ಹೊಳಲ್ಕೆರೆ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅನಿರೀಕ್ಷಿತ ಸೋಲು ಆಗಿದ್ದು, ಈ ಕುರಿತು ಚರ್ಚೆ ಹಾಗೂ ಪಕ್ಷದ ಸಂಘಟನಾ ಸಭೆಯನ್ನು ಜೂ.3ರಂದು ಶನಿವಾರ ಬೆಳಗ್ಗೆ 10.30ಕ್ಕೆ ಹೊಳಲ್ಕೆರೆ ಗಣಪತಿ ಕಲ್ಯಾಣ ಮಂಟಪದಲ್ಲಿ ಕರೆಯಲಾಗಿದೆ ಎಂದು ಮಾಜಿ ಸಚಿವ ಎಚ್.ಆಂಜನೇಯ ತಿಳಿಸಿದ್ದಾರೆ.

ರಾಜ್ಯದಲ್ಲಿ‌ ನಿರೀಕ್ಷೆಗೂ ಮೀರಿ ಕಾಂಗ್ರೆಸ್ ಪಕ್ಷಕ್ಕೆ ಜನ ಬಹುಮತ ನೀಡಿದ್ದಾರೆ, ಆದರೆ, ಹೊಳಲ್ಕೆರೆ ಕ್ಷೇತ್ರದಲ್ಲಿ ಕಾರ್ಯಕರ್ತರ ಹೋರಾಟ, ಶ್ರಮದ ಮಧ್ಯೆಯೂ ಕಡಿಮೆ ಮತಗಳ ಅಂತರದಲ್ಲಿ ನನಗೆ ಸೋಲು ಆಗಿದೆ.
ಈ ಕುರಿತು ಚಿಂತನೆ ಹಾಗೂ ಬರುವ ಜಿಲ್ಲಾ-ತಾಲ್ಲೂಕು ಪಂಚಾಯತ್, ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಸಂಘಟನೆ ಕೈಗೊಳ್ಳುವ ಹಿನ್ನೆಲೆಯಲ್ಲಿ ಸಭೆಯನ್ನು ಕರೆಯಲಾಗಿದೆ.
ಸಮಾಜ ಕಲ್ಯಾಣ ಸಚಿವನಾಗಿ ಐದು ವರ್ಷ ಆಡಳಿತ ನಡೆಸಲು ಅವಕಾಶ ಕೊಟ್ಟ ಕ್ಷೇತ್ರದ ಜನರು ಈ ಬಾರಿಯೂ ನನ್ನ ಗೆಲುವು ಖಚಿತ ಎಂದೇ ಭಾವಿಸಿದ್ದರು. ಆದರೆ, ಬೆರಳೆಣಿಕೆಯ ಪಕ್ಷದ್ರೋಹಿಗಳ ಕುತಂತ್ರ ಹಾಗೂ ಬಿಜೆಪಿ ಅಭ್ಯರ್ಥಿ ಮತ್ತು ಆತನ ಇಡಿ ಕುಟುಂಬದ ಸದಸ್ಯರು ಕ್ಷೇತ್ರದಲ್ಲಿ ಹಣದ ಹೊಳೆಯನ್ನೇ ಹರಿಸುವ ಜೊತೆಗೆ ದೇವರ ಭಾವಚಿತ್ರಗಳನ್ನೇ ದುರ್ಬಳಕೆ ಮಾಡಿಕೊಂಡಿದ್ದರಿಂದ ನನಗೆ ಸೋಲು ಆಗಿದೆ.
ಈ ಸೋಲು ನನಗಿಂತಲೂ ಪಕ್ಷದ ನಿಷ್ಠಾವಂತರು, ಮುಖಂಡರು, ಅಭಿಮಾನಿಗಳಲ್ಲಿ ಆಘಾತ ಉಂಟು ಮಾಡಿರುವುದು ವಾಸ್ತವ ಸತ್ಯ.
ಆದ್ದರಿಂದ ಕಾರ್ಯಕರ್ತರು, ಮುಖಂಡರು ಹಾಗೂ ಕ್ಷೇತ್ರದ ಜನರೊಂದಿಗೆ ಸೋಲು-ಗೆಲುವು ಲೆಕ್ಕಿಸದೆ ಸದಾ ನಾನು ಇರುತ್ತೇನೆ ಹಾಗೂ ಕ್ಷೇತ್ರದಲ್ಲಿದ್ದು ಪಕ್ಷ ಸಂಘಟನೆ ಹಾಗೂ ಹೊಳಲ್ಕೆರೆ ಅಭಿವೃದ್ಧಿಗೆ ಬೆಂಬಲವಾಗಿ ನಿಲ್ಲುವ ಛಲ ನನ್ನಲಿದೆ ಎಂಬ ಸಂದೇಶ ನೀಡುವ ಮೂಲಕ ಕಾರ್ಯಕರ್ತರಲ್ಲಿ, ಅಭಿಮಾನಿಗಳಲ್ಲಿ ಆತ್ಮವಿಶ್ವಾಸ ಮೂಡಿಸುವ ಜೊತೆಗೆ ನಿಷ್ಠಾವಂತರಿಗೆ ಸ್ಥಾನಮಾನ ಕೊಡಿಸುವ ಹೊಣೆಗಾರಿಕೆ ನನ್ನ ಮೇಲಿದೆ.
ಮುಖ್ಯವಾಗಿ ಹಣದ ಹೊಳೆ ಮತ್ತು ಭೀತಿಯ ಮಧ್ಯೆಯೂ ಕ್ಷೇತ್ರದ 83,050 ಮಂದಿ ಬಹುದೊಡ್ಡ ಸಂಖ್ಯೆಯಲ್ಲಿ ಮತ ಚಲಾಯಿಸಿದ್ದಾರೆ. ಕ್ಷೇತ್ರದ ಮತದಾರರಿಗೆ ಕೃತಜ್ಞತೆ ಸಲ್ಲಿಸುವುದು ನನ್ನ ಜವಾಬ್ದಾರಿ ಆಗಿದೆ. ಈ ಹಿನ್ನೆಲೆಯಲ್ಲಿ ಸಭೆಯನ್ನು ಕರೆಯಲಾಗಿದ್ದು, ಪಕ್ಷದ ಕಾರ್ಯಕರ್ತರು, ಮುಖಂಡರು, ವಿವಿಧ ಘಟಕದ ಅಧ್ಯಕ್ಷರು, ಪದಾಧಿಕಾರಿಗಳು, ಹಾಲಿ-ಮಾಜಿ ಚುನಾಯಿತ ಪ್ರತಿನಿಧಿಗಳು, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಭೆಯಲ್ಲಿ ಪಾಲ್ಗೊಳ್ಳಬೇಕು ಎಂದು ಪತ್ರಿಕಾ ಪ್ರಕಟಣೆ ಮೂಲಕ ಎಚ್.ಆಂಜನೇಯ ಮನವಿ ಮಾಡಿದ್ದಾರೆ.

Namma Challakere Local News
error: Content is protected !!