ಚಳ್ಳಕೆರೆ : 2023-24ರ ಶೈಕ್ಷಣಿಕ ತರಗತಿಗಳ ವರ್ಷಾರಂಭಕ್ಕೆ ಕ್ಷಣಗಣನೆ ಮೇ 29 ರಂದು ಶಾಲೆಗಳ ಆರಂಭೋತ್ಸವಕ್ಕೆ ಸಕಲ ಸಿದ್ಧತೆ ಪೂರ್ಣಗೊಂಡಿವೆ. ಬಹುತೇಕ ಶಾಲೆಗಳಲ್ಲಿ ಹಸಿರು ತೋರಣ ಕಟ್ಟಿ, ಸಿಹಿ ಅಡುಗೆ ಮಾಡಿ ಸಂಭ್ರಮದ ರೂಪದಲ್ಲಿ ಮಕ್ಕಳನ್ನು ಶಾಲೆಗೆ ಬರಮಾಡಿಕೊಳ್ಳಲು ಸಿದ್ಧತೆ ನಡೆದಿದೆ.
ಶಾಲೆ ಆರಂಭದ ದಿನ ಮಕ್ಕಳು ಶಾಲಾ ಸಮವಸ್ತ್ರದೊಂದಿಗೆ ಬರಬೇಕು ಎನ್ನುವ ಮಾಹಿತಿ ಕೂಡ ಲಭ್ಯವಾಗಿದೆ ಈಗೇ ಗಡಿಭಾಗವಾದ ಚಳ್ಳಕೆರೆ ತಾಲೂಕಿನಲ್ಲಿ ಈ ಬಾರಿ ಈಡೀ ಜಿಲ್ಲೆಯಲ್ಲಿ ಅತೀ ಹೆಚ್ಚಿನ ಫಲಿತಾಂಶವನ್ನು ನೀಡುವ ಮೂಲಕ ಮಕ್ಕಳು ಶೈಕ್ಷಣಿಕ ಪ್ರಗತಿಗೆ ನಾಂದಿ ಹಾಡಿದ್ದಾರೆ
ಅದರಂತೆ ದೊಡ್ಡೆರಿ ಸರಕಾರಿ ಶಾಲೆಯ ಕಟ್ಟಡಕ್ಕೆ ಸರಕಾರಿ ಬಸ್ ಚಿತ್ರ ಬಿಡಿಸುವ ಮೂಲಕ ಮಕ್ಕಳನ್ನು ಆಕರ್ಷಿಸುವ ಕಸರತ್ತು ನಡೆಸಿದ್ದಾರೆ ಅಲ್ಲಿನ ಶಿಕ್ಷಕರು.
ಇನ್ನೂ 29 ರಂದು ಆರಂಭವಾಗಿ ಶಾಲೆಗಳಲ್ಲಿ ಸಿಹಿಯೂಟ, ತಳಿರು ತೋರಣ, ಶಾಲಾ ಆಡಳಿತ ಈಗೇ ಹಲವು ವಿಷಯಗಳ ಕುರಿತಾದ ಮಹಿತಿಗೆ ಇಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ಸುರೇಶ್, ಮುಖ್ಯ ಶಿಕ್ಷಕರ ಸಭೆ ಮೂಲಕ ಮಾರ್ಗಸೂಚನೆಗಳನ್ನು ಪಾಲಿಸುವಂತೆ ಹೇಳಿದ್ದಾರೆ.
ಇನ್ನೂ ತಾಲೂಕಿನ್ಯಾದಂತ ಸುಮಾರು 30 ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಇದ್ದರೂ ಶಿಕ್ಷಕರೇ ಇಲ್ಲದಿರುವ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ.
ಇನ್ನೂ 30ಕ್ಕೂ ಹೆಚ್ಚು ಮಕ್ಕಳಿರುವ 40 ಶಾಲೆಗಳಲ್ಲಿ ಏಕೋಪಾಧ್ಯಾಯರ ಸೇವೆ ಇದೆ. ಇದರಿಂದ ಮಕ್ಕಳಲ್ಲಿ ಕಲಿಕಾ ಪ್ರಗತಿ ಮೇಲೆ ದುಷ್ಪರಿಣಾಮ ಬೀರುವ ಎಲ್ಲ ಲಕ್ಷಣಗಳು ಶಾಲೆ ಆರಂಭಕ್ಕೂ ಮುಂಚೆಯೇ ಸ್ಪಷ್ಟವಾಗಿ ಗೋಚರಿಸುತ್ತಿವೆ.
ಗಡಿಭಾಗದಲ್ಲಿ ಶೈಕ್ಷಣಿಕ ಪ್ರಗತಿಗೆ ಒತ್ತು ನೀಡಬೇಕಾದ ಶಿಕ್ಷಣ ಇಲಾಖೆ ನಿಲುವೇನು..?
ತಾಲೂಕಿನ ಸರ್ಕಾರಿ ಶಾಲೆಗಳಿಗೆ ಅಗತ್ಯ ಮೂಲ ಸೌಕರ್ಯ ಮತ್ತು ಭೌತಿಕ ಕಟ್ಟಡಗಳ ವ್ಯವಸ್ಥೆ ಇದೆ. ಅದೇ ರೀತಿ ನಿರೀಕ್ಷಿತ ಮಕ್ಕಳ ದಾಖಲಾತಿ ಸಂಖ್ಯೆ ಇದೆ. ಆದರೆ, ಮಕ್ಕಳ ಸಂಖ್ಯೆ ಅನುಪಾತಕ್ಕೆ ತಕ್ಕಂತೆ ಶಿಕ್ಷಕರಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.
ಮಕ್ಕಳ ಅನುಪಾತಕ್ಕೆ ತಕ್ಕಂತೆ ಶಿಕ್ಷಕರಿಲ್ಲ:
ತಾಲೂಕಿನಲ್ಲಿ 1ರಿಂದ 10 ನೇ ತರಗತಿವರೆಗೆ 389 ಸರ್ಕಾರಿ ಶಾಲೆಗಳು, 46 ಅನುದಾನಿತ ಶಾಲೆ, 8 ವಸತಿ ಶಾಲೆ ಸೇರಿದಂತೆ ಅನುದಾನಿತ 11 ಪ್ರೈಮರಿ ಶಾಲೆ ನಡೆಯುತ್ತಿವೆ.
2023-24ನೇ ಶೈಕ್ಷಣಿಕ ಸಾಲಿಗೆ 15,467 ಬಾಲಕರು, 15,745 ಬಾಲಕಿಯರು ದಾಖಲಾಗಿದ್ದಾರೆ.
ಸರ್ಕಾರದ ನಿಯಮದಂತೆ ಮಕ್ಕಳ ಅನುಪಾತಕ್ಕೆ ಅನುಗುಣವಾಗಿ 1 ರಿಂದ 11 ಮಕ್ಕಳಿಗೆ ಒಬ್ಬ ಶಿಕ್ಷಕ, 12 ರಿಂದ 60 ಮಕ್ಕಳಿಗೆ ಇಬ್ಬರು, 61 ರಿಂದ 90 ಮಕ್ಕಳಿಗೆ ಮೂವರು, 91 ರಿಂದ 120 ಮಕ್ಕಳಿಗೆ ನಾಲ್ವರು, 121 ರಿಂದ 200 ಮಕ್ಕಳಿಗೆ ಆರು ಜನ, 201ರಿಂದ 240 ಮಕ್ಕಳಿಗೆ 7 ಜನ ಶಿಕ್ಷಕರಿರಬೇಕು ಎನ್ನುವ ನಿಯಮವಿದೆ.
ತಾಲೂಕಿನ ಸರ್ಕಾರಿ ಶಾಲೆಗಳಿಗೆ ದಾಖಲಾಗಿರುವ ಮಕ್ಕಳ ಸಂಖ್ಯೆಗೆ ಅನುಗುಣವಾಗಿ 1434 ಶಿಕ್ಷಕರಿರಬೇಕು. ಬದಲಿಗೆ ಈಗ 1114 ಶಿಕ್ಷಕರಿದ್ದಾರೆ. ಪ್ರೌಢಶಾಲಾ ಹಂತದಲ್ಲಿ 238 ಶಿಕ್ಷಕರ ಹುದ್ದೆಗೆ 186 ಶಿಕ್ಷಕರು ಕರ್ತವ್ಯದಲ್ಲಿದ್ದಾರೆ.
ತಾಲೂಕಿನಲ್ಲಿ ಶೂನ್ಯ ಶಾಲೆಗಳು ಯಾವುವು?
ತಳಕು ಹೋಬಳಿ ವ್ಯಾಪ್ತಿಯಲ್ಲಿ ಮ್ಯಾಸರಹಟ್ಟಿ ಶಾಲೆ, ಸಿರಿದಲ್ಲಿ ನಗರ, ದೊಡ್ಡನಾಗಯ್ಯನಹಟ್ಟಿ, ಪಿಂಜಾರಹಟ್ಟಿ, ಬನವಿಗೊಂಡನಹಳ್ಳಿ, ಬಂಡೆಹಟ್ಟಿ, ಕೋಡಿಹಟ್ಟಿ, ಚಿಕ್ಕಬಾದಿಹಳ್ಳಿ, ಸೋಮಗಡ್ಡಾಪುರ, ಅಜ್ಜನಹಳ್ಳಿ ಗ್ರಾಮಗಳ ಶಾಲೆ ಮತ್ತು ನಾಯಕನಹಟ್ಟಿ ಹೋಬಳಿಯ ಗಿಡ್ಡಾಪುರ, ಬಡದಡ್ಡಯ್ಯನ ಕಾಲನಿ, ಮಲ್ಲೂರಹಳ್ಳಿ ಗೌಡರಪಾಳ್ಯ, ಹೊಸಬಡಾವಣೆ ಶಾಲೆಗಳು ಹಾಗೂ ಪರಶುರಾಂಪುರ ಹೋಬಳಿ ವ್ಯಾಪ್ತಿಯ ನಲ್ಲೂರಹಳ್ಳಿ, ಗೊಲ್ಲರ ಹೊಸಕಪಿಲೆ, ತೊರೆಬೀರನಹಳ್ಳಿ, ಹುಲಿಕುಂಟೆ ಗೊಲ್ಲರಹಟ್ಟಿ, ಸಿದ್ದೇಶ್ವರ ಬಡಾವಣೆ, ಮಲ್ಲಜ್ಜಿ ಕಪಿಲೆ, ಪಿ.ಓಬನಹಳ್ಳಿ ಭೋವಿ ಕಾಲನಿ, ವೃಂದಾವನಹಳ್ಳಿ ಗೊಲ್ಲರಹಟ್ಟಿ, ವೃಂದಾವನಹಳ್ಳಿ, ಹಳೆ ಹರವಿಗೊಂಡನಹಳ್ಳಿ, ಮೋದೂರು, ಶಿರಾದಾರಕಪಿಲೆ, ಬೊಮ್ಮನಕುಂಟೆ, ಮೇಲುಕೋಟೆ, ಚಿಕ್ಕಬೀರನಹಳ್ಳಿ.ಇಷ್ಟು ತಾಲೂಕಿನಲ್ಲಿ ಶೂನ್ಯ ಶಾಲೆಗಳು ಇವೆ.