ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಪಿ.ಜಯಪಾಲಯ್ಯ ಹುಟ್ಟು ಹಬ್ಬದ ಕಾರ್ಯಕ್ರಮದಲ್ಲಿ ಸ್ಪೋಟ

ನಾಯಕನಹಟ್ಟಿ : ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರಕ್ಕೆ ಸಾರಿಗೆ ಸಚಿವ ಬಿ.ಶ್ರೀರಾಮುಲು ಸೂಚಿಸುವ ಯಾವ ಅಭ್ಯರ್ಥಿಯನ್ನು ಸಹ ಬೆಂಬಲಿಸುವುದಿಲ್ಲ ಎಂದು ಜಿ.ಪಂ.ಮಾಜಿ ಸದಸ್ಯ ಎಚ್.ಟಿ.ನಾಗಿರೆಡ್ಡಿ ಹೇಳಿದರು.
ತಳಕು ಹೋಬಳಿಯ ಕಾಲುವೆಹಳ್ಳಿ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು. ಮೊಳಕಾಲ್ಮುರು ಕ್ಷೇತ್ರವು ಅತ್ಯಂತ ಹಿಂದುಳಿದ ಮತ್ತು ಅತಿಹೆಚ್ಚು ದೀನದಲಿತರು, ಬಡವರು ಇರುವ ಹಾಗೂ ನೀರಾವರಿ ಸೌಲಭ್ಯ ವಂಚಿತ ಕ್ಷೇತ್ರವೆಂದು ಕಳೆದ 5ವರ್ಷಗಳ ಹಿಂದೆ ಶ್ರೀರಾಮುಲು ಅವರನ್ನು ಇಲ್ಲಿಗೆ ಕರೆತಂದು ಬಾರಿ ಬಹುಮತದೊಂದಿಗೆ ಗೆಲ್ಲಿಸಿದೆವು. ಆದರೆ ಶ್ರೀರಾಮುಲು ಅವರು ಗೆದ್ದನಂತರ ನಡೆದುಕೊಂಡ ರೀತಿ, ಕ್ಷೇತ್ರದಲ್ಲಿ ಅವರು ಕೈಗೊಂಡ ಅಭಿವೃದ್ಧಿ ಕಾರ್ಯಗಳಿಗೆ ಕ್ಷೇತ್ರದ ಜನರು ಬೇಸತ್ತರು. ಈ ಹಿನ್ನೆಲೆಯಲ್ಲಿ ಕೆಲ ತಿಂಗಳ ಹಿಂದೆ ಕ್ಷೇತ್ರವನ್ನು ಬಿಟ್ಟು ಹೋಗುವ ಸೂಚನೆ ತಿಳೀದ ನಂತರ ಬಿಜೆಪಿ ರಾಜ್ಯಾಧ್ಯಕ್ಷರು ಮತ್ತು ಬಿಜೆಪಿಯ ಸಂತೋಷ್‌ಜೀಯವರ ಸೇರಿದಂತೆ ಬಿಜೆಪಿಯ ವರಿಷ್ಠರ ಸೂಚನೆಯ ಮೇರೆಗೆ ಶ್ರೀರಾಮುಲು ಅವರಿಗೆ ಶತ್ರುವಿನಂತೆ ಇದ್ದ ಮಾಜಿ ಶಾಸಕ ನೇರಲಗುಂಟೆ ಎಸ್.ತಿಪ್ಪೇಸ್ವಾಮಿಯವರನ್ನು ಪಕ್ಷಕ್ಕೆ ಕರೆತರುವ ಪ್ರಯತ್ನವನ್ನು ಸ್ವತಃ ನಾನೇ ವಹಿಸಿಕೊಂಡೆನು. ಅದಕ್ಕಾಗಿ ಕ್ಷೇತ್ರದಲ್ಲಿ ಮುಖಂಡರು, ಕಾರ್ಯಕರ್ತರ ಅಭಿಪ್ರಾಯವನ್ನು ಸಂಗ್ರಹಿಸುವ ಕಾರ್ಯಕ್ಕೆ ಮುಂದಾಗಿದ್ದೆ. ಆದರೆ ರಾತ್ರೋರಾತ್ರಿ ಸಚಿವರಾದ ಶ್ರೀರಾಮುಲು ಹಾಗೂ ಮಾಜಿ ಶಾಸಕ ಎಸ್.ತಿಪ್ಪೇಸ್ವಾಮಿ 5ವರ್ಷಗಳ ಘರ್ಷಣೆ, ಸಂಘರ್ಷ, ಶತ್ರುತ್ವವನ್ನು ಮರೆತು ಒಂದಾಗಿ ಯಾವ ಕಾರ್ಯಕರ್ತರ ಅಭಿಪ್ರಾಯವನ್ನು ಲೆಕ್ಕಿಸದೇ ಪಕ್ಷಕ್ಕೆ ಬರಮಾಡಿಕೊಂಡಿದ್ದಾರೆ. ಹಾಗೇ ಅವರಿಗೇ ಟಿಕೆಟ್ ಎಂಬ ಸಂದೇಶವನ್ನು ಪರೋಕ್ಷವಾಗಿ ಕ್ಷೇತ್ರದ ಜನರಿಗೆ ತಿಳಿಸಿದ ಹಿನ್ನೆಲೆಯಲ್ಲಿ ಸಾವಿರಾರು ಕಾರ್ಯಕರ್ತರು 5ವರ್ಷಗಳಿಂದ ಅನುಭವಿಸಿದ ಯಾತನೆ ಕಷ್ಟನಷ್ಟಗಳನ್ನು ನಮ್ಮ ಬಳಿ ಬಂದು ತೋಡಿಕೊಂಡಿದ್ದಾರೆ.

ಈ ಹಿನ್ನೆಲೆಯಲ್ಲಿ ಶ್ರೀರಾಮುಲು ಸೂಚಿಸುವ ಯಾವ ವ್ಯಕ್ತಿಗೂ ಬಿಜೆಪಿಯ ವರಿಷ್ಠರು ಟಿಕೆಟ್ ನೀಡಬಾರದು. ಬದಲಾಗಿ ಕ್ಷೇತ್ರದಲ್ಲಿ ಸಕ್ರಿಯವಾಗಿರುವ ಟಿಕೆಟ್ ಆಕಾಂಕ್ಷಿಗಳಾದ ಜಿ.ಪಿ.ಜಯಪಾಲಯ್ಯ, ಪಟೇಲ್ ಜಿ.ಎಂ.ತಿಪ್ಪೇಸ್ವಾಮಿ(ಎತ್ತಿನಹಟ್ಟಿಗೌಡ್ರು) ಹಾಗೂ ಪ್ರಭಾಕರ ಮ್ಯಾಸನಾಯಕ ಈ ಮೂರು ಜನರಲ್ಲಿ ಯಾರಿಗೇ ಟಿಕೆಟ್ ನೀಡಿದರೂ ಟೊಂಕಕಟ್ಟಿ ನಿಂತು ಗೆಲ್ಲಿಸುವ ಹೊಣೆಗಾರಿಕೆಯನ್ನು ತೆಗೆದುಕೊಳ್ಳುತ್ತೇವೆ. ಒಂದು ವೇಳೆ ಮಾಜಿ ಶಾಸಕ ಎಸ್.ತಿಪ್ಪೇಸ್ವಾಮಿಯವರಿಗೇ ಟಿಕೆಟ್ ನೀಡಿದರೆ ಅವರ ಸೋಲಿಗೆ ಕಾರ್ಯತಂತ್ರವನ್ನು ರೂಪಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪಟೇಲ್ ಜಿ.ಎಂ.ತಿಪ್ಪೇಸ್ವಾಮಿ(ಎತ್ತಿನಹಟ್ಟಿಗೌಡ್ರು) ಮಾತನಾಡಿ, “ಮೊಳಕಾಲ್ಮುರು ಕ್ಷೇತ್ರದಲ್ಲಿ ಕಳೆದ 5ವರ್ಷಗಳಿಂದ ಬಿಜೆಪಿಯ ಕಾರ್ಯಕರ್ತರು, ಮುಖಂಡರು ಮೂಲೆಗುಂಪಾಗಿದ್ದಾರೆ. ಬಹು ದೊಡ್ಡಮಟ್ಟದಲ್ಲಿ ಕಾರ್ಯಕರ್ತರ ಪಡೆಗೆ ಅನ್ಯಾಯವಾಗಿದೆ. ಅವರನ್ನು ಗುರ್ತಿಸುವ ಮತ್ತು ಅವರಿಗೆ ಶಕ್ತಿ ತುಂಬುವ ಕಾರ್ಯವನ್ನು ಶ್ರೀರಾಮುಲು ಅವರು ಮಾಡಿಲ್ಲ. ಹಾಗಾಗಿ ಪುನಃ ಮೊಳಕಾಲ್ಮುರು ಕ್ಷೇತ್ರದ ಜನರನ್ನು ಅವರಿಗೆ ಒತ್ತೆಯಾಳುಗಳಾನ್ನಾಗಿ ಮಾಡಿಕೊಳ್ಳುವ ಯೋಜನೆಯನ್ನು ರೂಪಿಸಿದ್ದಾರೆ. ಪ್ರಸ್ತುತ ಕ್ಷೇತ್ರದ ಮತದಾರರು ಅತ್ಯಂತ ಬುದ್ದಿವಂತರು, ವಿದ್ಯಾವಂತರು, ರಾಜಕೀಯ ಮುತ್ಸದಿಗಳು ಇರುವ ಹಿನ್ನೆಲೆಯಲ್ಲಿ ಅವರೆಲ್ಲರೂ ಶ್ರೀರಾಮುಲು ಅವರ ನಡೆಯನ್ನು ಗಮನಿಸುತ್ತಿದ್ದಾರೆ. 4 ಹೋಬಳಿಯ ಜನರ ಅಭಿಪ್ರಾಯವನ್ನು ಸಂಗ್ರಹಿಸಿ ಟಿಕೆಟ್ ನೀಡುವುದು ಬಿಜೆಪಿಯ ವರಿಷ್ಠರು ಮಾಡಬೇಕಾದ ಕೆಲಸ. ಆದರೆ ರಾತ್ರೋರಾತ್ರಿ ಕಾಂಗ್ರೆಸ್ ಪಕ್ಷದಲ್ಲಿದ್ದ ಮಾಜಿ ಶಾಸಕರನ್ನು ಕರೆತಂದು ಬಿಜೆಪಿಯ ಟಿಕೆಟ್ ನೀಡುವುದು ಯಾವ ನ್ಯಾಯ. ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವಾಗ 2.42ಲಕ್ಷ ಮತದಾರರಲ್ಲಿ ಬಿಜೆಪಿಯ ಯಾವ ಕಾರ್ಯಕರ್ತರನ್ನು, ಮುಖಂಡರನ್ನು, ನಾಲ್ಕು ಹೋಬಳಿಯ ಜನರ ವಿಶ್ವಾಸ ಮತ್ತು ಅಭಿಪ್ರಾಯವನ್ನು ಪಡೆಯದೆ ಅವರಿಗೆ ಬೇಕಾದ ವ್ಯಕ್ತಿಗಳ ಸಮ್ಮುಖದಲ್ಲಿ ಪಕ್ಷ ಸೇರ್ಪಡೆ ಮಾಡಿಕೊಂಡಿರುವುದು ವಿಪರ್ಯಾಸದ ಸಂಗತಿಯಾಗಿದೆ. ಹಾಗಾಗಿ ಶ್ರೀರಾಮುಲು ಅವರು ಸೂಚಿಸುವ ಯಾವ ವ್ಯಕ್ತಿಗೂ ನಾವು ಮತಹಾಕುವುದಿಲ್ಲ. ಬದಲಾಗಿ ಕ್ಷೇತ್ರಕ್ಕೆ ಬದಲಿ ಅಭ್ಯರ್ಥಿಯನ್ನು ಪಕ್ಷವು ಘೋಷಿಸಬೇಕು ಎಂಬುದು ಕಾರ್ಯಕರ್ತರ, ಮುಖಂಡರ ನಿರ್ಣಯವಾಗಿದೆ” ಎಂದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಪಿ.ಜಯಪಾಲಯ್ಯ, “ಕಳೆದ 20ಷರ್ವಗಳಿಂದ ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷಸಂಘಟನೆಗಾಗಿ ಶ್ರಮಿಸಿದ್ದೇನೆ. ಬಿಜೆಪಿ ಪಕ್ಷವು ನನಗೆ ತಾಯಿಯಿದ್ದಂತೆ. ಆ ತಾಯಿಯು ನನ್ನ ಕೈಬಿಡುವುದಿಲ್ಲ ಎಂಬ ನಂಬಿಕೆ ನನಗಿದೆ. ಹಾಗಾಗಿ ಸಾಮಾನ್ಯ ಕಾರ್ಯಕರ್ತರನ್ನು ಗುರ್ತಿಸುವ ಪಕ್ಷ ಎಂಬ ಹೆಗ್ಗಳಿಗೆ ಬಿಜೆಪಿ ಪಕ್ಷಕ್ಕಿದೆ. ಈ ಹಿನ್ನೆಲೆಯಲ್ಲಿ ನನಗೆ ಟಿಕೆಟ್ ದೊರೆಯಬಹುದು ಎಂಬ ಭರವಸೆ ನನಗಿದೆ” ಎಂದರು.
ಇದೇವೇಳೆ ಮುಖಂಡರಾದ ಟಿ.ರೇವಣ್ಣ, ರಘುಮೂರ್ತಿ, ಶ್ರೀನಿವಾಸ್, ಎಂ.ವೈ.ಟ.ಸ್ವಾಮಿ, ಸೋಮಶೇಖರ್‌ಮಂಡಿಮಠ್, ದಾಸರೆಡ್ಡಿ, ಗೋವಿಂದಪ್ಪ, ನಾರಾಯಣರೆಡ್ಡಿ, ಚಂದ್ರಣ್ಣ, ಶ್ರೀರಾಮರೆಡ್ಡಿ, ಸಿಬಿ.ಮೋಹನ್, ಪರಮೇಶ್ವರಪ್ಪ, ಕುಬೇರರೆಡ್ಡಿ,ತಿಮ್ಮಾರೆಡ್ಡಿ ಅವರೂ ಇದ್ದರು.

Namma Challakere Local News
error: Content is protected !!