ಶಿಕ್ಷಣಕ್ಕೆ ಬಡತನ, ಸಿರಿತನ ತಾರತಮ್ಯವಿಲ್ಲ : ಶಾಸಕ ಟಿ.ರಘುಮೂರ್ತಿ
ಮಾದಿಗ ಸಮುದಾಯ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅನಿಸಿಕೆ.
ಚಳ್ಳಕೆರೆ : ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣ ಕ್ಷೇತ್ರ ಅತ್ಯಂತ ಮಹತ್ವತೆಯಿಂದ ಕೂಡಿದೆ, ಶೈಕ್ಷಣಿಕ ಪ್ರಗತಿಯಿಂದ ವ್ಯಕ್ತಿಯ ಸರ್ವತೋಮುಖ ಅಭಿವೃದ್ಧಿ ಸಾಧ್ಯ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
ಅವರು ನಗರದ ದಲ್ಲಾಲರ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಮಾದಿಗ ನೌಕರರ ಸಾಂಸ್ಕೃತಿಕ ಸಂಘ ರಿ, ಹಾಗೂ ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ
ಕೋಡಿಹಳ್ಳಿ ಆದಿಜಾಂಬವ ಶಾಖಾಮಠ ಶ್ರೀ ಷಡಾಕ್ಷರಿ ಮುನಿ ದೇಶೀ ಕೇಂದ್ರ ಸ್ವಾಮಿಜಿಯವರ ದಿವ್ಯ ಸಾನಿಧ್ಯದಲ್ಲಿ ನಡೆದ ಎಸ್.ಎಸ್.ಎಲ್ ಸಿ. ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತ ನೌಕರರಿಗೆ ಸನ್ಮಾನ ಸಮಾರಂಭದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಶಿಕ್ಷಣಕ್ಕೆ ಬಡತನ, ಸಿರಿತನದ ತಾರತಮ್ಯವಿಲ್ಲ. ಪರಿಶ್ರಮ ಮತ್ತು ಸತತ ಪ್ರಯತ್ನ ಅಗತ್ಯ. ಗ್ರಾಮೀಣ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪ್ರತಿಯೊಬ್ಬರೂ ಪ್ರೋತ್ಸಾಹ ನೀಡಬೇಕು. ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಶಿಕ್ಷಕರೊಂದಿಗೆ ಪೋಷಕರ ಸಹಕಾರ ಅಗತ್ಯವಾಗಿದೆ. ಅದರಲ್ಲೂ ಗ್ರಾಮೀಣ ಭಾಗದಲ್ಲಿ ಮಕ್ಕಳ ಪೋಷಕರ ಅನಕ್ಷರತೆ, ಜೀವನ ನಡೆಸಲು ಕಷ್ಟದ ಪರಿಸ್ಥಿಯಲ್ಲಿ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಾರೆ. ಇಂತಹ ಕೆಲಸವನ್ನು ಎಂದಿಗೂ ಮಾಡಬಾರದು, ಸರ್ಕಾರವು ಸಾಕಷ್ಟು ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಇದನ್ನು ಸಮಪರ್ಕವಾಗಿ ಬಳಕೆ ಮಾಡಿಕೊಂಡು ತಮ್ಮ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪ್ರೋತ್ಸಾಹ ನೀಡಬೇಕು ಎಂದರು.
ಕೋಡಿಹಳ್ಳಿ ಆದಿಜಾಂಬವ ಶಾಖಾಮಠ ಶ್ರೀ ಷಡಾಕ್ಷರಿ ಮುನಿ ದೇಶೀ ಕೇಂದ್ರ ಸ್ವಾಮಿಜಿಯವರು ಆರ್ಶಿವಚಿಸಿ,
ಮಕ್ಕಳಲ್ಲಿ ಉತ್ತಮ ಸಂಸ್ಕೃತಿ, ಸಂಸ್ಕಾರ ಬೆಳೆಸಲು ಶಿಕ್ಷಣ ಸಹಕಾರಿಯಾಗಿದೆ, ಹೀಗಾಗಿ ಎಲ್ಲ ಪೋಷಕರು, ಶಿಕ್ಷಕರು ಕಾಳಜಿ ವಹಿಸಬೇಕು, ಸಮುದಾಯದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವುದರ ಜೊತೆಗೆ ಇತರೆ ಎಲ್ಲಾ ಸಮುದಾಯದಲ್ಲಿ ಬಡ ಮಕ್ಕಳಲ್ಲಿನ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹ ನೀಡುವ ಕೆಲಸ ಹೆಚ್ಚಾಗಬೇಕಿದೆ ಎಂದು ಸಲಹೆ ನೀಡಿದರು.
ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗಾಗಿ ಶಿಕ್ಷಕರೊಂದಿಗೆ ಪಾಲಕರು ಸಹಕರಿಸಬೇಕು, ಹಿಂದುಳಿದ ಮಕ್ಕಳಿಗೆ ಪ್ರೋತ್ಸಾಹ ನೀಡಿದರೆ ಭವಿಷ್ಯದಲ್ಲಿ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಲು ಸಹಕಾರಿಯಾಗಲಿದೆ , ಮಕ್ಕಳ ಶೈಕ್ಷಣಿಕ ವಟಿಕೆಯಲ್ಲಿ ಪೋಷಕರ ಪಾತ್ರ ಮಹತ್ತರವಾಗಿದೆ, ಶಿಕ್ಷಣದೊಂದಿಗೆ ಮಾನವೀಯ ಮೌಲ್ಯಗಳು ಮಕ್ಕಳಲ್ಲಿ ಬೆಳೆಯಬೇಕಾದರೆ ಮನೆಯ ಪರಿಸರ ಹಾಗೂ ಶಾಲೆಯ ಪರಿಸರ ಎರಡೂ ಅತಿ ಮುಖ್ಯ, ಯಾವುದೇ ಶಾಲೆ ಅಥವಾ ಕಾಲೇಜಿನಲ್ಲಿ ಪಠ್ಯದಷ್ಟೇ ಇತರೆ ಚಟುವಟಿಕೆಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿದಲ್ಲಿ ಮಾತ್ರ ಉತ್ತಮ ಫಲಿತಾಂಶ ಪಡೆಯಲು ಸಾಧ್ಯ ಎಂದರು.
ಈ ಸಂದರ್ಭದಲ್ಲಿ ಯೋಜನೆ ಮತ್ತು ಸಾಂಖ್ಯಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ ಸುಧಾಕರ್, ತಾಲ್ಲೂಕು ಮಾದಿಗ ನೌಕರರ ಸಾಂಸ್ಕೃತಿಕ ಸಂಘದ ಅಧ್ಯಕ್ಷರಾದ ಡಿ.ನಾಗರಾಜ್, ನಗರಸಭೆ ಅಧ್ಯಕ್ಷೆ ಜೈತುನ್ ಬೀ ಮಾಲಿಕ್ ಸಾಬ್, ಉಪಾಧ್ಯಕ್ಷರಾದ ಸುಜಾತ ಪ್ರಹ್ಲಾದ್, ನಗರಸಭೆ ಸದಸ್ಯರುಗಳು, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಆನಂದಕುಮಾರ್, ಡಿಟಿ.ಜಗನ್ನಾಥ್, ಡಿ.ದಯಾನಂದ, ಡಿ.ಭೂತಪ್ಪ, ತಿಪ್ಪೇಸ್ವಾಮಿ, ಬೀಮರಾಜ್, ಶ್ರೀನಿವಾಸ್, ಶಿಕ್ಷಕ ಹನುಮಂತಪ್ಪ, ವಿಷ್ಣುವರ್ಧನ್, ತಿಪ್ಪೇಸ್ವಾಮಿ, ಹನುಮಂತರಾಯ, ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ತಮ್ಮ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.