ವಿದ್ಯಾರ್ಥಿಗಳು ಸಾಮಾಜಿಕ ಕಳಕಳಿ ಬೆಳಸಿಕೊಳ್ಳುವುದು ಅಗತ್ಯ; ಪಪಂ ಅಧ್ಯಕ್ಷೆ ಟಿ.ಮಂಜುಳ ಶ್ರೀಕಾಂತ್.

ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಹೇಳಿಕೆ.

ನಾಯಕನಹಟ್ಟಿ.ಆ.30
ಇಂದಿನ ಆಧುನಿಕ ಯುಗದಲ್ಲಿ ವಿದ್ಯಾರ್ಥಿಗಳು ಸ್ಪರ್ಧೆ ಎದುರಿಸಿ ಬದುಕು ಕಟ್ಟಿಕೊಳ್ಳುವುದರ ಜತೆಗೆ ಸಾಮಾಜಿಕ ಕಳಕಳಿ ಬೆಳೆಸಿಕೊಳ್ಳುವುದು ಅಗತ್ಯವಾಗಿದೆ ಎಂದು ಪಟ್ಟಣ ಪಂಚಾಯತಿ ಅಧ್ಯಕ್ಷೆ ಟಿ.ಮಂಜುಳ ಶ್ರೀಕಾಂತ್ ಹೇಳಿದರು.

ಪಟ್ಟಣದ ಎಸ್.ಟಿ.ಎಸ್.ಆರ್ ಪ್ರೌಢಶಾಲೆಯಲ್ಲಿ ಶುಕ್ರವಾರ ನಡೆದ ಪ್ರೌಢಶಾಲೆ ವಿದ್ಯಾರ್ಥಿಗಳ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ, ಕಲೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳಲ್ಲಿರುವ ಪ್ರತಿಭೆ ಹೊರತರಲು ಶಿಕ್ಷಕರು ಮತ್ತು ಪೋಷಕರು ಪ್ರತಿಭಾ ಕಾರಂಜಿಯಂತಹ ವೇದಿಕೆಗಳನ್ನು ಸಮರ್ಥವಾಗಿ ಬಳಸಿಕೊಂಡು ಉತ್ಸಾಹದಿಂದ ಪಾಲ್ಗೊಳ್ಳಬೇಕು. ಈಗಾಗಲೇ ಸರ್ಕಾರ ಶಾಲಾ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಪ್ರತಿಭಾ ಕಾರಂಜಿ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದೆ. ಮಕ್ಕಳು ತಮ್ಮಲ್ಲಿರುವ ಕಲೆ, ಸಾಹಿತ್ಯ, ಜಾನಪದ ಪ್ರಾಕಾರದ ಪ್ರತಿಭೆಯನ್ನು ತೋರಿ ಸಾಂಸ್ಕೃತಿಕವಾಗಿ ಮುಂದೆ ಬರಬೇಕು ಎಂದರು.
ಪ್ರತಿಯೊಂದು ಮಗುವಿನಲ್ಲೂ ಒಂದಲ್ಲ ಒಂದು ರೀತಿಯ ಸಾಂಸ್ಕೃತಿಕ ಪ್ರತಿಭೆ ಇದ್ದೇ ಇರುವುದು. ಅದನ್ನು ಗುರುತಿಸಿ ಅನಾವರಣ ಮಾಡುವ ಮೂಲಕ ಮಕ್ಕಳು ಸರ್ವಾಂಗೀಣ ಬೆಳವಣಿಗೆ ಸಾಧಿಸಲು ಅವಕಾಶ ಕಲ್ಪಿಸಬೇಕು. ಸೋಲು, ಗೆಲುವಿನ ಬಗ್ಗೆ ಯೋಚಿಸದೆ ಸ್ಪರ್ಧೆಗಳಲ್ಲಿ ಎಲ್ಲ ವಿದ್ಯಾರ್ಥಿಗಳು ಭಾಗವಹಿಸಬೇಕು ಎಂದು ಸಲಹೆ ನೀಡಿದರು.

ಶಿಕ್ಷಣ ಮಕ್ಕಳ ವಿದ್ಯಾರ್ಜನೆಗೆ ಮಾತ್ರ ಸೀಮಿತವಾಗಿರದೆ ಅವರಲ್ಲಿನ ಪ್ರತಿಭೆ ಹೊರಹಾಕಿ ವಿಕಾಸ ಹೊಂದಲು ಸಹಾಯ ಮಾಡುವುದು. ಇಂದು ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಎಡುವುತ್ತಿದ್ದು, ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ರೀತಿ-ನೀತಿಗಳು ಮತ್ತು ಮಾನವೀಯ ಮೌಲ್ಯಗಳು ಮರೆಯಾಗುತ್ತಿವೆ. ಮಕ್ಕಳಲ್ಲಿ ಇಂತಹ ಗುಣಗಳನ್ನು ಬೆಳೆಸುವ ಪಠ್ಯಕ್ರಮ ರೂಪುಗೊಳ್ಳಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.

ಎಸ್.ಟಿ.ಎಸ್.ಆರ್.ಪ್ರೌಢಶಾಲಾ ಕಾರ್ಯದರ್ಶಿ ಎಂ.ವೈ.ಟಿ.ಸ್ವಾಮಿ ಮಾತನಾಡಿ, ಪೋಷಕರಿಗೆ ತಮ್ಮ ಮಕ್ಕಳು ಪ್ರತಿಭೆಯನ್ನು ಗುರುತಿಸಲು ಸಾಧ್ಯವಾಗುವುದಿಲ್ಲ. ಈ ಕೆಲಸವನ್ನು ಶಿಕ್ಷಕರು ತಮ್ಮ ಮಕ್ಕಳಲ್ಲಿನ ಪ್ರತಿಭೆಯನ್ನು ಗುರುತಿಸುವ ಕೆಲಸವಾಗಬೇಕು. ಇಂದಿನ ಮಕ್ಕಳು ಪರೀಕ್ಷೆ ಮತ್ತು ಅಂಕಗಳಿಗೆ ಮಾತ್ರ ಅಧ್ಯಯನ ಸೀಮಿತವಾಗಿದೆ ಎಂಬ ಮನೋಭಾವನೆಯನ್ನು ಬೆಳಸಿಕೊಂಡಿರುತ್ತಾರೆ. ಇದನ್ನು ದಾಟಿ ಜ್ಞಾನಕ್ಕಾಗಿ ಓದು ಎಂಬ ನಿಟ್ಟಿನಲ್ಲಿ ಬೆಳೆಯಬೇಕು. ಶಿಕ್ಷಕರು ಮಕ್ಕಳ ಪ್ರತಿಭೆ ವೀಕ್ಷಿಸಿ ಯಾವುದೇ ತಾರತಮ್ಯವಿಲ್ಲದೇ ತೀರ್ಪು ನೀಡಬೇಕು ಎಂದರು.
ಈ ಸಂದರ್ಭದಲ್ಲಿ ಎಸ್.ಟಿ.ಎಸ್.ಆರ್ ಶಾಲೆಯ ಉಪ ಪ್ರಾಚಾರ್ಯ ಬಿ.ರಮೇಶ್, ಸಿ.ಆರ್.ಪಿ ಈಶ್ವರಪ್ಪ, ಮುಖ್ಯಶಿಕ್ಷಕರಾದ ಸುಜಾತ, ಹನುಮಂತಯ್ಯ, ಉಮಾ ಮಹಂತ್‍ನಾಯಕ, ಶಿಕ್ಷಕರಾದ ಫಣಿಂಧ್ರಕುಮಾರ್, ಸುರೇಶ್‍ಬಾಬು, ಕೆ.ಟಿ.ನಾಗಭೂಷಣ್ ಉಪಸ್ಥಿತರಿದ್ದರು

About The Author

Namma Challakere Local News
error: Content is protected !!