ಶಾಲಾ ಸಂಸತ್ ಚುನಾವಣೆ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2024- 25ನೇ ಸಾಲಿನ ವಿದ್ಯಾರ್ಥಿಗಳಲ್ಲಿ ಚುನಾವಣೆ ಬಗ್ಗೆ ಅರಿವು
ಚಳ್ಳಕೆರೆ : ಶಾಲಾ ಸಂಸತ್ ಚುನಾವಣೆ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2024- 25ನೇ ಸಾಲಿನ ವಿದ್ಯಾರ್ಥಿಗಳಲ್ಲಿ ಚುನಾವಣೆ ಬಗ್ಗೆ ಅರಿವು ಮೂಡಿಸಲು ಶಾಲಾ ವಿದ್ಯಾರ್ಥಿ ಸಂಸತ್ ಚುನಾವಣೆ ವಿನೂತವಾಗಿ ನಡೆಸಲಾಯಿತು.
ನಾಮಪತ್ರ ಸಲ್ಲಿಸುವಿಕೆ, ಪರಿಶಿಲನೆ, ಹಿಂತೆಗೆದುಕೊಳ್ಳುವಿಕೆ, ಚುನಾವಣಾ ಪ್ರಚಾರ, ಚುನಾವಣೆ, ಮತ ಎಣಿಕೆ ಸೇರಿದಂತೆ ಪ್ರತಿಯೊಂದಕ್ಕೂ ಚುನಾವಣಾ ಅಧಿಸೂಚನೆ ಹೊರಡಿಸಲಾಗಿತ್ತು. ಅದರಂತೆ ಅಭ್ಯರ್ಥಿಗಳು ನಿಗದಿತ ನಮೂನೆಯಲ್ಲಿ ನಾಮಪತ್ರ ತುಂಬಿ ರು.20 ಠೇವಣಿ ಭರಿಸಿ ಮುಖ್ಯ ಚುನಾವಣಾಧಿಕಾರಿ ಶಿಕ್ಷಕಿ ಗುಲ್ಜಾರ್ ಬಾನು ಅವರಿಗೆ ಸಲ್ಲಿಸಿದ್ದರು.
ಮೊದಲ ಮತದಾನದ ಅಧಿಕಾರಿ ಮತದಾರರ ಗುರುತು ದಾಖಲಿಸಿದರೆ, ಎರಡನೇ ಅಧಿಕಾರಿ ಮತದಾರರ ಎಡಗೈ ತೋರು ಬೆರಳಿಗೆ ಅಳಿಸಲಾಗದ ಶಾಯಿ ಹಾಕಿದರು. ಮತ್ತೊಬ್ಬ ಅಧಿಕಾರಿ ಮತದಾರರ ನೊಂದಣಿ ಪುಸ್ತಕದಲ್ಲಿ ಸಹಿ ಪಡೆದು ಮತ ಚಲಾಯಿಸಲು ಅನುವು ಮಾಡಿಕೊಟ್ಟರು.
ನಂತರ ಅಭ್ಯರ್ಥಿಗಳ ಸಮ್ಮುಖದಲ್ಲಿ ಮತ ಎಣಿಸಲಾಯಿತು. ಮುಖ್ಯಮಂತ್ರಿಯಾಗಿ ಸಾನಿಹ ಆಯ್ಕೆಯಾದರು, ಉಪ ಮುಖ್ಯಮಂತ್ರಿಯಾಗಿ ಉಸ್ಮಾ, ಶಿಕ್ಷಣಮಂತ್ರಿಯಾಗಿ ರಾಹಿಲಾ ಆಯ್ಕೆಯಾದರು.
ಹಿರಿಯ ಮುಖ್ಯಶಿಕ್ಷಕಿ ನಜೀಮ್ ವಿಜೇತ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿ, ಪ್ರಜಾಪ್ರಭುತ್ವದ ಪ್ರಮುಖ ಭಾಗವಾಗಿರುವ ಚುನಾವಣೆಯ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸುವ ಮೂಲಕ ನಾಯಕತ್ವ ಗುಣ ಬೆಳೆಸುವ ದಿಸೆಯಲ್ಲಿ ಶಾಲಾ ಸಂಸತ್ತು ಸಹಕಾರಿಯಾಗಿದೆ. ಪಠ್ಯದಲ್ಲಿ ಚುನಾವಣೆ ಪ್ರಕ್ರಿಯೆ ಕುರಿತು ಓದುವುದಕ್ಕಿಂತ ಇಂದು ಪ್ರಾತ್ಯಕ್ಷಿಕವಾಗಿ ವಿದ್ಯಾರ್ಥಿಗಳು ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸುವ ಮೂಲಕ ಭವಿಷ್ಯತ್ತಿನಲ್ಲಿ ಎದುರಿಸುವ ಚುನಾವಣೆಗಳ ಬಗ್ಗೆ ಅರಿವು ಮೂಡಿಸಿದಂತಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕರಾದ ನಸೀಮ್, ಸಹ ಶಿಕ್ಷಕರಾದ ಗುಲ್ಜಾರ್ ಬಾನು, ಎಚ್.ಎನ್.ಶ್ರೀಧರ್, ಉಮ್ಮೆಸಲ್ಮಾ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.