ಚಿತ್ರದುರ್ಗ ನಗರದ ದವಳಗಿರಿ ಬಡಾವಣೆಯ ಗಾಯತ್ರಿ ಶಿವರಾಂ ಇನ್ನರ್‌ವ್ಹೀಲ್ ಕ್ಲಬ್ ಸಭಾ ಭವನದಲ್ಲಿ ಶೋಭ ಮಲ್ಲಿಕಾರ್ಜುನ್‌ರ ಮನದನಿ ಕವನ ಸಂಕಲನ ಬಿಡುಗಡೆ ಸಮಾರಂಭ ನಡೆಯಿತು.
ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿದ ಸಾಹಿತಿ ವಾಸುದೇವ ನಾಡಿಗ್, ಮಾನವೀಯತೆಯ ಇತಿಮಿತಿಯಲ್ಲಿ ಪ್ರತಿಕ್ರಿಯಿಸುವ ಪರಿಣಾಮಕಾರಿ ಮಾಧ್ಯಮವೆ ಸಾಹಿತ್ಯ. ಉತ್ತಮ ಕೃತಿ ರಚನೆಗೆ ಆಳವಾದ ಅಧ್ಯಯನ, ನಿರಂತರ ಓದು, ಬಹುಮುಖ್ಯವಾಗುತ್ತದೆ. ಶೋಭರವರ ಚೊಚ್ಚಲ ಕವನಸಂಕಲನ ಮನದನಿಯಲ್ಲಿ ಹೆಣ್ಣು, ಪ್ರಕೃತಿ, ವಚನಕಾರರು, ಕೊರೋನಾ, ಶಿಕ್ಷಣ, ಸ್ಮಾರ್ಟ್ಫೋನ್ ಮತ್ತು ದೈನಂದಿನ ಸಂಗತಿಗಳು ಕವಿತೆಯ ವಸ್ತುವಾಗಿವೆ. ಸಂದರ್ಭನುಸಾರವಾಗಿ ಕವನ ರೂಪದಲ್ಲಿ ಹೊರಹೊಮ್ಮಿಸಿದ್ದಾರೆ ಎಂದರು.
ಮುಖ್ಯಅತಿಥಿ ಶ್ರೀಮತಿ ರೇಣುಕಾಪ್ರಕಾಶ್ ಮಾತನಾಡಿ, ಕವನ ಸಂಕಲನವನ್ನು ಮೂರುಸ್ತರಗಳಾಗಿ ವಿಂಗಡಿಸುತ್ತ, ಹೆಣ್ಣಿನ ಅಂತರAಗದ ತುಮುಲಗಳು, ಸಂಗಾತಿಯ ಬಗ್ಗೆ ಪ್ರೀತಿ-ಪ್ರೇಮ, ಒಲುಮೆಯ ಭಾವನೆಗಳು ಮತ್ತು ವಚನಕಾರರ ಬಗ್ಗೆ ಕನ್ನಡ ನಾಡು-ನುಡಿ ಸಂಸ್ಕೃತಿಗಳ ಬಗ್ಗೆ ವಿಮರ್ಶಿಸಿದರು.
ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆಯ ಸಂಸ್ಥಾಪಕಿ ಶ್ರೀಮತಿ ದಯಾ ಪುತ್ತೂರ್ಕರ್ ಪ್ರಾಸ್ತಾವಿಕವಾಗಿ ಮಾತನಾಡುತ್ತ, ಶ್ರೀಮತಿ ಶೋಭಾ ವೃತ್ತಿಯಲ್ಲಿ ಶಿಕ್ಷಕಿಯಾಗಿ ಪ್ರವೃತ್ತಿಯಲ್ಲಿ ಸಾಹಿತ್ಯಾಸಕ್ತಿಯನ್ನು ಬೆಳೆಸಿಕೊಂಡು ಕಡಿಮೆ ಅವಧಿಯಲ್ಲಿ ಕೃತಿಯನ್ನು ಹೊರತಂದಿರುವುದರ ಬಗ್ಗೆ ಪ್ರಶಂಸಿಸಿದರು.
ಡಾ. ಶಫಿವುಲ್ಲ ಮಾತನಾಡಿ, ಈ ಕವನ ಸಂಕಲನವು ಭಾವೈಕ್ಯತೆಯ ಭಾವನೆಯನ್ನು ಹೊರಸೂಸುತ್ತಿದೆ. ಪ್ರಸ್ತುತ ದಿನಮಾನದ ವಿದ್ಯಮಾನಗಳಿಗೆ ಹಿಡಿದ ಕನ್ನಡಿಯಾಗಿದೆ ಎಂದರು.
ಮತ್ತೋರ್ವ ಅತಿಥಿ ಮುರಳಿ ಬೆಳಕು ಪ್ರಿಯ ವೈವಾಹಿಕ ರಜತ ಮಹೋತ್ಸವ ದಿನದಂದೇ ಕೃತಿ ಬಿಡುಗಡೆಯಾಗುತ್ತಿರುವುದಕ್ಕೆ ದಂಪತಿಗಳನ್ನು ಅಭಿನಂದಿಸಿದರು.
ಕೃತಿಯ ರಚನಕಾರರಾದ ಶ್ರೀಮತಿ ಶೋಭಾ ಮಲ್ಲಿಕಾರ್ಜುನ್ ತಮ್ಮ ಮನದಾಳದ ಮಾತುಗಳನ್ನಾಡಿದರು. ಇತಿಹಾಸ ಸಂಶೋಧಕ ಡಾ. ಬಿ. ರಾಜಶೇಖರಪ್ಪ ಮಾತನಾಡಿದರು.
ಪ್ರಮಥ ಎಂ.ಎA. ವಚನ ಪ್ರಾರ್ಥನೆ ಮಾಡಿದರು. ಎಂ.ಜಿ. ಮಲ್ಲಿಕಾರ್ಜುನ್ ಸ್ವಾಗತಿಸಿದರು. ಶ್ರೀಮತಿ ಜಯ ಪ್ರಾಣೇಶ್ ನಿರೂಪಿಸಿದರು. ಸಿ.ಎಂ. ಪರಿಣಿತ್ ವಂದಿಸಿದರು.