ಪೊಲೀಸರ ಕರ್ತವ್ಯ ನಿಷ್ಠೆಯಿಂದ ಜನರು ಶಾಂತಿಯುತ ಹಾಗೂ ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬಿ.ಎಸ್.ರೇಖಾ ಹೇಳಿದರು.
ನಗರದ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಆವರಣದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಪೊಲೀಸ್ ಹುತಾತ್ಮರ ದಿನಾಚರಣೆಯಲ್ಲಿ ಹುತಾತ್ಮರ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.
ಪೊಲೀಸ್ ಇಲಾಖೆ ಇಲ್ಲದೇ ಇದ್ದಿದ್ದರೆ ನಾವು ನೆಮ್ಮದಿಯಾಗಿ ಮನೆಯಲ್ಲಿರಲು ಸಾಧ್ಯವಾಗುತ್ತಿರಲಿಲ್ಲ. ದೇಶದ ಹೊರಗಡೆ ದೇಶ ಕಾಯುವ ಯೋಧ, ದೇಶದ ಒಳಗಡೆ ನಮ್ಮ ಕಾಯುವ ಪೊಲೀಸರು ಬಹಳ ಮುಖ್ಯ ಪಾತ್ರವಹಿಸುತ್ತಾರೆ. ತಮ್ಮ ಪ್ರಾಣವನ್ನೂ ಲೆಕ್ಕಿಸದೇ ಹೋರಾಟ ಮಾಡುತ್ತಾರೆ. ಧೈರ್ಯವಾಗಿ ಮುನ್ನುಗ್ಗುತ್ತಾರೆ. ಇಂತಹ ಸಂದರ್ಭದಲ್ಲಿ ಪೊಲೀಸರು ಹುತಾತ್ಮರಾಗುವ ಸಾಧ್ಯತೆಗಳು ಇವೆ. ಹೇಡಿಗಳಂತೆ ನಮ್ಮ ಪೊಲೀಸರು ಎಂದೂ ಹಿಂದೆ ಬಿದ್ದಿಲ್ಲ. ಧೈರ್ಯವಂತರಾಗಿ ಮುನ್ನುಗ್ಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪೊಲೀಸರು ನೇಮಕಗೊಂಡ ಸಮಯದಲ್ಲಿಯೇ ದೇಶ ರಕ್ಷಣೆಯ ಜವಾಬ್ದಾರಿಯುತ ಕೆಲಸ ಒಪ್ಪಿ, ಸ್ವೀಕರಿಸುತ್ತಾರೆ. ಯಾವುದೇ ರೀತಿಯ ಆಸೆ ಇಲ್ಲದೇ ದಿನದ 24 ಗಂಟೆಯೂ ಶ್ರದ್ಧೆಯಿಂದ ಕಾರ್ಯನಿರ್ವಹಿಸುತ್ತಾರೆ. ಹಾಗಾಗಿ ನಮ್ಮ ಪೊಲೀಸರನ್ನು ನಾವು ಸಹೋದರ-ಸಹೋದರಿಯರಾಗಿ ಸ್ವೀಕರಿಸಬೇಕು ಎಂದು ಆಶಯವ್ಯಕ್ತಪಡಿಸಿದರು.
ಯಾವ ಪೊಲೀಸರೂ ಕೂಡ ಹಬ್ಬದ ಸಂಭ್ರಮದಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ. ಹಬ್ಬಗಳಲ್ಲಿ ಅಹಿತಕರ ಘಟನೆ ನಡೆಯಲು ಅವಕಾಶ ನೀಡದೇ, ಸಾರ್ವಜನಿಕರು ನೆಮ್ಮದಿಯ ಜೀವನ ನಡೆಸಲು ಅನುವಾಗುವಂತೆ ಪೊಲೀಸರು ಕುಟುಂಬದಿಂದ ದೂರವಿದ್ದು, ನಾವೆಲ್ಲರೂ ಸಂಭ್ರಮದಿಂದ ಹಬ್ಬವನ್ನು ಆಚರಣೆ ಮಾಡಲು ಅವಕಾಶ ಮಾಡಿಕೊಡುತ್ತಾರೆ ಎಂದು ತಿಳಿಸಿದ ಅವರು, ಪೊಲೀಸರು ಆದಷ್ಟು ತಮ್ಮ ಕುಟುಂಬದ ಕಡೆಯೂ ಗಮನಹರಿಸುವಂತೆ ಸಲಹೆ ನೀಡಿದರು.
ಜಿಲ್ಲಾ ರಕ್ಷಣಾಧಿಕಾರಿ ಧಮೇಂದ್ರ ಕುಮಾರ್ ಮೀನಾ ಮಾತನಾಡಿ, ಪ್ರತಿ ವರ್ಷವೂ ಅಕ್ಟೋಬರ್ 21ರಂದು ಪೊಲೀಸ್ ಹುತಾತ್ಮ ದಿನಾಚರಣೆ ಆಚರಿಸಿ, ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸಲಾಗುತ್ತದೆ. ಈ ವರ್ಷ 2022ರ ಸೆಪ್ಟೆಂಬರ್ 1 ರಿಂದ 2023ರ ಆಗಸ್ಟ್ 31 ರವರೆಗೆ ದೇಶದಲ್ಲಿ ಒಟ್ಟು 189 ಮಂದಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕರ್ತವ್ಯದಲ್ಲಿರುವಾಗ ಹುತಾತ್ಮರಾಗಿದ್ದಾರೆ. ಇದರಲ್ಲಿ ರಾಜ್ಯದ ಒಟ್ಟು 16 ಮಂದಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹುತಾತ್ಮರಾಗಿದ್ದಾರೆ ಎಂದು ತಿಳಿಸಿದ ಅವರು, ಹುತಾತ್ಮರ ಹೆಸರುಗಳನ್ನು ಇದೇ ವೇಳೆ ಸ್ಮರಿಸಿದರು.
ಪೊಲೀಸ್ ಹುತಾತ್ಮರ ಸ್ಮಾರಕಕ್ಕೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬಿ.ಎಸ್.ರೇಖಾ, ಜಿಲ್ಲಾ ರಕ್ಷಣಾಧಿಕಾರಿ ಧಮೇಂದ್ರ ಕುಮಾರ್ ಮೀನಾ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಸ್.ಜೆ.ಕುಮಾರಸ್ವಾಮಿ, ಐಮಂಗಲ ಪೊಲೀಸ್ ತರಬೇತಿ ಶಾಲೆ ಪ್ರಾಂಶುಪಾಲ ಪಾಪಣ್ಣ, ಗೃಹ ರಕ್ಷಕ ದಳದ ಜಿಲ್ಲಾ ಕಮಾಂಡರ್ ಸಿ.ಕೆ.ಸಂಧ್ಯಾ ಸೇರಿದಂತೆ ಪೊಲೀಸ್ ಅಧಿಕಾರಿಗಳು ಹುತಾತ್ಮರ ಸ್ಮಾರಕಕ್ಕೆ ಪುಷ್ಪಚಕ್ರ ಅರ್ಪಿಸಿ, ಗೌರವ ಸಲ್ಲಿಸಿದರು. ಹುತಾತ್ಮರ ಗೌರವ ಸೂಚಕವಾಗಿ ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಲಾಯಿತು.
ಈ ಸಂದರ್ಭದಲ್ಲಿ ಪೊಲೀಸ್ ಉಪಾಧೀಕ್ಷಕರಾದ ಅನಿಲ್ ಕುಮಾರ್, ಲೋಕೇಶ್ವರಪ್ಪ, ಜಿಲ್ಲಾ ಪೊಲೀಸ್ ಕಚೇರಿಯ ಸಹಾಯಕ ಆಡಳಿತಾಧಿಕಾರಿ ಪುಷ್ಪಾ ಸೇರಿದಂತೆ ಪೊಲೀಸ್ ಅಧಿಕಾರಿಗಳು, ಸಾರ್ವಜನಿಕರು ಇದ್ದರು.

About The Author

Namma Challakere Local News
error: Content is protected !!