ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸೂಚನೆ
ಬಿತ್ತನೆ ಬೀಜ, ರಸಗೊಬ್ಬರ ಕೊರತೆಯಾಗದಂತೆ ಕ್ರಮವಹಿಸಿ
ಚಿತ್ರದುರ್ಗ(ಕರ್ನಾಟಕ ವಾರ್ತೆ)ಮೇ.22:
ಮುಂಗಾರು ಪೂರ್ವದಲ್ಲಿಯೇ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದೆ. ರೈತರು ಭೂಮಿಯನ್ನು ಹದ ಮಾಡಿಕೊಂಡು ಬಿತ್ತನೆಗೆ ಸಿದ್ಧತೆ ನಡೆಸಿದ್ದಾರೆ. ಕೃಷಿ ಅಧಿಕಾರಿಗಳು ಬಿತ್ತನೆ ಬೀಜ ಹಾಗೂ ಅಗತ್ಯ ರಸಗೊಬ್ಬರಗಳು ಕೊರತೆಯಾಗದಂತೆ ಕ್ರಮ ವಹಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ 2025-26ನೇ ಸಾಲಿನ ಮುಂಗಾರು ಹಂಗಾಮಿನ ಪೂರ್ವ ಸಿದ್ಧತೆ, ಬಿತ್ತನೆ ಬೀಜ ಮತ್ತು ರಸಗೊಬ್ಬರ ಇತ್ಯಾದಿ ಕೃಷಿ ಪರಿಕರಗಳ ಯೋಜನೆ ಮತ್ತು ಲಭ್ಯತೆ ಕುರಿತು ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬಿತ್ತನೆ ಬೀಜ ಹಾಗೂ ರಸಗೊಬ್ಬರಕ್ಕೆ ರೈತರು ಸಾಲುಗಟ್ಟಿ ನಿಲ್ಲುವಂತಾಗಬಾರದು. ಕಾಳ ಸಂತೆಯಲ್ಲಿ ಹೆಚ್ಚಿನ ದರಕ್ಕೆ ಮಾರಾಟವಾಗುವುದನ್ನು ಅಧಿಕಾರಿಗಳು ತಡೆಗಟ್ಟಬೇಕು. ಬೇಡಿಕೆಗೆ ಅನುಸಾರವಾಗಿ ಬಿತ್ತನೆ ಬೀಜ ಹಾಗೂ ರಸಗೊಬ್ಬರದ ಅಗತ್ಯ ದಾಸ್ತಾನು ಶೇಖರಿಸಿಡಬೇಕು. ಕೃಷಿ ಇಲಾಖೆಯ ಸಂಚಾರಿ ಮಣ್ಣು ಪರೀಕ್ಷಾ ಕೇಂದ್ರಗಳ ಸದುಪಯೋಗಪಡಿಸಿಕೊಂಡು ರೈತರ ಜಮೀನಿನ ಮಣ್ಣಿನ ಪರೀಕ್ಷೆ ನಡೆಸಬೇಕು. ರೈತರಿಗೆ ಮಣ್ಣಿನ ಫಲವತ್ತತೆಯ ವರದಿಯನ್ನು ನೀಡಬೇಕು. ಇದನ್ನು ಆಧರಿಸಿ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಬಳಕೆ ಮಾಡಲು ರೈತರಿಗೆ ಅಧಿಕಾರಿಗಳು ಶಿಫಾರಸ್ಸು ಮಾಡಬೇಕು. ಇದರಿಂದ ಅನಾವಶ್ಯಕವಾಗಿ ಮಣ್ಣಿಗೆ ರಾಸಾಯನಿಕ ಗೊಬ್ಬರಗಳನ್ನು ಸುರಿಯುವುದು ತಪ್ಪುತ್ತದೆ. ಮಣ್ಣಿನ ಫಲವತ್ತತೆ ಆಧರಿಸಿ ಬೆಳೆ ಬೆಳೆಯುವುದರಿಂದ ರೈತರಿಗೆ ಆರ್ಥಿಕವಾಗಿ ಹೆಚ್ಚಿನ ನಷ್ಟ ಉಂಟಾಗುವುದಿಲ್ಲ. ರೈತರು ಸಾಲದ ಸುಳಿಯಲ್ಲಿ ಸಿಲುಕುವುದಿಲ್ಲ. ರೈತರು ಕೃಷಿಯೊಂದಿಗೆ ಪಶು ಸಂಗೋಪನೆ ಕೈಗೊಂಡು ಸಮಗ್ರ ಬೇಸಾಯ ಪದ್ಧತಿಯನ್ನು ಅಳವಡಿಸಿಕೊಳ್ಳಲು ಪ್ರೋತ್ಸಾಹ ನೀಡಬೇಕು. ಕೊಟ್ಟಿಗೆ ಹಾಗೂ ಸಾವಯವ ಗೊಬ್ಬರಗಳನ್ನು ಬಳಸುವುದರಿಂದ ಮಣ್ಣಿನ ಫಲವತ್ತತೆ ಹಾಳಾಗುವುದಿಲ್ಲ. ಈ ಕುರಿತು ರೈತರಿಗೆ ಮನದಟ್ಟು ಮಾಡಿಕೊಡಬೇಕು. ಡಿಎಪಿ ರಸಗೊಬ್ಬರಕ್ಕೆ ಪರ್ಯಾಯವಾಗಿ ಇತರೆ ಸಂಯುಕ್ತ ರಸ ಗೊಬ್ಬರಗಳನ್ನು ಬಳಸಲು ರೈತರಿಗೆ ಸಲಹೆ ನೀಡಬೇಕು ಎಂದು ಅಪರ ಜಿಲ್ಲಾಧಿಕಾರಿ ಬಿ ಟಿ ಕುಮಾರಸ್ವಾಮಿ ಹೇಳಿದರು.
12,924 ಕ್ವಿಂಟಾಲ್ ಬಿತ್ತನೆ ಬೀಜ ಸಂಗ್ರಹಣೆ: ಜನವರಿಯಿಂದ ಮೇ ತಿಂಗಳವರೆಗೆ ಜಿಲ್ಲೆಯಲ್ಲಿ 79.9 ಮಿ.ಮೀ. ವಾಡಿಕೆ ಮಳೆ ನಿರೀಕ್ಷೆ ಇತ್ತು. ಆದರೆ ಜಿಲ್ಲೆಯಲ್ಲಿ ಈವರೆಗೆ 135.8 ಮಿ.ಮೀ.ಮಳೆಯಾಗಿದೆ. ಇದರಿಂದಾಗಿ ಜಿಲ್ಲೆಯಲ್ಲಿ ಬಿತ್ತನೆ ಚಟುವಟಿಕೆಗಳು ಗರಿ ಗೆದರಿವೆ. ಶೇಂಗಾ, ಮೆಕ್ಕೆಜೋಳ, ರಾಗಿ, ತೊಗರಿ, ಸೂರ್ಯಕಾಂತಿ, ಹೆಸರು, ಹಲಸಂದಿ, ಸಿರಿಧಾನ್ಯ, ಹತ್ತಿ ಬೆಳೆಗಳನ್ನು ಹೆಚ್ಚಾಗಿ ಬೆಳೆಯುತ್ತಾರೆ. ಕೃಷಿ ಇಲಾಖೆಯಿಂದ ಒಟ್ಟು 31454 ಕ್ವಿಂಟಾಲ್ ಬಿತ್ತನೆ ಬೀಜದ ಗುರಿ ನಿಗದಿ ಪಡಿಸಿಕೊಂಡಿದ್ದು, ಈಗಾಗಲೇ 12,924 ಕ್ವಿಂಟಾಲ್ ಬಿತ್ತನೆ ಬೀಜದ ದಾಸ್ತಾನು ಸಂಗ್ರಹಣೆ ಮಾಡಲಾಗಿದೆ. ಜುಲೈ 2ನೇ ವಾರದವರೆಗೂ ಬಿತ್ತನೆ ಮಾಡಲು ಅವಕಾಶವಿದೆ ಎಂದು ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕ ಮಂಜುನಾಥ್ ಸಭೆಯಲ್ಲಿ ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಏಪ್ರಿಲ್-25 ರಿಂದ ಮಾರ್ಚ್-26 ವರೆಗೆ ಒಟ್ಟು 94,546 ಮೆಟ್ರಿಕ್ ಟನ್ ರಸಗೊಬ್ಬರದ ಬೇಡಿಕೆ ನಿರೀಕ್ಷೆಯಿದೆ. ಇದುವರೆಗೂ ಒಟ್ಟು 32,045 ಮೆಟ್ರಿಕ್ ಟನ್ ಹೊಸ ಗೊಬ್ಬರ ದಾಸ್ತಾನು ಸಂಗ್ರಹಿಸಲಾಗಿದ್ದು, 12,567 ಮೆಟ್ರಿಕ್ ಟನ್ ಮಾರಾಟವಾಗಿದೆ. 19,477 ಮೆಟ್ರಿಕ್ ಟನ್ ಗೊಬ್ಬರ ಉಳಿಕೆಯಾಗಿದೆ. ಕೃಷಿ ಇಲಾಖೆಯ 22 ರೈತಸಂಪರ್ಕ ಕೇಂದ್ರ ಹಾಗೂ 13 ಹೆಚ್ಚುವರಿ ವಿತರಣಾ ಕೇಂದ್ರಗಳಲ್ಲಿ ಸಹಾಯ ಧನದಡಿ ಬೆತ್ತನೆ ಬೀಜಗಳನ್ನು ವಿತರಣೆ ಮಾಡಲಾಗುವುದು. ಇದನ್ನು ಹೊರತುಪಡಿಸಿ 59 ಕೃಷಿಪತ್ತಿನ ಸಹಕಾರ ಸಂಘಗಳು, 26 ರೈತ ಉತ್ಪಾದಕ ಸಂಸ್ಥೆಗಳು, 283 ಖಾಸಗಿ ಮಾರಾಟಗಾರರು ಬಿತ್ತನೆ ಬೀಜ ಮಾರಾಟ ಮಾಡಲಿದ್ದಾರೆ. ಕಳಪೆ ಹಾಗೂ ಹೆಚ್ಚಿನ ದರಕ್ಕೆ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಮಾರಾಟ ಮಾಡದಂತೆ ಈಗಾಗಲೇ ಸಂಬಂಧಪಟ್ಟವರಿಗೆ ಎಚ್ಚರಿಕೆ ನೀಡಲಾಗಿದೆ. ತೊಗರಿ, ಶೇಂಗಾ, ಸೂರ್ಯಕಾಂತಿ ಮುಸುಕಿನ ಜೋಳ, ರಾಗಿ ಮತ್ತು ಸಿರಿಧಾನ್ಯ ಬೆಳೆಗಳಲ್ಲಿ ಉತ್ತಮ ಇಳುವರಿ ಪಡೆಯಲು ಸುಧಾರಿತ ಬಿತ್ತನೆ ಬೀಜ ಹಾಗೂ ನವೀನ ತಾಂತ್ರಿಕತೆಗಳನ್ನು ಅಳವಡಿಸಿಕೊಳ್ಳಲು ರೈತರಿಗೆ ಶಿಫಾರಸ್ಸು ಮಾಡಲಾಗುತ್ತಿದೆ. ರಾಷ್ಟ್ರೀಯ ಖಾದ್ಯ ತೈಲ ಅಭಿಯಾನದಡಿ ಎಣ್ಣೆಕಾಳುಗಳಾದ ಶೇಂಗಾ, ಸೂರ್ಯಕಾಂತಿ, ಹರಳೆ ಬಿತ್ತನೆ ಮಾಡಲು ಪ್ರೋತ್ಸಾಹ ನೀಡಲಾಗುತ್ತಿದೆ. ಯೂರಿಯಾ, ಡಿಎಪಿ, ಎಂಓಪಿ, ಕಾಂಪ್ಲೆಕ್ಸ್ ಹಾಗೂ ಎಸ್ಎಸ್ಪಿ ರಸಗೊಬ್ಬರಗಳ ಜೊತೆಗೆ ಲಘು ಪೋಷಕಾಂಶಗಳು, ಪೋಟಾಸಿಯಂ ಹಾಗೂ ಗಂಧಕ ಸಾರಗಳನ್ನು ಒದಗಿಸುವ ಹೊಸ ಗೊಬ್ಬರಗಳನ್ನು ಬಳಸಲು ರೈತರಿಗೆ ಸಲಹೆ ನೀಡಲಾಗುತ್ತಿದೆ ಎಂದು ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕ ಮಂಜುನಾಥ್ ತಿಳಿಸಿದರು.
ಇದೇ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಅವರು ರೈತರ ಸಲಹೆ ಕರ ಪತ್ರಗಳನ್ನು ಬಿಡುಗಡೆ ಮಾಡಿ, ರಸಗೊಬ್ಬರ ಮಾರಾಟ ಮಾಡುವ ಪಿಓಎಸ್ ಯಂತ್ರಗಳಿಗೆ ಚಾಲನೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಗಾಯಿತ್ರಿ, ಕೃಷಿ ಉಪ ನಿರ್ದೇಶಕ ಕೆ.ಎಸ್.ಶಿವಕುಮಾರ್, ಕೃಷಿ ಇಲಾಖೆ ಜಾರಿ ದಳದ ಸಹಾಯಕ ನಿರ್ದೇಶಕರಾದ ಮಲ್ಲನಗೌಡ, ಜೆ,ಉಲ್ಪತ್ ಜೈಬ್, ಇಪ್ಕೋ ಸಂಸ್ಥೆಯ ಕ್ಷೇತ್ರಾಧಿಕಾರಿ ಚಿದಂಬರಮೂರ್ತಿ, ಜಿಲ್ಲಾ ರಸಗೊಬ್ಬರ ಮಾರಾಟಗಾರರ ಯೂನಿಯನ್ ಅಧ್ಯಕ್ಷ ಜಿ.ಪಿ.ರೇವಣಸಿದ್ದಪ್ಪ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

