ಹಿರೇಹಳ್ಳಿ ಗ್ರಾಮದ ವಿವಿಧ ಮೂಲಭೂತ ಸೌಲಭ್ಯಗಳಿಗೆ ಒತ್ತಾಯಿಸಿ ತಹಶಿಲ್ದಾರ್ ಗೆ ಮನವಿ
ಚಳ್ಳಕೆರೆ: ತಾಲೂಕಿನ ಹಿರೇಹಳ್ಳಿ ಗ್ರಾಮದ ವಿವಿಧ ಮೂಲಭೂತ ಸೌಲಭ್ಯಗಳಿಗೆ ಒತ್ತಾಯಿಸಿ ಅಂಬೇಡ್ಕರ್ ಯುವಕ ಸಂಘ ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಾಗೂ ರೈತ ಸಂಘಟನೆಗಳ ವತಿಯಿಂದ ಗ್ರಾಮಸ್ಥರು ತಹಶೀಲ್ದಾರ್ ಗೆ ಮನವಿ ಸಲ್ಲಿಸಿದರು.
ನಗರದ ಚಳ್ಳಕೆರಮ್ಮ ದೇವಸ್ಥಾನದಿಂದ ತಮಟೆ ಸದ್ದಿನೊಂದಿಗೆ ಪಾದಯಾತ್ರೆಯಲ್ಲಿ ಆಗಮಿಸಿದ ಪ್ರತಿಭಟನಾಕಾರರು ಜಿಲ್ಲಾ ಹಾಗೂ ತಾಲೂಕು ಆಡಳಿತದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಈ ವೇಳೆ ಮಾತಾಡಿದ ರೈತ ಮುಖಂಡ ಬಸವ ರೆಡ್ಡಿ ತಾಲೂಕಿನ 40 ಗ್ರಾಮ ಪಂಚಾಯಿತಿಗಳಲ್ಲಿ ಹಿರೇಹಳ್ಳಿ ಗ್ರಾಮ ಪಂಚಾಯತಿಯು ಬಹುದೊಡ್ಡ ಹಾಗೂ ಎ ಗ್ರೇಡ್ ಪಂಚಾಯತಿಯಾಗಿದ್ದು ಗ್ರಾಮದಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರು ಹಾಗೂ ಇತರ ಎಲ್ಲಾ ಜಾತಿಯ ಜನರು ವಾಸಿಸುತ್ತಿದ್ದು ಪಂಚಾಯಿತಿಗೆ ರುದ್ರಮನಹಳ್ಳಿ ಪಾಲನಾಯಕನ ಕೋಟೆ ಕಾಕಿ ಬೋರನಕಟ್ಟಿ ಸೇರಿದಂತೆ ಹಲವು ಹಳ್ಳಿಗಳು ಇದರ ವ್ಯಾಪ್ತಿಗೆ ಬರಲಿದ್ದು ಸುಮಾರು ಹತ್ತರಿಂದ ಹನ್ನೊಂದು ಸಾವಿರ ಜನಸಂಖ್ಯೆ ಇಲ್ಲಿ ವಾಸಿಸುತ್ತಿದ್ದು ಬೆಳೆಯುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಮೂಲಭೂತ ಸೌಲಭ್ಯಗಳ ಕೊರತೆ ಎದ್ದು ಕಾಣುತ್ತಿದೆ ಸೌಲಭ್ಯಗಳಲ್ಲಿ ಆರೋಗ್ಯ ಕೇಂದ್ರ ವಸತಿ ಸಮಸ್ಯೆ ಪ್ರಾಥಮಿಕ ವಸತಿ ಶಾಲೆ ಹಿರೇಹಳ್ಳಿ ಗ್ರಾಮದ ಸ್ಟಾಂಡ್ಡ್ ಬಳಿ ಸಾರ್ವಜನಿಕ ಶೌಚಾಲಯ ಗ್ರಾಮದಲ್ಲಿ ಅಂಬೇಡ್ಕರ್ ವಾಲ್ಮೀಕಿ ಬಸವಣ್ಣ ಪುತ್ತಳಿಗಳ ನಿರ್ಮಾಣ ಪೊಲೀಸ್ ಠಾಣೆ ಮಂಜೂರಾತಿ ರೈತರ ಜಮೀನುಗಳಿಗೆ ಹೋಗಲು ದಾರಿ ವ್ಯವಸ್ಥೆ ಸೇರಿದಂತೆ ಹಲವು ಸಮಸ್ಯೆಗಳಿದ್ದು ತಾಲೂಕು ಆಡಳಿತದ ದಂಡಾಧಿಕಾರಿಗಳು ಕೂಡಲೇ ಗ್ರಾಮಕ್ಕೆ ಭೇಟಿ ನೀಡಿ ವಸತಿ ಸಮಸ್ಯೆಯನ್ನು ಬಗೆಹರಿಸಬೇಕು ಹಾಗೂ ಇನ್ನಿತರ ಸಮಸ್ಯೆಗಳ ಬಗ್ಗೆ ಕುಲಂಕುಶವಾಗಿ ಪರಿಹಾರ ದೊರಕಿಸಿಕೊಡಬೇಕು ಎಂದು ಆಗ್ರಹಿಸಿದರು.
ಮನವಿ ಸ್ವೀಕರಿಸಿ ಮಾತಾಡಿದ ತಹಶೀಲ್ದಾರ್ ರೆಹನ್ ಪಾಶ ಮುಂದಿನ ದಿನಗಳಲ್ಲಿ ಹಿರೇಹಳ್ಳಿ ಗ್ರಾಮಕ್ಕೆ ಅಧಿಕಾರಿಗಳ ಸಮೇತ ಭೇಟಿ ನೀಡಿ ಗ್ರಾಮದ ಸಮಸ್ಯೆಗಳನ್ನು ಆಲಿಸಿ ಪರಿಹಾರ ಒದಗಿಸಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ರೈತ ಮುಖಂಡರಾದ ಬಸವ ರೆಡ್ಡಿ ನಿಜಲಿಂಗಪ್ಪ ಜಿಎಚ್ ತಿಪ್ಪೇಸ್ವಾಮಿ ರುದ್ರಮುನಿ ಟಿ ಮಂಜುನಾಥ ತಿಪ್ಪೇಸ್ವಾಮಿ ಡಿಎಸ್ಎಸ್ ಜಿಲ್ಲಾ ಸಂಘಟನೆ ಸಂಚಾಲಕ ರಾಜಣ್ಣ ವಕೀಲ ರುದ್ರಮನಿ ನಾಗರಾಜ್ ಯರ್ರಿಸ್ವಾಮಿ ತಿಪ್ಪೇಸ್ವಾಮಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

