ನೂತನ ಲಿಡ್ಕರ್ ಭವನದಲ್ಲಿ ಲೆದರ್ ಎಂಪೋರಿಯಂ ಪ್ರಾರಂಭ
ಮಕ್ಕಳಿಗಾಗಿ ಲೆದರ್ ಶೂ ಹಾಗೂ ಬ್ಯಾಗ್ ಪರಿಚಯ
ಲಿಡ್ಕರ್ ವ್ಯವಸ್ಥಾಪಕ ನಿರ್ದೇಶಕಿ ಡಾ. ವಸುಧಂರಾ.ಕೆ.ಎಂ ಹೇಳಿಕೆ
ಚಿತ್ರದುರ್ಗ :
ಉನ್ನತ ಗುಣಮಟ್ಟದ ಚರ್ಮೋತ್ಪನ್ನಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಲಿಡ್ಕರ್, ಮುಂಬರುವ ದಿನಗಳಲ್ಲಿ ಮಕ್ಕಳಿಗಾಗಿ ಲೆದರ್ ಶೂ ಹಾಗೂ ಬ್ಯಾಗ್ಗಳನ್ನು ಮಾರಾಟ ಮಾಡಲಿದೆ. ಈ ಮೂಲಕ ಲಿಡ್ಕರ್ ಉತ್ಪನ್ನಗಳಲ್ಲಿ ವೈವಿಧ್ಯತೆ ತರಲು ಪ್ರಯತ್ನಿಸಲಾಗುತ್ತಿದೆ ಎಂದು ಲಿಡ್ಕರ್ ವ್ಯವಸ್ಥಾಪಕ ನಿರ್ದೇಶಕಿ ಡಾ: ವಸುಂಧರಾ.ಕೆ.ಎಂ ಹೇಳಿದರು.
ಹೊಸ ವರ್ಷದ ಆರಂಭದ ಹಿನ್ನಲೆಯಲ್ಲಿ ಚಿತ್ರದುರ್ಗ ನಗರದ ಪ್ರವಾಸಿ ಮಂದಿರದ ಬಳಿ ಇರುವ ಲಿಡ್ಕರ್ ಭವನಕ್ಕೆ ಸ್ಥಳಾಂತರಗೊಂಡಿರುವ ಲಿಡ್ಕರ್ ಲೆದರ್ ಎಂಪೋರಿಯಂಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
1976ರಲ್ಲಿ ರಾಜ್ಯ ಸರ್ಕಾರದಿಂದ ಸ್ಥಾಪನೆಯಾದ ಡಾ.ಬಾಬು ಜಗಜೀವನ್ ರಾಮ್ ಚರ್ಮದ ಉತ್ಪನ್ನಗಳ ಅಭಿವೃದ್ಧಿ ನಿಗಮ, ರಾಜ್ಯದ ಪರಿಶಿಷ್ಟ ವರ್ಗದ ಚರ್ಮ ಕುಶಲಕರ್ಮಿಗಳ ಏಳಿಗೆಗೆ ಶ್ರಮಿಸುತ್ತಿದೆ. ಲಿಡ್ಕರ್ ಎನ್ನುವ ಬ್ರಾಂಡ್ನೊಂದಿಗೆ ಉತ್ತಮ ಗುಣಮಟ್ಟದ ಚರ್ಮದ ಚಪ್ಪಲಿ, ಬ್ಯಾಗು, ಪರ್ಸ್, ಬೆಲ್ಟ್ ಮಾರಾಟ ಮಾಡಲಾಗುತ್ತಿದೆ. ವರ್ಷಕ್ಕೆ ಸರಾಸರಿ ರೂ.25 ರಿಂದ 30 ಕೋಟಿಯಷ್ಟು ವಹಿವಾಟು ನಡೆಸುತ್ತಿದೆ. ಬೆಂಗಳೂರು, ಮೈಸೂರು, ಚಿತ್ರದುರ್ಗ, ದಾವಣಗೆರೆ, ಸೇರಿದಂತೆ ಇತರೆ 8 ನಗರಗಳಲ್ಲಿ ಲಿಡ್ಕರ್ ಲೆದರ್ ಎಂಪೋರಿಯಂಗಳನ್ನು ತರೆದು ನೇರವಾಗಿ ಗ್ರಾಹಕರಿಗೆ ಚರ್ಮದ ವಸ್ತುಗಳನ್ನು ಮಾರಾಟ ಮಾಡಲಾಗುತ್ತಿದೆ. ಸದ್ಯ ಲಿಡ್ಕರ್ ಲಾಭದ ಹಾದಿಗೆ ಮರಳಿದೆ ಎಂದು ವ್ಯವಸ್ಥಾಪಕ ನಿರ್ದೇಶಕಿ ಡಾ.ವಸುಂಧರಾ.ಕೆ.ಎಂ ತಿಳಿಸಿದರು.

