ಚಿತ್ರದುರ್ಗ ಜೂನ್.26: ಮಾದಕ ದ್ರವ್ಯದ ವ್ಯಸನಮುಕ್ತ ಸಮಾಜ ನಿರ್ಮಾಣ ನಮ್ಮೆಲ್ಲರ ಜವಾಬ್ದಾರಿ ಎಂದು ಚಿತ್ರದುರ್ಗ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್ ಹೇಳಿದರು.
ಇಲ್ಲಿನ ಬುದ್ಧನಗರದ ಆರೋಗ್ಯ ಕೇಂದ್ರ ವ್ಯಾಪ್ತಿಯ ವಿವೇಕಾನಂದ ನಗರ ಜಟ್‍ಪಟ್ ನಗರ ಸುತ್ತಮುತ್ತ ದೇವರೆಡ್ಡಿ ಶಾಲೆಯ ವಿದ್ಯಾರ್ಥಿಗಳಿಂದ ಸೋಮವಾರ ಜನಜಾಗೃತಿ ಜಾಥಾ ನಡೆಸುವ ಮೂಲಕ ಅಂತರಾಷ್ಟ್ರೀಯ ಮದ್ಯ ವ್ಯಸನ ಕಳ್ಳ ಸಾಗಾಣಿಕೆ ವಿರೋಧಿ ದಿನ ಆಚರಿಸಲಾಯಿತು.
ಯುವಕರು ವಿವಿಧ ಕಾರಣಗಳಿಂದ ಮಾದಕ ದ್ರವ್ಯದ ವ್ಯಸನಕ್ಕೆ ಬಲಿಯಾಗುತ್ತಿದ್ದಾರೆ. ದ್ರವ್ಯಗಳ ಪಿಡುಗು ಸಮಾಜದಲ್ಲಿ ಆಳವಾಗಿ ಬೇರೂರಿದೆ. ಇದರಿಂದಾಗಿ ಬಹುತೇಕ ಇಡೀ ಪೀಳಿಗೆಯು ವಿನಾಶದತ್ತ ಸಾಗುತ್ತಿದೆ. ಮಾದಕ ವ್ಯಸನ ಮತ್ತು ದುರುಪಯೋಗದ ಹಿಡಿತದಿಂದ ಜನರನ್ನು ರಕ್ಷಿಸಲು, ಮಾದಕ ವ್ಯಸನ ಮತ್ತು ಅಕ್ರಮ ಸಾಗಣೆ ವಿರುದ್ಧ ಅರಿವು ಮೂಡಿಸುವ ದೃಷ್ಟಿಯಿಂದ ಪ್ರತಿ ವರ್ಷ ಜೂನ್ 26ರಂದು ಅಂತರಾಷ್ಟ್ರೀಯ ದಿನವನ್ನು ವಿಶ್ವದಾದ್ಯಂತ ಆಚರಿಸಲಾಗುತ್ತದೆ ಎಂದರು.
ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್. ಮಂಜುನಾಥ್ ಮಾತನಾಡಿ, ಇತ್ತೀಚಿನ ದಿನದಲ್ಲಿ ಅನೇಕ ಯುವಕ ಮತ್ತು ಯುವತಿಯರು ಮಾದಕ ದ್ರವ್ಯದ ಚಟಕ್ಕೆ ಬಲಿಯಾಗಿದ್ದಾರೆ. ಹದಿಹರೆಯದವರಲ್ಲಿ ಮಾದಕ ವ್ಯಸನದ ಚಟ ಹೆಚ್ಚುತ್ತಿದ್ದು, ಸಮಾಜದ ನಿರ್ಲಕ್ಷ್ಯದಿಂದಾಗಿ ಇಂದು ಯುವ ಜನತೆ ಹೆಚ್ಚೆಚ್ಚು ಈ ದುಶ್ಚಟಕ್ಕೆ ಬಲಿಯಾಗುತ್ತಿದ್ದಾರೆ. ಇದು ಯುವ ಜನತೆಯ ಆರೋಗ್ಯ ಮತ್ತು ವೃತ್ತಿ ಜೀವನದ ಮೇಲೆ ಜೊತೆಗೆ ಸಮಾಜದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತಿದೆ. ಈ ಹಿನ್ನೆಲೆಯಲ್ಲಿ ಈ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
“ಜನರು ಮೊದಲು ಕಳಂಕ ಮತ್ತು ತಾರತಮ್ಯ ನಿಲ್ಲಿಸಿ, ತಡೆಗಟ್ಟುವಿಕೆ ಬಲಪಡಿಸಿ” ಎಂಬ ಈ ಬಾರಿಯ ಘೋಷವಾಕ್ಯದೊಂದಿಗೆ ಈ ದಿನವನ್ನು ಆಚರಿಸಲಾಗುತ್ತಿದೆ. ಮನುಕುಲದ ಉತ್ತಮ ಭವಿಷ್ಯಕ್ಕಾಗಿ ಮಾದಕ ವ್ಯಸನ ಮತ್ತು ಕಳ್ಳಸಾಗಣೆ ನಿಲ್ಲಿಸುವುದು ಈ ದಿನದ ಮುಖ್ಯ ಉದ್ದೇಶವಾಗಿದೆ. ಮಾದಕ ವ್ಯಸನದ ಹೊರತಾಗಿ ವಿವಿಧ ವ್ಯಸನಗಳ ಬಗ್ಗೆ ಚರ್ಚಿಸಲು ದಿನವು ವೇದಿಕೆಯನ್ನು ಒದಗಿಸುತ್ತದೆ. ಭಾರತವು ಮಾದಕ ದ್ರವ್ಯ ಮತ್ತು ಅಕ್ರಮ ಸಾಗಣೆಯನ್ನು ತಡೆಯಲು ಕಠಿಣ ಕಾನೂನುಗಳನ್ನು ಜಾರಿಗೆ ತರಲಾಗಿದೆ ಎಂದು ತಿಳಿಸಿದರು.
ಮಾದಕ ದ್ರವ್ಯಗಳ ಕಳ್ಳ ಸಾಗಣೆ ಸಮಾಜದಲ್ಲಿ ದೊಡ್ಡ ಪಿಡುಗಾಗಿದೆ. ಇವುಗಳ ದೀರ್ಘಾವಧಿ ಬಳಕೆ ಕಳಪೆ ಆರೋಗ್ಯ, ಮಾನಸಿಕ ಅಸ್ವಸ್ಥತೆ, ಸಾವಿಗೆ ಕಾರಣವಾಗುತ್ತದೆ. ಇದು ಕೇವಲ ಸೇವನೆ ಮಾಡುವವರ ಮೇಲೆ ಮಾತ್ರವಲ್ಲದೇ ಸಮಾಜನ ಮೇಲೆ ಕೂಡ ಭಾರೀ ಪರಿಣಾಮ ಹೊಂದಿದೆ. ಇದು ಸಾಮಾಜಿಕವಾಗಿ, ದೈಹಿಕವಾಗಿ, ಸಾಂಸ್ಕøತಿಕವಾಗಿ, ಭಾವನಾತ್ಮಕವಾಗಿ ಮತ್ತು ಆರ್ಥಿಕವಾಗಿ ಹಾಳುಮಾಡುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ತಿಪ್ಪೇಸ್ವಾಮಿ, ಡಾ.ಸುರೇಂದ್ರ ಕುಮಾರ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಶ್ರೀಧರ್, ಮಲ್ಲಿಕಾರ್ಜುನ, ನಾಗರಾಜ್, ಗುರುಮೂರ್ತಿ, ರಂಗಾರೆಡ್ಡಿ, ಗಂಗಾಧರ, ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿಗಳು, ಆಶಾ ಕಾರ್ಯಕರ್ತೆಯರು, ವಿದ್ಯಾರ್ಥಿಗಳು, ಉಪಸ್ಥಿತರಿದ್ದರು.

About The Author

Namma Challakere Local News
error: Content is protected !!