ಚಿತ್ರದುರ್ಗ (ಕರ್ನಾಟಕ ವಾರ್ತೆ)ಜೂನ್.21:
ನಮ್ಮ ದೇಶದ ಕೊಡುಗೆ “ಯೋಗ” ವಿಶ್ವ ವ್ಯಾಪಿಯಾಗಿ, ವಿಶ್ವದ ಆರೋಗ್ಯ ಯೋಗದಿಂದ ಸುಧಾರಣೆ ಆಗುತ್ತಿದೆ. ಇಡೀ ವಿಶ್ವದ ಜನರು ಆರೋಗ್ಯವಂತರಾಗಿದ್ದಾರೆ ಎಂಬ ಮಹತ್ವದ ಗೌರವ ದೇಶಕ್ಕೆ ಸಿಗಲಿ ಎಂದು ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಹೇಳಿದರು.
ನಗರದ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆಯುಷ್ ಇಲಾಖೆ ಹಾಗೂ ವಿವಿಧ ಯೋಗ ಸಂಸ್ಥೆಗಳ ಸಹಯೋಗದಲ್ಲಿ 9ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜಗತ್ತಿಗೆ ಭಾರತದ ನೀಡಿದ ಅನೇಕ ಕೊಡುಗೆಗಳ ಪೈಕಿ ಯೋಗ ಅತ್ಯಂತ ಪ್ರಮುಖವಾದುದು. ಯೋಗದ ಮಹತ್ವದ ಕಾರಣಕ್ಕಾಗಿ ವಿಶ್ವಸಂಸ್ಥೆ ಜೂನ್ 21ರಂದು ವಿಶ್ವ ಯೋಗ ದಿನಾಚರಣೆ ಘೋಷಣೆ ಮಾಡಿ, ವಿಶ್ವದ 180ಕ್ಕೂ ಹೆಚ್ಚು ದೇಶಗಳು ಯೋಗ ಆಚರಣೆ ಮಾಡುವುದರ ಮೂಲಕ ಭಾರತಕ್ಕೆ ಗೌರವ ಕೊಡುತ್ತಿದೆ ಎಂದು ಸ್ಮರಿಸಿದರು.
“ಯೋಗ” ಎನ್ನುವುದು ಭಾರತದ ಸಾವಿರಾರು ವರ್ಷಗಳಿಂದ ನಮ್ಮದೇಯಾದ ಆರೋಗ್ಯ, ಚೈತನ್ಯ ಹೆಚ್ಚು ಮಾಡುವುದು. ದೇಹಕ್ಕೆ ಬೇಕಾಗಿರುವ ಆರೋಗ್ಯದ ಜೊತೆಗೆ ಮಾನಸಿಕವಾಗಿ, ಭೌತಿಕವಾಗಿ ನಮ್ಮೆಲ್ಲರನ್ನು ಗಟ್ಟಿ ಮಾಡುವ ಪ್ರಕ್ರಿಯೆ ಯೋಗ. ವಿಶ್ವದ ಚಿಕ್ಕ ಚಿಕ್ಕ ದೇಶಗಳಲ್ಲಿಯೂ ಕೂಡ ಯೋಗವನ್ನೂ ಪರಿಚಯ ಮಾಡಿಕೊಡುವ ನಿಟ್ಟಿನಲ್ಲಿ ಪ್ರಧಾನಮಂತ್ರಿಗಳ ಕೊಡುಗೆ ಅತ್ಯಂತ ಮಹತ್ವದಾಗಿದೆ ಎಂದರು.
ಪ್ರಸ್ತುತ ದಿನಗಳಲ್ಲಿ ಯುವ ಸಮೂಹ ಹೆಚ್ಚು ಹೆಚ್ಚು ಪಾಶ್ಚಿಮಾತ್ಯ ಸಂಸ್ಕøತಿ ಅಳವಡಿಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಒಲವು ತೋರುತ್ತಿದೆ. ಆದರೆ ಇದಕ್ಕೆ ವಿರುದ್ಧವಾಗಿ ಪಾಶ್ಚಿಮಾತ್ಯ ದೇಶಗಳು ನಮ್ಮ ಭಾರತ ಸಂಸ್ಕøತಿ ಅಳವಡಿಸಿಕೊಂಡು ಉತ್ತಮ ಆರೋಗ್ಯ ಕಾಪಾಡಿಕೊಳ್ಳುತ್ತಿವೆ. ವಿದೇಶಗಳಲ್ಲಿ ಯೋಗದ ಬಗ್ಗೆ ಆಸಕ್ತಿ ಬೆಳೆಯುತ್ತಿದೆ. ಯೋಗದ ಅಭ್ಯಾಸದಿಂದ ದೇಹಕ್ಕೆ ಚೈತನ್ಯ ಮತ್ತು ಮನಸ್ಸಿಗೆ ಶಾಂತಿ ಲಭಿಸಲಿದೆ. ಇಡೀ ದಿನವೂ ಮನಸ್ಸು ಪ್ರಪುಲ್ಲತೆ ಹಾಗೂ ಚೈತನ್ಯದಿಂದ ಕೂಡಿರಲಿದೆ. ಯೋಗ ಹಳ್ಳಿಗಳಿಗೂ ವಿಸ್ತರಿಸಬೇಕು. ವಿಶೇಷವಾಗಿ ಮಕ್ಕಳಿಗೆ ಯೋಗದ ಮಹಿಮೆ, ಪ್ರಭಾ, ಶಕ್ತಿ, ಲಾಭವನ್ನು ತಿಳಿಸಿಕೊಡಿ ಎಂದು ಕಿವಿಮಾತು ಹೇಳಿದರು.
ನಿರಂತರವಾಗಿ ನಿತ್ಯವೂ ಕೇವಲ ಅರ್ಧಗಂಟೆ ಯೋಗಾಭ್ಯಾಸ ಮಾಡಿದರೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು. ಮುಂದಿನ ದಿನಗಳಲ್ಲಿ ಆಸ್ಪತ್ರೆ, ಔಷಧಿಗಳ ಮೇಲೆ ಹಾಕುವ ವೆಚ್ಚ ಕಡಿಮೆ ಆಗಲಿದೆ ಎಂದು ಸಲಹೆ ನೀಡಿದರು.
ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಮಾತನಾಡಿ, ಮನಸ್ಸು, ದೇಹ ಹಾಗೂ ಆತ್ಮವನ್ನು ಯೋಗ ಒಗ್ಗೂಡಿಸುತ್ತದೆ. ಇವು ಮೂರು ಒಗ್ಗೂಡಿದರೆ ಭವಿಷ್ಯ ಉಜ್ವಲವಾಗಿರುತ್ತದೆ. ಊಟಕ್ಕಿಂತ ಮಾತ್ರೆ ಸೇವಿಸುವ ಪ್ರಮಾಣ ಹೆಚ್ಚಾಗಿದೆ. ನಮ್ಮ ಹಿರಿಯರು ನೂರು ವರ್ಷ ಕಾಲ ಬದುಕಿರುವುದಕ್ಕೆ ಯೋಗದ ಪಾತ್ರ ಹಿರಿದು ಎಂದರು.
ಶಾಂತಿ, ಸಮಾಧಾನ ಇರಬೇಕಾದರೆ ಮಾನವನ ದೇಹದ ಮೇಲೆ ನಿಯಂತ್ರಣ ಇರಬೇಕು. ದೇಹ ಮತ್ತು ಮನಸ್ಸು ಬೇರೆಯಾದರೆ ಒತ್ತಡ ಸೃಷ್ಠಿಯಾಗುತ್ತದೆ. ಆಗ ಬೇಕಿಲ್ಲದ ಕಾಯಿಲೆಗಳು ಅಂಟಿಕೊಳ್ಳುತ್ತವೆ. ಆರೋಗ್ಯ ಸಮಸ್ಯೆ ಪತ್ತೆ ಮಾಡಲು ಯೋಗ ಮತ್ತು ಧ್ಯಾನ ಇಂದಿನ ಅಗತ್ಯ. ಪ್ರತಿಯೊಬ್ಬರು ಸಮಾಧಾನದ ಬದುಕು ರೂಪಿಸಿಕೊಂಡರೆ ದೇಶ ಹಾಗೂ ವಿಶ್ವಕ್ಕೆ ಅನುಕೂಲವಾಗಲಿದ್ದು, ಯೋಗ ನಿತ್ಯದ ಚಟುವಟಿಕೆಯಾದರೆ ಸದೃಢ ಸಮಾಜ ನಿರ್ಮಾಣವಾಗಲಿದೆ ಎಂದು ಅಭಿಪ್ರಾಯಪಟ್ಟರು.
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ 9ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ನಗರದ ಹಳೇ ಮಾಧ್ಯಮ ಶಾಲಾ ಆವರಣದಲ್ಲಿ ಸಾಮೂಹಿಕ ಯೋಗ ಪ್ರದರ್ಶನ ಮಾಡಲಾಯಿತು. ಯುವಕ, ಯುವತಿಯರು, ಮಹಿಳೆಯರು, ಮಕ್ಕಳು ಹಾಗೂ ವೃದ್ಧರು ಸೇರಿದಂತೆ ನೂರಾರು ಯೋಗಾಸಕ್ತರು ವಿವಿಧ ಆಸನಗಳನ್ನು ಪ್ರದರ್ಶಿಸಿದರು. 8 ಮಂದಿ ಯೋಗ ಶಿಕ್ಷಕರು ಯೋಗಾಭ್ಯಾಸದ ಕುರಿತು ಪ್ರಾತ್ಯಕ್ಷಿಕೆ ನೀಡಿದರು. ಯೋಗ ತರಬೇತುದಾರ ಮುರುಳಿ ಆಸನಗಳನ್ನು ಹೇಳಿಕೊಟ್ಟರು.
“ವಸುದೈವಕುಟುಂಬಕ್ಕಾಗಿ ಯೋಗ, ಪ್ರತಿ ಮನೆ ಅಂಗಳಕ್ಕೆ ಯೋಗ ಎಂಬ ಘೋಷವಾಕ್ಯದೊಂದಿಗೆ ಬೆಳಿಗ್ಗೆ 7ಕ್ಕೆ ಆರಂಭವಾದ ಯೋಗ ಪ್ರದರ್ಶನ ಸುಮಾರು 45 ನಿಮಿಗಳ ಕಾಲ ನಡೆಯಿತು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಟಿ.ಜವರೇಗೌಡ, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಡಾ.ರಂಗಸ್ವಾಮಿ, ಜಿಲ್ಲಾ ಆಯುಷ್ ಅಧಿಕಾರಿ ಡಾ.ಎಂ.ಎಸ್.ಜಗದೀಶ್, ಯೋಗ ಮತ್ತು ಪ್ರಕೃತಿ ಚಿಕಿತ್ಸೆ ವೈದ್ಯಾಧಿಕಾರಿ ಡಾ.ಗಂಗಾಧರ್ ವರ್ಮ, ಆಯುಷ್ ವೈದ್ಯಾಧಿಕಾರಿ ಡಾ.ಶಿವಕುಮಾರ್, ಮಹಿಳಾ ಸಮಾಜದ ಕಾರ್ಯದರ್ಶಿ ಮೋಕ್ಷ ರುದ್ರಸ್ವಾಮಿ ಸೇರಿದಂತೆ ಆಯುಷ್ ಇಲಾಖೆಯ ವೈದ್ಯಾಧಿಕಾರಿಗಳು, ವಿವಿಧ ಯೋಗ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಯೋಗಾಸಕ್ತರು ಇದ್ದರು.