“ಶ್ರೀಮಾತೆ ಶಾರದಾದೇವಿಯವರ ವಾಸುಕಿ ಸ್ವಾಮಿ ಶಾರದಾನಂದರು”:- ಶ್ರೀಮತಿ ಎಚ್ ಲಕ್ಷ್ಮೀದೇವಮ್ಮ ಅಭಿಪ್ರಾಯ. ಚಳ್ಳಕೆರೆ:-ಶ್ರೀಮಾತೆ ಶಾರದಾದೇವಿಯವರಿಗೆ ಸ್ವಾಮಿ ಶಾರದಾನಂದರು ವಾಸುಕಿಯಂತೆ ರಕ್ಷಕರಾಗಿ ಸೇವೆ ಸಲ್ಲಿಸಿದ ಅಪೂರ್ವ ಸಾಧಕರು ಎಂದು ಚಳ್ಳಕೆರೆಯ ತ್ಯಾಗರಾಜನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ ಮುಖ್ಯಸ್ಥರಾದ ಶ್ರೀಮತಿ ಎಚ್ ಲಕ್ಷ್ಮೀದೇವಮ್ಮ ತಿಳಿಸಿದರು. ತ್ಯಾಗರಾಜನಗರದ ಸದ್ಭಕ್ತರಾದ ಶ್ರೀಮತಿ ಸರ್ವಮಂಗಳಾ ಶಿವಣ್ಣ ಅವರ ಶ್ರೀಮಲ್ಲಿಕಾರ್ಜುನ ನಿವಾಸದಲ್ಲಿ “ಸ್ವಾಮಿ ಶಾರದಾನಂದ”ರ ಜಯಂತ್ಯುತ್ಸವದ ಪ್ರಯುಕ್ತ ಆಯೋಜಿಸಿದ್ದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು ಸ್ವಾಮಿ ಶಾರದಾನಂದರ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು. ಶ್ರೀರಾಮಕೃಷ್ಣರ ಹದಿನಾರು ಮಂದಿ ನೇರ ಸಂನ್ಯಾಸಿ ಶಿಷ್ಯರಲ್ಲಿ ಒಬ್ಬರಾದ ಸ್ವಾಮಿ ಶಾರದಾನಂದರು ಶ್ರೀಮಾತೆಯವರ ಮೇಲೆ ಇಟ್ಟಿದ್ದ ಮಾತೃಭಕ್ತಿ ಅಸಾಮಾನ್ಯವಾದದ್ದು, ಅವರು ಬಂಗಾಳಿ ಭಾಷೆಯಲ್ಲಿ ಶ್ರೀರಾಮಕೃಷ್ಣರ ಜೀವನ ಚರಿತ್ರೆಯನ್ನು ತಿಳಿಸುವ “ಶ್ರೀರಾಮಕೃಷ್ಣ ಲೀಲಾ ಪ್ರಸಂಗ”ವನ್ನು ಬರೆದಿದ್ದು ಅವು ಕನ್ನಡಕ್ಕೂ ಅನುವಾದವಾಗಿವೆ, ಶಾರದಾಮಾತೆಯವರ ವಾಸಕ್ಕಾಗಿ ಕಲ್ಕತ್ತದ ಬಾಗಬಜಾರಿನಲ್ಲಿ “ಉದ್ಬೋಧನ” ಮನೆಯನ್ನು ಕಟ್ಟಿಸಿದ ಮಹನೀಯರು ಇವರು ಎಂದು ಹೇಳಿದರು. “ಶ್ರೀಶಾರದಾದೇವಿ ಜೀವನಗಂಗಾ” ಗ್ರಂಥ ಪಾರಾಯಣ ನಡೆಸಿಕೊಟ್ಟ ಯತೀಶ್ ಎಂ ಸಿದ್ದಾಪುರ ಮಾತನಾಡಿ ಶ್ರೀಮಾತೆಯವರ ನಿಜಸ್ವರೂಪವನ್ನು ಬಯಲು ಮಾಡಿ ಅವರನ್ನು ‘ಸರ್ವಮಂಗಲ ಮಾಂಗಲ್ಯೇ’ ಸ್ತೋತ್ರದ ಮೂಲಕ ಸ್ತುತಿ ಮಾಡಿದ ಶಿವರಾಮುವಿನ ಸರಳ ಶ್ರದ್ಧಾ ಭಕ್ತಿ ಸ್ಮರಣೀಯವಾದದ್ದು ಎಂದರು. ಈ ಸತ್ಸಂಗದ ಪ್ರಯುಕ್ತ ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ ಶ್ರೀರಾಮರಕ್ಷಾ ಸ್ತೋತ್ರ ಪಠಣ, ಭಜಂತ್ರಿ ಮತ್ತು ಕಮಲಾಬಾಯಿ ಅವರಿಂದ ವಿಶೇಷ ಭಜನೆ, ಶ್ರೀರಾಮಕೃಷ್ಣರ ನಾಮಸ್ಮರಣೆ, ದಿವ್ಯತ್ರಯರಿಗೆ ಮಂಗಳಾರತಿ ಮತ್ತು ಪ್ರಸಾದ ವಿನಿಯೋಗ ನಡೆಯಿತು. ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಶ್ರೀಮತಿ ಸರ್ವಮಂಗಳಾ ಶಿವಣ್ಣ, ನಂಜಮ್ಮ ಕೆಂಚಪ್ಪ,ಪ್ರಮೀಳಾ ಜಗದೀಶ್ , ಗೀತಾ ಸುಂದರೇಶ್ ದೀಕ್ಷಿತ್,ಪಂಕಜಾ, ಸೌಮ್ಯ ಪ್ರಸಾದ್ , ಸರಸ್ವತಿ ರಾಜು,ಪ್ರೇಮಾ, ಸುಗುಣಾ,ರೇಖಾ, ಚಂದ್ರಕಲಾ, ಸುವರ್ಣಮ್ಮ, ಕವಿತಾ,ಶೋಭಾ, ಶಾಲಿನಿ,ಸವಿತಾ, ರಾಧಮ್ಮ,ಅನಿತಾ ಸೇರಿದಂತೆ ಸದ್ಭಕ್ತರು ಪಾಲ್ಗೊಂಡಿದ್ದರು.

About The Author

Namma Challakere Local News
error: Content is protected !!