“ಭಾರತದ ಜೀವಾಳ ಧರ್ಮ ಮತ್ತು ಆಧ್ಯಾತ್ಮಿಕತೆ”:- ಅಭಿಷೇಕ್ ಚಕ್ರವರ್ತಿ ಅಭಿಮತ. ಚಳ್ಳಕೆರೆ:-ವಿಶ್ವಗುರು ಸ್ವಾಮಿ ವಿವೇಕಾನಂದರು ತಮ್ಮ ಸಂದೇಶಗಳಲ್ಲಿ ತಿಳಿಸಿದಂತೆ ನಮ್ಮ ಭಾರತದ ಜೀವವಿರುವುದು ಧರ್ಮ ಮತ್ತು ಆಧ್ಯಾತ್ಮಿಕತೆಯಲ್ಲಿ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸದ್ಭಕ್ತರಾದ ಅಭಿಷೇಕ ಚಕ್ರವರ್ತಿ ಅಭಿಪ್ರಾಯಪಟ್ಟರು. ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಯುವಕ-ಯುವತಿಯರಿಗಾಗಿ ಆಯೋಜಿಸಿದ್ದ “ವ್ಯಕ್ತಿತ್ವ ನಿರ್ಮಾಣಕಾರಿ” ತರಗತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಅವರು ಸ್ವಾಮಿ ವಿವೇಕಾನಂದರ “ಕೊಲಂಬೊ ಇಂದ ಆಲ್ಮೋರ” ಎಂಬ ಸದ್ಗ್ರಂಥದ ಕುರಿತಾಗಿ ವಿಶೇಷ ಉಪನ್ಯಾಸ ನೀಡಿದರು. ಇಂದಿನ ಯುವ ಜನಾಂಗ ಭಾರತೀಯ ಸನಾತನ ಪರಂಪರೆಯ ವೇದ-ಉಪನಿಷತ್ತು ಹಾಗೂ ಶ್ರೀಮದ್ ಭಗವದ್ಗೀತೆ ಸೇರಿದಂತೆ ವಿವಿಧ ಸದ್ಗ್ರಂಥಗಳನ್ನು ಅಮೂಲಾಗ್ರವಾಗಿ ಅಧ್ಯಯನ ಮಾಡಬೇಕು.ಸಮರ್ಥ ಭಾರತವನ್ನು ಕಟ್ಟಲು ಪ್ರತಿಯೊಬ್ಬರೂ ಶ್ರಮಿಸಬೇಕು ಎಂದು ಕಿವಿಮಾತು ಹೇಳಿದರು. ಕಾರ್ಯಕ್ರಮದ ಆರಂಭದಲ್ಲಿ “ಭಜನೆ”ಯನ್ನು ಯತೀಶ್ ಎಂ ಸಿದ್ದಾಪುರ ನಡೆಸಿಕೊಟ್ಟರೆ ಮಾತಾಜೀ ತ್ಯಾಗಮಯೀ ಅವರು ವಿದ್ಯಾರ್ಥಿಗಳಿಗೆ “ಧ್ಯಾನಾಭ್ಯಾಸ” ಮಾಡಿಸಿದರು. ಈ ಸಂದರ್ಭದಲ್ಲಿ ಸುಧಾಮಣಿ,ಮಂಜುಳ ಉಮೇಶ್, ಸಂತೋಷ್, ಚೇತನ್, ಪುಷ್ಪಲತಾ,ಋತಿಕ್, ಅಂಬಣ್ಣ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

