ನಾಯಕನಹಟ್ಟಿಯ ರೈತ ಸಂಪರ್ಕ ಕೇಂದ್ರದಲ್ಲಿ ಮಂಗಳವಾರದಂದು ನ್ಯಾನೋ ಯೂರಿಯಾ ಉಪಯೋಗದ ಕುರಿತಾಗಿ ಮಾತನಾಡಿದರು.ರೈತರು ಪ್ರಮುಖವಾಗಿ ಬೆಳೆಗಳಲ್ಲಿ ಹೆಚ್ಚಾಗಿ ಸಾರಜನಕ ಬಳಸುತ್ತಾರೆ. ಇದು ಸಸ್ಯದ ಪತ್ರ ಹರಿತ್ತಿನ, ಪ್ರೋಟೋಪ್ಲಾಸಂ, ಪ್ರೋಟೀನ್ ಮತ್ತು ನ್ಯೂಕ್ಲಿಕ್ ಆಮ್ಲದ ಒಂದು ಭಾಗವಾಗಿದ್ದು, ಗಿಡದ ಹಸಿರು ಬಣ್ಣ, ಬೆಳವಣಿಗೆ ಮತ್ತು ಅಭಿವೃದ್ಧಿಗೆ ಕಾರಣವಾಗಿರುತ್ತದೆ. ಯೂರಿಯಾ ಗೊಬ್ಬರದಲ್ಲಿ ಶೇ.46 ಸಾರಜನಕವನ್ನು ಒಳಗೊಂಡಿರುತ್ತದೆ. ಆದರೂ ಇದರಿಂದ ಬೆಳೆಗಳಿಗೆ ಸಂಪೂರ್ಣವಾಗಿ ಪೋಷಕಾಂಶ ದೊರೆಯದ ಹಿನ್ನೆಲೆ ನ್ಯಾನೋ ಯೂರಿಯಾ ಸಾಕಷ್ಟು ಉಪಯುಕ್ತವಾಗಲಿದೆ.
ಇಫ್ಕೋ ಸಂಸ್ಥೆಯು ನ್ಯಾನೋ ಯೂರಿಯಾವನ್ನು ಆವಿಷ್ಕಾರ ಮಾಡಿದೆ. ಇದು ಸಾರಾಜನಕದ ಮೂಲವಾಗಿದ್ದು ಜೈವಿಕ ತಂತ್ರಜ್ಞಾನ ಸಂಶೋಧನ ಕೇಂದ್ರದಲ್ಲಿ ದೇಶಿಯ ಸ್ವತಂತ್ರ ಪೇಟೆಂಟ್ ಬಳಸಿ ಅಭಿವೃದ್ಧಿಗೊಳಿಸಲಾಗಿದೆ. ಎಫ್ ಸಿಒ ಅನುಮೋದಿಸಿರುವ ವಿಶ್ವದ ಮೊದಲ ನ್ಯಾನೋ ಗೊಬ್ಬರ ಇದಾಗಿದೆ. ಬೆಳೆಗಳ ಸಮಗ್ರ ಬೆಳವಣಿಗೆಗೆ ಬೇಕಾದ ಸಾರಾಜನಕ ಪೋಷಕಾಂಶವನ್ನು ಇದು ಒದಗಿಸುತ್ತದೆ.
ಬಳಕೆ ಮಾಡುವ ವಿಧಾನ
4 ಮಿಲಿ ನ್ಯಾನೋ ಯೂರಿಯಾವನ್ನು ಒಂದು ಲೀಟರ್ ನೀರಿನಲ್ಲಿ ಬೆರೆಸಿ ಬೆಳೆಯ ಎಲೆಗಳ ಮೇಲೆ, ಬೆಳವಣಿಗೆಯ ವಿವಿಧ ಹಂತಗಳಲ್ಲಿ ಎರಡು ಬಾರಿ ನ್ಯಾನೋ ಯೂರಿಯಾವನ್ನು ಸಿಂಪಡಿಸುವುದು ಅವಶ್ಯಕವಾಗಿರುತ್ತದೆ. ಮೊದಲ ಸಿಂಪಡನೆ ಮೊಳಕೆಯೊಡೆದ 25 -30 ದಿನಗಳಲ್ಲಿ ಅಥವಾ ನಾಟಿ ಮಾಡಿದ 7-10 ದಿನಗಳಲ್ಲಿ ಮತ್ತು ಎರಡನೇ ಸಿಂಪಡನೆ ಮಾಡಬೇಕು. ಹೂ ಬಿಡುವ 7-10 ದಿನಗಳ ಮುನ್ನ ಮಾಡಬೇಕು.
ಏನಿದು ನ್ಯಾನೋ ಯೂರಿಯಾ
ನ್ಯಾನೋ ಯೂರಿಯಾ ದ್ರಾವಣ ರೂಪದ ಯೂರಿಯಾವಾಗಿದೆ. ಕೃಷಿಯಲ್ಲಿ ಸಸಿಗಳ ಪೋಷಣೆಗೆ ಅವಶ್ಯಕವಾದ ಪೋಷಕಾಂಶ ತಲುಪಿಸಲು ಇಫ್ಕೋ ಸಂಸ್ಥೆಯು ಈ ಮಾದರಿ ಯೂರಿಯಾ ಪರಿಚಯಿಸಿದೆ.
ಪರಿಸರ ಸ್ನೇಹಿ ನ್ಯಾನೋ ಯೂರಿಯಾ
ಪರಿಸರದ ಮೇಲೆ ಯಾವುದೇ ಪರಿಣಾಮವನ್ನು ಬೀರುವುದಿಲ್ಲ. ನ್ಯಾನೋ ಯೂರಿಯಾ ಬಳಕೆಯು ಆರೋಗ್ಯಕರ ಪರಿಸರ, ಜಾಗತಿಕ ತಾಪಮಾನ, ಉತ್ತಮ ಮಣ್ಣು, ಗಾಳಿ ಮತ್ತು ನೀರಿನ ಗುಣಮಟ್ಟದ ದೃಷ್ಟಿಯಿಂದ ಇದು ಹೆಚ್ಚು ಪ್ರಯೋಜನಕಾರಿಯಾಗಿದೆ. ಯೂರಿಯದಂತೆ ಇದು ಮಣ್ಣಿನಲ್ಲಿ ಉಳಿಯದೆ ಸಂಪೂರ್ಣವಾಗಿ ಬಳಕೆಯಾಗುತ್ತದೆ.
ಶೇ.4ರಷ್ಟು ಸಾರಜನಕ
ಯೂರಿಯಾ ಗೊಬ್ಬರವು ಶೇ. 46 ಸಾರಜನಕವನ್ನು ಒಳಗೊಂಡಿರುತ್ತದೆ. ಆದರೆ ಬೆಳೆಯು ಕೇವಲ ಶೇ. 30-50 ಮಾತ್ರ ಬಳಸಿಕೊಳ್ಳುತ್ತದೆ. ಉಳಿದ ಯೂರಿಯಾ ಅಮೋನಿಯಾ ಅಥವಾ ನೈಟ್ರಸ್ ಆಕ್ಸೈಡ್ ಅಥವಾ ನೈಟ್ರೇಟ್ ರೂಪದಲ್ಲಿ ನಷ್ಟವಾಗುತ್ತದೆ. ನ್ಯಾನೋ ಯೂರಿಯಾ ಒಟ್ಟು ಶೇ.4 ಸಾರಜನಕವನ್ನು ಹೊಂದಿರುತ್ತದೆ. ಇದು ನೀರಿನಲ್ಲಿ ಸಮಾನವಾಗಿ ಹರಡುತ್ತದೆ. ನ್ಯಾನೋ ಯೂರಿಯಾದಲ್ಲಿ ಸಾರಜನಕವು ಸುಲಭವಾಗಿ ಲಭ್ಯವಿರುತ್ತದೆ. ಇದು ಬೆಳೆಯ ಪೋಷಕಾಂಶದ ಅವಶ್ಯಕತೆಯನ್ನು ಪರಿಣಾಮಕಾರಿಯಾಗಿ ಪೂರೈಸಲು ನೆರವಾಗು
ಬಳಕೆಗೆ ಅನುಸರಿಸಬೇಕಾದ ಸೂಚನೆಗಳು
ನ್ಯಾನೋ ಯೂರಿಯಾ ಬಾಟಲನ್ನು ತೆರೆಯುವ ಮುನ್ನ ಚೆನ್ನಾಗಿ ಅಲುಗಾಡಿಸಬೇಕು
ಪಂಪುಗಳ ಸಹಾಯದಿಂದ ಅತಿ ಸಣ್ಣದಾಗಿ ಹನಿಗಳು ಬೀಳುವ ಹಾಗೆ ಸಂಯೋಜಿಸಿಕೊಂಡು ಬೆಳೆಗಳ ಮೇಲೆ ಸಿಂಪಡಿಸಬೇಕು
ಮುಂಜಾನೆ ಮತ್ತು ಸಂಜೆಯ ಸಮಯದಲ್ಲಿ ಸಿಂಪರಣೆ ಮಾಡಬೇಕು.
ಸಿಂಪಡನೆ ಮಾಡಿದ 12 ಗಂಟೆಗಳ ಒಳಗೆ ಮಳೆಯಾದರೆ ಪುನಃ ಸಿಂಪಡಣೆ ಮಾಡಬೇಕು
ಸಸ್ಯ ಪ್ರಚೋದಕಗಳು ರಸಾವರಿ ರಸಗೊಬ್ಬರಗಳು ಮತ್ತು ಕೃಷಿ ರಸಾಯನಿಕಗಳ ಜತೆ ಮಿಶ್ರಣ ಮಾಡಬಹುದು.
ನ್ಯಾನೋ ಯೂರಿಯಾವು ಬೆಳೆಯ ಪೋಷಕಾಂಶದ ಅವಶ್ಯಕತೆಯನ್ನು ಪೂರೈಸಲು ನೆರವಾಗುತ್ತದೆ. ಇದರಿಂದ ಪರಿಸರಕ್ಕೆ ಯಾವುದೇ ಹಾನಿ ಉಂಟಾಗದೆ ಉತ್ತಮ ಫಸಲಿಗೆ ಉಪಯುಕ್ತವಾಗಿದೆ. ರೈತರು ಹತ್ತಿರದ ರಸಗೊಬ್ಬರ ಮಳಿಗೆಗಳಲ್ಲಿ ನ್ಯಾನೋ ಯೂರಿಯಾ ಲಭ್ಯವಿದ್ದು ಸಂಪರ್ಕಿಸಿ ಪಡೆಯಬಹುದಾಗಿದೆ ಎಂದು ತಿಳಿಸಿದ್ದಾರೆ.

