ಚಿತ್ರದುರ್ಗ : ಚಳ್ಳಕೆರೆ ತಾಲೂಕಿನ ಫಟಪರ್ತಿ ಗ್ರಾಮದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದ ಅಂಗವಾಗಿ ಗ್ರಾಮದಲ್ಲಿ ವಾಸ್ತವ್ಯ ಹೂಡಲು ಆಗಮಿಸಿ್ದದ ಜಿಲ್ಲಾಧಿಕಾರಿ ಕವಿತಾ ಎಸ್ ಮನ್ನಿಕೇರಿ ಅವರನ್ನು ಗ್ರಾಮಸ್ಥರು ಜಾನಪದ ಸೊಗಡಿನೊಂದಿಗೆ ಬರಮಾಡಿಕೊಂಡರು.
ಗ್ರಾಮದ ಈಶ್ವರನ ಗುಡಿ ಬಳಿ ಕಾತುರದಿಂದ ಸೇರಿದ್ದ ಗ್ರಾಮಸ್ಥರು ಜಿಲ್ಲಾಧಿಕಾರಿಗಳನ್ನು ಆತ್ಮೀಯವಾಗಿ ಸ್ವಾಗತಿಸಿದರು. ಗ್ರಾಮದ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ತೆರಳಿದ ಜಿಲ್ಲಾಧಿಕಾರಿಗಳು ಪೂಜೆ ಸಲ್ಲಿಸಿದರು. ನಂತರ ದೇವಸ್ಥಾನದ ಎದುರಿನ ಆವರಣದಲ್ಲಿ ವಿವಿಧ ಬಗೆಯ ಹೂವು, ಬಾಳೆ ಕಂಬ, ಬಲೂನುಗಳಿಂದ ಅಲಂಕೃತಗೊಂಡ ಜೋಡೆತ್ತಿನ ಬಂಡಿಯಲ್ಲಿ ಜಿಲ್ಲಾಧಿಕಾರಿ ಏರಿದ ಸಂದರ್ಭದಲ್ಲಿ ಗ್ರಾಮಸ್ಥರು ಉದ್ಘೋಷಗಳೊಂದಿಗೆ ಪುಷ್ಪ ವೃಷ್ಠಿಗೈದರು.
ಸಿಂಗಾರಗೊಂಡ ಗ್ರಾಮದ ಮಹಿಳೆಯರು, ಯುವತಿಯರು, ವಿದ್ಯಾರ್ಥಿನಿಯರು ಪೂರ್ಣಕುಂಬ ಹೊತ್ತು ಮೆರವಣಿಗೆಯಲ್ಲಿ ಸಾಗಿದರು.
ಕಹಳೆ, ವೀರಗಾಸೆ ಕುಣಿತ, ನಂದಿಕೋಲು, ಡೊಳ್ಳು ಹಾಗೂ ಭಾಜ ಭಜಂತ್ರಿ ಮೇಳದೊಂದಿಗೆ ಮೆರವಣಿಗೆ ನಡೆಯಿತು. ಮೆರವಣಿಗೆ ಉದ್ದಕ್ಕೂ ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು. ಬೀದಿಯ ಇಕ್ಕೆಲಗಳಲ್ಲಿ ನೆರೆದ ಗ್ರಾಮದ ಮಹಿಳೆಯರು, ವೃದ್ಧರು, ಮಕ್ಕಳು ಮೆರವಣಿಗೆಯನ್ನು ವೀಕ್ಷಿಸಿದರು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಮೆರವಣಿಗೆ ವಸತಿ ಪ್ರೌಢಶಾಲೆ ಆವರಣದ ವೇದಿಕೆ ಬಳಿ ಕೊನೆಗೊಂಡಿತು. ಜಿಲ್ಲಾಧಿಕಾರಿಗಳ ಗ್ರಾಮದ ವಾಸ್ತವ್ಯ ಹಿನ್ನಲೆಯಲ್ಲಿ ಗ್ರಾಮದಲ್ಲಿ ಹಬ್ಬದ ವಾತವರಣ ಮನೆ ಮಾಡಿತ್ತು
.
ಈ ಸಂದರ್ಭದಲ್ಲಿ ಗ್ರಾ.ಪಂ.ಅಧ್ಯಕ್ಷೆ ಉಮಾದೇವಿ ತಿಮ್ಮಾರೆಡ್ಡಿ, ಉಪಾಧ್ಯಕ್ಷ ಸೇವಾನಾಯ್ಕ್, ತಹಶೀಲ್ದಾರ್ ಎನ್.ರಘುಮೂರ್ತಿ,
ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜೆ.ವೈಶಾಲಿ, ಜಿಲ್ಲಾ ತಂಬಾಕು ನಿಯಂತ್ರಣ ಅಧಿಕಾರಿ ಡಾ.ಎನ್.ಕಾಶಿ, ತಾ.ಪಂ.ಸಹಾಯಕ ನಿರ್ದೇಶಕ ಸಂತೋಷ್, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್. ಸುರೇಶ್,
ದೊಡ್ಡ ಉಳ್ಳಾರ್ತಿ ವೈದ್ಯಾಧಿಕಾರಿ ಡಾ.ಶ್ರೀನಿವಾಸ.ಜಿ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ರವಿ, ಪಶು ಇಲಾಖೆ ಸಹಾಯಕ ನಿರ್ದೇಶಕ ಡಾ.ರೇವಣ್ಣ, ರೇಷ್ಮೆ ಸಹಾಯಕ ನಿರ್ದೇಶಕ ಕೆಂಚೋಜಿರಾವ್, ಪಂಚಾಯತಿ ಅಭಿವೃದ್ಧಿ ಅಧಿಕಾರಿ ಪ್ರತಿಭಾ ಸೇರಿದಂತೆ ಗ್ರಾ.ಪಂ.ಸದಸ್ಯರು, ಘಟಪರ್ತಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಇದ್ದರು.