ಇಂದಿನ ಯುವ ಜನತೆ ಸ್ವಾತಂತ್ರ್ಯ ಹೋರಾಟದ ಇತಿಹಾಸ ತಿಳಿದುಕೊಳ್ಳಬೇಕು

ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ

ಚಿತ್ರದುರ್ಗ. ಮೇ.28: ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಅನೇಕ ಸಂಘಟನೆಗಳು ಹಾಗೂ ಹೋರಾಟಗಾರರು ಹೋರಾಡಿ ಬಲಿದಾನ ಮಾಡಿದ್ದಾರೆ. ಇಂದಿನ ಯುವಜನತೆ ಸ್ವಾತಂತ್ರ್ಯ ಹೋರಾಟದ ಇತಿಹಾಸ ತಿಳಿದುಕೊಳ್ಳಬೇಕು ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು.

ಸ್ವಾತಂತ್ರ್ರೋತ್ಸವದ ಅಮೃತ ಮಹೋತ್ಸವ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರ ಸಭೆ ಸಹಯೋಗದಲ್ಲಿ ಕೋಟೆ ಮುಂಭಾಗದಲ್ಲಿ ಆಯೋಜಿಸಲಾದ ಅಮೃತ ಭಾರತಿಗೆ ಕನ್ನಡದಾರತಿ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದರು.

ಯುವ ಜನತೆಗೆ ಸ್ವಾತಂತ್ರ್ಯ ‌ಹೋರಾಟದ ಮಹತ್ವ ತಿಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ 75 ಕಡೆ ಅಮೃತ ಭಾರತಿಗೆ ಕನ್ನಡದಾರತಿ ಕಾರ್ಯಕ್ರಮ ಆಯೋಜಿಸಿದೆ. ಸ್ವಾತಂತ್ರ್ಯ ನಂತರ ದೇಶ ಬಲಿಷ್ಠವಾಗಿ ಬೆಳೆದು ನಿಂತಿದೆ. ದೇಶದ ಹಳ್ಳಿಗಳಲ್ಲಿ ಕೂಡ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಯಿತು. ಚಿತ್ರದುರ್ಗ ತಾಲೂಕಿನ ತರವನೂರಿ‌ನಲ್ಲಿ ಈಚಲು ಮರಗಳನ್ನು ಕಡೆದು ನೆಡೆಸಿದ ಹೋರಾಟ ಇತಿಹಾಸದ ಪುಟದಲ್ಲಿ ದಾಖಲಾಗಿದೆ ಎಂದರು.

ಮೆರಣಿಗೆಯಲ್ಲಿ ಜಾನಪದ ಕಲಾ ತಂಡಗಳಾದ ವೀರಗಾಸೆ, ಡೊಳ್ಳು, ಕರಡಿ ಮಜಲು, ಕಹಳೆ,‌ ಶಾಲಾ ಕಾಲೇಜು ಮಕ್ಕಳು, ಎನ್.ಸಿ.ಸಿ. ಹಾಗೂ ಎನ್.ಎಸ್.ಎಸ್ ತಂಡಗಳು, ಕಲಾ ತಂಡಗಳು ಭಾಗವಹಿಸಿದ್ದವು. ಮೆರವಣಿಗೆ ಕೋಟೆ ಮುಂಭಾಗದಿಂದ ಪ್ರಾರಂಭವಾಗಿ, ಉಚ್ಚೆಂಗಿಯಲ್ಲಮ್ಮ ದೇವಸ್ಥಾನ, ತರಾಸು ರಂಗಮಂದಿರ, ಮದಕರಿ ನಾಯಕ ವೃತ್ತದಿಂದ ತರಾಸು ರಂಗಮಂದಿರ ತಲುಪಿತು. ಇದೇ ಸಂದರ್ಭದಲ್ಲಿ ರೆಡ್ ಕ್ರಾಸ್ ಸಂಸ್ಥೆ ವತಿಯಿಂದ ಉಚಿತವಾಗಿ ಮಾಸ್ಕ್ ವಿತರಿಸಲಾಯಿತು.

ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣ, ಜಿ.ಪಂ‌.ಉಪಕಾರ್ಯದರ್ಶಿ ರಂಗಸ್ವಾಮಿ ಸೇರಿದಂತೆ ಇತರೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Namma Challakere Local News
error: Content is protected !!