ಮಕ್ಕಳ ಉಜ್ವಲ ಭವಿಷ್ಯಕ್ಕೆ ಪೂರಕ ಶಿಕ್ಷಣ ಅವಶ್ಯ;ಆರ್.ಗಿರೀಶ್‌ಕುಮಾರ್.
ಪ್ರಧಾನಮಂತ್ರಿ ಪೋಷಣ್ ಶಕ್ತಿ ನಿರ್ಮಾಣ್ ಸಾಮಾಜಿಕ ಪರಿಶೋಧನೆಯ ಪೋಷಕರ ಸಭೆಯಲ್ಲಿ ಹೇಳಿಕೆ
ನಾಯಕನಹಟ್ಟಿ: ಜು.31
ಮಕ್ಕಳಿಗೆ ಬಾಲ್ಯವಸ್ಥೆಯಿಂದಲೇ ಉತ್ತಮ ವಾತಾವರಣ ವೇದಿಕೆ ಒದಗಿಸುವುದರ ಮೂಲಕ ಉಜ್ವಲ ಭವಿಷ್ಯ ನೀಡುವುದು ಪೋಷಕರ ಕರ್ತವ್ಯವಾಗಿದೆ ಎಂದು ತಾಲೂಕು ಪಂಚಾಯತಿ ಸಾಮಾಜಿಕ ಪರಿಶೋಧನಾ ಸಮಿತಿ ಕಾರ್ಯಕ್ರಮ ವ್ಯವಸ್ಥಾಪಕ ಆರ್.ಗಿರೀಶ್‌ಕುಮಾರ್ ಹೇಳಿದರು.
ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪ್ರಧಾನಮಂತ್ರಿ ಪೋಷಣ್ ಶಕ್ತಿ ನಿರ್ಮಾಣ್ ಸಾಮಾಜಿಕ ಪರಿಶೋಧನೆಯ ಪೋಷಕರ ಸಭೆಯಲ್ಲಿ ಮಾತನಾಡಿದರು.
ಮಕ್ಕಳ ಶೈಕ್ಷಣಿಕ ಪ್ರಗತಿಯಲ್ಲಿ ಶಿಕ್ಷಕರ ಜತೆಗೆ ಪೋಷಕರ ಪಾತ್ರ ಅತ್ಯಂತ ಮಹತ್ವತೆಯಿಂದ ಕೂಡಿದೆ. ಶಿಕ್ಷಣದಿಂದ ಯಾವ ಮಕ್ಕಳು ವಂಚಿತವಾಗಬಾರದು ಎನ್ನುವುದನ್ನು ಮನಗಂಡು ಸರ್ಕಾರವು ಮಧ್ಯಾಹ್ನದ ಬಿಸಿಯೂಟ, ಕ್ಷೀರಭಾಗ್ಯ, ಶೂಭಾಗ್ಯ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಅನುಷ್ಟಾನಕ್ಕೆ ತಂದಿವೆ. ಈ ಹಿಂದೆ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಪ್ರೋತ್ಸಾಹ ದೊರೆಯುತ್ತಿರಲಿಲ್ಲ. ಪ್ರಸ್ತುತ ರಾಜ್ಯ ಮತ್ತು ಕೇಂದ್ರ ಸರ್ಕಾರ ಪೋತ್ಸಾಹ ನೀಡುತ್ತಿವೆ. ಎಲ್ಲರ ಆಶಯ ಜತೆಗೆ ಪೋಷಕರ ಬಯಕೆಯಂತೆ ವಿದ್ಯಾರ್ಥಿಗಳು ತಮಗೆ ಸಿಗುತ್ತಿರುವ ಸವಲತ್ತುಗಳನ್ನು ಸಮರ್ಪಕವಾಗಿ ಬಳಸಿಕೊಂಡು ಪ್ರಜ್ಞಾವಂತರಾಗಬೇಕಿದೆ ಎಂದರು.
ಶಿಕ್ಷಕರು ಶಾಲೆಯಲ್ಲಿ ಮಾಡಿದ ಪ್ರಯತ್ನಗಳಿಗೆ ಪೂರಕವಾಗಿ ಪೋಷಕರು ತಮ್ಮ ಮನೆಯಲ್ಲಿ ಮಕ್ಕಳ ಕಲಿಕೆಯಲ್ಲಿ ಭಯದ ವಾತಾವರಣ ಉಂಟು ಮಾಡದೇ ಸಕ್ರಿಯವಾಗಿ ಭಾಗವಹಿಸಬೇಕು. ಮಕ್ಕಳೆದುರು ದುಶ್ಚಟಗಳಲ್ಲಿ ಪಾಲ್ಗೊಳ್ಳುವುದು ಅತ್ಯಂತ ಅಪಾಯಕಾರಿ ಇಂತಹ ಚಟುವಟಿಕೆಗಳಿಂದ ದೂರವಿದ್ದು, ಸದಾ ಮಕ್ಕಳಲ್ಲಿ ಓದಿನ ಆಸಕ್ತಿ ಕಡಿಮೆ ಆಗದಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಬಡ್ತಿ ಹಿರಿಯ ಮುಖ್ಯ ಶಿಕ್ಷಕಿ ಎನ್.ಇಂದಿರಮ್ಮ ಮಾತನಾಡಿ, ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ಶಿಕ್ಷಕರ ಜತೆಗೆ ಪೋಷಕರ ಸಹಕಾರವೂ ಮುಖ್ಯವಾಗಿದೆ. ಮಗುವಿನ ಸಾಮರ್ಥ್ಯ ಮತ್ತು ಸವಾಲುಗಳನ್ನು ಶಿಕ್ಷಕರು ಯಾವ ರೀತಿಯಾಗಿ ಪರಿಗಣಿಸಿರುವರು ಎಂಬುದನ್ನು ಪೋಷಕರು ಅರಿಯಬೇಕಿದೆ. ಶಿಕ್ಷಕರೊಂದಿಗೆ ಆಗಾಗ್ಗೆ ಶಾಲೆಗೆ ಭೇಟಿ ನೀಡಿ ಸಮಾಲೋಚನೆ ಮಾಡುವುದರಿಂದ ಮಗುವಿನ ಯಶಸ್ಸು ಮತ್ತು ವೈಪಲ್ಯಗಳಿಗೆ ಉತ್ತರ ದೊರೆಯಲಿದೆ. ಪ್ರಮುಖವಾಗಿ ಮೊಬೈಲ್ ಬಳಕೆಯಿಂದ ಮಕ್ಕಳನ್ನು ದೂರವಿಡಿ ಎಂದು ಮನವಿ ಮಾಡಿದರು.
ಸಂವಿಧಾನದ ಆಶಯದಂತೆ ಪ್ರತಿ ಮಗುವು ಶಿಕ್ಷಣ ಪಡೆಯಬೇಕು. ಶಿಕ್ಷಣದಿಂದ ನಮ್ಮ ಬದುಕು ಹಸನಾಗುತ್ತದೆ. ಇದರ ಜತೆಗೆ ದೇಶದ ಭವಿಷ್ಯವು ಬೆಳಗುತ್ತದೆ. ಹಾಗಾಗಿ ಪಾಲಕರೆಲ್ಲರೂ ಮಕ್ಕಳಿಗೆ ಶಿಕ್ಷಣ ಕೊಡಿಸುವ ಹೊಣೆಗಾರಿಕೆ ನಿಭಾಯಿಸಬೇಕು. ಶಾಲೆಯಲ್ಲಿ ಕಲೆ, ಸಂಸ್ಕೃತಿ, ಕ್ರೀಡೆ ಸೇರಿದಂತೆ ಇನ್ನಿತರ ಚಟುವಟಿಕೆಗಳಲ್ಲಿ ಸಾಧನೆ ಮಾಡುವ ಮಕ್ಕಳ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುವ ಕೆಲಸವನ್ನು ಪ್ರತಿಯೊಬ್ಬರೂ ಮಾಡಬೇಕು ಎಂದು ಹೇಳಿದರು.
ಸಮೂಹ ಸಂಪನ್ಮೂಲ ವ್ಯಕ್ತಿ ಆರ್.ಈಶ್ವರಪ್ಪ ಮಾತನಾಡಿ, ಪೋಷಕರು ಮಕ್ಕಳನ್ನು ಪ್ರತಿನಿತ್ಯ ಶಾಲೆಗೆ ಕಳಿಸಬೇಕು. ಮಕ್ಕಳ ಶೈಕ್ಷಣಿಕ ಪ್ರಗತಿಗೆ ಶಿಕ್ಷಕರೊಂದಿಗೆ ಕೈಜೋಡಿಸಿ ಅವರ ಭವಿಷ್ಯ ಉಜ್ಜಲವಾಗಲು ನೆರವಾಗಬೇಕು. ತಪ್ಪದೆ ತಮ್ಮ ಮಕ್ಕಳನ್ನು ಶಾಲೆಗೆ ದಾಖಲು ಮಾಡುವ ಮೂಲಕ ಶಿಕ್ಷಣ ಇಲಾಖೆಯೊಂದಿಗೆ ಕೈಜೋಡಿಸಿ ಮಕ್ಕಳ ಭವಿಷ್ಯ ರೂಪಿಸಲು ಮುಂದಾಗಬೇಕು ಎಂದರು.
ಈ ಸಂದರ್ಭದಲ್ಲಿ ಎಸ್.ಡಿಎಂಸಿ ಅಧ್ಯಕ್ಷೆ ಸುಮಲತಾ, ಉಪಾಧ್ಯಕ್ಷ ತಿಪ್ಪೇಸ್ವಾಮಿ, ಸದಸ್ಯರಾದ ವಾಣಿಶ್ರೀ, ತಿಪ್ಪಮ್ಮ, ಸುಮಯ, ಅನಿತಾ, ರಾಜಣ್ಣ, ಎನ್.ಮಾರುತಿ, ತಿಪ್ಪೇಸ್ವಾಮಿ, ಶಿಕ್ಷಕರಾದ ಎಂ.ವಿ.ಯತೀಶ್, ಎಚ್.ಟಿ.ಮಂಜುಳಮ್ಮ, ಎನ್.ಸುಮಿತ್ರ, ಡಿ.ಕೃಷ್ಣಾರೆಡ್ಡಿ, ಜಿ.ಗಾಯಿತ್ರಿದೇವಿ, ಕೆ.ಎಲ್.ಉಷಾ, ಬಿ.ಎಂ.ಶಿಲ್ಪಾ, ಬಿ.ಕೆ.ಸುಮಾ, ಎಚ್.ಮಂಜುನಾಥ, ಜಿ.ಪಿ.ಚಂದನ ಸೇರಿದಂತೆ ಪೋಷಕರು ಉಪಸ್ಥಿತರಿದ್ದರು.