ಚಿತ್ರದುರ್ಗ : ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಅವರ ನಿವಾಸ ಭದ್ರತಾ ಸಿಬ್ಬಂದಿ ಮೇಲೆ
ಗ್ರಾಮಸ್ಥರು ಹಲ್ಲೆ ನಡೆಸಿದ್ದಾರೆ. ಬಳಿಕ ಶಾಸಕರ ಚಳ್ಳಕೆರೆಯ ವೀರಭದ್ರಸ್ವಾಮಿ ದೇವಸ್ಥಾನದ ಬಳಿಯ ನಿವಾಸದ ಮುಂದೆಯೇ ಪ್ರಾಣ ಬೆದರಿಕೆ ಹಾಕಿದ್ದಾರೆ.
ಶಾಸಕರ ನಿವಾಸದಲ್ಲಿ ಭದ್ರತಾ ಸಿಬ್ಬಂದಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಚಳ್ಳಕೆರೆಯ ಕಾಟಪ್ಪನಹಟ್ಟಿಯ ಎಂ.ತಿಪ್ಪೇಸ್ವಾಮಿ ಹಲ್ಲೆಯಿಂದ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಚಿತ್ರದುರ್ಗ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಚ್ಚಬೋರನಹಟ್ಟಿ ಹಾಗೂ ಕಲ್ಲೆನಹಳ್ಳಿ ಗ್ರಾಮಸ್ಥರು ಶನಿವಾರ ರಾತ್ರಿ ಶಾಸಕರ ನಿವಾಸಕ್ಕೆ ಆಗಮಿಸಿದ್ದಾರೆ. ಈ ವೇಳೆ ಭದ್ರತಾ ಸಿಬ್ಬಂದಿ ಗ್ರಾಮಸ್ಥರನ್ನು ಪ್ರಶ್ನಿಸಿದಾಗ ಗ್ರಾಮದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಟಗರಿನ ಕಾಳಗಕ್ಕೆ ಪೊಲೀಸರು ತಡೆಯೊಡ್ಡಿದ್ದು, ಶಾಸಕರ ಬಳಿ ಚರ್ಚಿಸಲು ಬಂದಿದ್ದೇವೆ ಎಂದು ಮನೆಯ ಗೇಟ್ ಒಳಗೆ ನುಗ್ಗಲು ಯತ್ನಿಸಿದಾಗ ತಡೆದ ಕಾರಣ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ತಿಪ್ಪೇಸ್ವಾಮಿ ದೂರು ನೀಡಿದ್ದಾರೆ.
ಆರೋಪಿಗಳಾದ ಅವಿನಾಶ್, ಕುಮಾರ್, ರವಿ, ಪ್ರದೀಪ್, ಶಶಿಕುಮಾರ್ ಸೇರಿ 9 ಜನರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪಿಎಸ್‌ಐ ಮೂಷ್ಟೂರಪ್ಪ ತಿಳಿಸಿದ್ದಾರೆ.