ಚಿತ್ರದುರ್ಗ(ಕರ್ನಾಟಕ ವಾರ್ತೆ)ಆ.11:
ಚಿತ್ರದುರ್ಗ ನಗರದ ಸರ್ಕಾರಿ ಕಲಾ ಕಾಲೇಜು ಬಳಿಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಡಿ.ದೇವರಾಜು ಅರಸು ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯಕ್ಕೆ ಶುಕ್ರವಾರ ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಡಿ.ದೇವರಾಜು ಅರಸು ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದ ಅಡುಗೆ ಕೋಣೆ, ಡೈನಿಂಗ್ ಹಾಲ್, ಸ್ಟೋರ್ ರೂಂನಲ್ಲಿ ಶೇಖರಿಸಿಟ್ಟ ಅಕ್ಕಿ, ಬೆಳೆ, ತರಕಾರಿ ಸೇರಿದಂತೆ ಇನ್ನಿತರೇ ಆಹಾರ ಪದಾರ್ಥಗಳ ವೀಕ್ಷಣೆ, ರೊಟ್ಟಿ ತಯಾರಿಸುವ ಯಂತ್ರ, ಮೆನು ಚಾರ್ಟ್ ವೀಕ್ಷಿಸಿದ ಅವರು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿಗಳಿಂದ ಹಾಸ್ಟೆಲ್ ವ್ಯವಸ್ಥೆಯ ಮಾಹಿತಿ ಪಡೆದರು. ಅಲ್ಲದೆ ಹಾಸ್ಟೆಲ್‍ನಲ್ಲಿನ ವ್ಯವಸ್ಥೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ರಾಷ್ಟ್ರ ನಿರ್ಮಾಣ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳುವಂತೆ ವಿದ್ಯಾರ್ಥಿಗಳನ್ನು ಪ್ರೇರೇಪಿಸಬೇಕು. ವಿದ್ಯಾರ್ಥಿಗಳನ್ನು ಉತ್ತಮ ನಾಗರಿಕರನ್ನಾಗಿ ರೂಪಿಸುವ ನಿಟ್ಟಿನಲ್ಲಿ ಸಂವಿಧಾನ, ಮೂಲಭೂತ ಹಕ್ಕು ಮತ್ತು ಕರ್ತವ್ಯಗಳು, ಸ್ವಚ್ಛತೆ, ಪರಿಸರ ಸಂರಕ್ಷಣೆ ಸೇರಿದಂತೆ ಮುಂತಾದ ವಿಷಯಗಳ ಕುರಿತು ಆಶುಭಾಷಣ ಸ್ಪರ್ಧೆಗಳನ್ನು ಆಯೋಜಿಸುವ ಮೂಲಕ ಉತ್ತಮ ಆಲೋಚನೆ, ಚಿಂತನೆಗಳನ್ನು ಬೆಳೆಸಬೇಕು. ರಾಷ್ಟ್ರದ ಸಂಪತ್ತು, ದೇಶದ ಸ್ವಾತಂತ್ರ್ಯದ ಇತಿಹಾಸ, ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನದ ಕುರಿತು ತಿಳುವಳಿಕೆ ಮೂಡಿಸುವ ಮೂಲಕ ದೇಶದ ಬಗ್ಗೆ ಗೌರವ, ಭಕ್ತಿ ಬೆಳೆಸಲು ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದು ತಿಳಿಸಿದ ಅವರು, ಈ ಕುರಿತು ಕ್ರಿಯಾಯೋಜನೆ ರೂಪಿಸಿ ಕಾರ್ಯಕ್ರಮದ ವರದಿ ನೀಡಬೇಕು ಎಂದು ಸೂಚನೆ ನೀಡಿದರು.
ಪ್ರಾಧ್ಯಾಪಕರು, ಸಂಪನ್ಯೂಲ ವ್ಯಕ್ತಿಗಳಿಂದ ವಿಶೇಷ ಉಪನ್ಯಾಸ ನೀಡುವ ಮೂಲಕ ವಿದ್ಯಾರ್ಥಿ ದೆಸೆಯಿಂದಲೇ ವಿದ್ಯಾರ್ಥಿಗಳಲ್ಲಿ ದೇಶಭಕ್ತಿ ಬೆಳೆಸಲು ಅಗತ್ಯ ಕ್ರಮವಹಿಸಬೇಕು ಎಂದು ಹೇಳಿದರು.
ಹಾಸ್ಟೆಲ್ ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನ, ಆತ್ಮರಕ್ಷಣಾ ಕಲೆ, ಕೌಶಲ್ಯಾಭಿವೃದ್ಧಿ ಚಟುವಟಿಕೆಗಳನ್ನು ಪ್ರಾರಂಭಿಸಲಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಹೇಳಿದರು. ಯೋಗ ಶಿಕ್ಷಕರನ್ನು ನಿಯೋಜಿಸಿ ಪ್ರತಿದಿನ ಬೆಳಿಗ್ಗೆ 5.30 ರಿಂದ 6.30 ರವರೆಗೆ 1 ಗಂಟೆ ಕಾಲ ಯೋಗ ಸೇರಿದಂತೆ ಕೌಶಲ್ಯಾಭಿವೃದ್ಧಿ ಚಟುವಟಿಕೆಗಳನ್ನು ಶಿಸ್ತುಬದ್ಧವಾಗಿ ಮುಂದುವರೆಸುವಂತೆ ಲೋಕಾಯುಕ್ತರು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ, ಲೋಕಾಯುಕ್ತ ಜಿಲ್ಲಾ ಪೊಲೀಸ್ ಅಧೀಕ್ಷಕ ವಾಸುದೇವರಾಮ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಸುಬ್ರನಾಯಕ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಜಗದೀಶ್ ಹೆಬ್ಬಳ್ಳಿ, ಡಿ.ದೇವರಾಜು ಅರಸು ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯ ಮೇಲ್ವಿಚಾರಕಿ ಜಾಹೀದ್ ಸೇರಿದಂತೆ ಹಾಸ್ಟೆಲ್ ಸಿಬ್ಬಂದಿ ಇದ್ದರು.

Namma Challakere Local News
error: Content is protected !!