ಚಿತ್ರದುರ್ಗ ಜುಲೈ19:
ಚಿತ್ರದುರ್ಗ ನಗರದ ಸ್ಟೇಡಿಯಂ ಮುಂಭಾಗದ ಬುದ್ಧನಗರದ ನಗರ ಆರೋಗ್ಯ ಕೇಂದ್ರದಲ್ಲಿ ಇದೇ ಜುಲೈ 20ರಂದು ಬೆಳಿಗ್ಗೆ 11 ಗಂಟೆಗೆ ಗರ್ಭೀಣಿಯರು ಹಾಗೂ ಮಕ್ಕಳಿಗೆ ನಿಗಧಿತ ಸಮಯಕ್ಕೆ ಲಸಿಕೆ ಹಾಕುವುದನ್ನು ಸರಳಿಕರಣಗೊಳಿಸುವ ಉದ್ದೇಶದಿಂದ ಕೇಂದ್ರ ಆರೋಗ್ಯ ಸಚಿವಾಲಯ ಪರಿಚಯಿಸಿದ “ಯು-ವಿನ್ ಪೋರ್ಟಲ್” ಆ್ಯಪ್‍ನ ಪ್ರಾಯೋಗಿಕ ಉದ್ಘಾಟನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಆರ್.ರಂಗನಾಥ್, ಜಿಲ್ಲಾ ಲಸಿಕಾ ಅಧಿಕಾರಿ ಡಾ.ರೇಣುಪ್ರಸಾದ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್ ಘನ ಉಪಸ್ಥಿತಿವಹಿಸುವರು.
“ಯು-ವಿನ್ ಪೋರ್ಟಲ್” ಚಿತ್ರದುರ್ಗದಲ್ಲಿ ಪ್ರಾಯೋಗಿಕ ಆರಂಭ: “ಯು-ವಿನ್ ಪೋರ್ಟಲ್” ಆ್ಯಪ್‍ನಿಂದ ಗರ್ಭೀಣಿಯರು ಮಕ್ಕಳ ವಿವರ ಡಿಜಿಟಲೀಕರಣ ಸಕಾಲದಲ್ಲಿ ಲಸಿಕೆ ದೊರೆಯಲು ಸಹಾಯವಾಗಲಿದೆ.
ಕೋವಿಡ್ ಸಮಯದಲ್ಲಿ ಕೋವಿನ್ ಆ್ಯಪ್‍ನ ತದ್ರೂಪಿ ಆ್ಯಪ್ ಇದ್ದಾಗಿದೆ. ಗರ್ಭಿಣಿಯರು ಹಾಗೂ ನವಜಾತ ಶಿಶುಗಳಿಗೆ ಮೊದಲ ಲಸಿಕೆ ಹಾಕಿಸಿಕೊಂಡ ನಂತರ ಮುಂದಿನ ಲಸಿಕೆಯನ್ನು ಯಾವ ಸಮಯದಲ್ಲಿ ಹಾಕಿಸಿಕೊಳ್ಳಬೇಕು ಎಂಬುದನ್ನು ಅರಿಯಲು ಈ ಆ್ಯಪ್ ಸಹಾಯಕವಾಗಲಿದೆ. ಈ ಮೊದಲು ಗರ್ಭಿಣಿಯರು ಮಕ್ಕಳಿಗೆ ಯಾವ ಸಮಯಕ್ಕೆ ಲಸಿಕೆ ಹಾಕಬೇಕು ಎಂಬುದನ್ನು ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿಗಳು ಲಿಖಿತ ದಾಖಲೆಗಳನ್ನು ಇಟ್ಟುಕೊಳ್ಳುತ್ತಿದ್ದರು. ಇನ್ನು ಮುಂದಿನ ದಿನಗಳಲ್ಲಿ ಲಿಖಿತ ದಾಖಲೆ ಬದಲು ಪ್ರತಿ ಬಾರಿ ಚುಚ್ಚುಮದ್ದು ಹಾಕಿದ ಸಂದರ್ಭದಲ್ಲಿ ಈ ಆ್ಯಪ್‍ನಲ್ಲಿ ವಿವರಗಳನ್ನು ದಾಖಲೆ ಮಾಡಿದರೆ ಸಾಕು ಮುಂದಿನ ಲಸಿಕೆಯ ದಿನವನ್ನು ಸರಳವಾಗಿ ಕಂಡುಕೊಳ್ಳಬಹುದು. ಲಸಿಕೆ ಪಡೆದುಕೊಳ್ಳುವ ಗರ್ಭಿಣಿ ಅಥವಾ ಮಕ್ಕಳ ಪೋಷಕರ ಮೊಬೈಲ್‍ಗೂ ಲಸಿಕೆ ದಿನಾಂಕದ ಮಾಹಿತಿ ಲಭ್ಯವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.