ಚಳ್ಳಕೆರೆ : ಕಳೆದ ಹಲವಾರು ದಶಕಗಳಿಂದ ಸಾರ್ವಜನಿಕ ಕ್ಷೇತ್ರವೂ ಸೇರಿದಂತೆ ಸರ್ಕಾರ ಮತ್ತು ಜನರ ನಡುವೆ ಸೌಲಭ್ಯಗಳ ಹಾಗೂ ಕೊರತೆಗಳನ್ನು ಬಿಂಬಿಸುವ ದಿನಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸುವ ಪತ್ರಕರ್ತರು ಇಂದಿಗೂ ಸಹ ಅನೇಕ ಸಂಕಷ್ಟಗಳ ನಡುವೆ ಸಮಾಜದ ಏಳಿಗೆಗಾಗಿ ಶ್ರಮಿಸುತ್ತಿದ್ದಾರೆ ಎಂದು ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷ ದಿನೇಶ್ ಗೌಡಗೆರೆ ಹೇಳಿದ್ದಾರೆ.
ಚಳ್ಳಕೆರೆ ನಗರದ ಪ್ರವಾಸಿ ಮಂದಿರದಲ್ಲಿ ತಾಲೂಕಿನ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ನಂತರ ಅವರನ್ನು ಅಭಿನಂದಿಸಿ ಮಾತನಾಡಿ ಪತ್ರಿಕಾ ಕ್ಷೇತ್ರದ ಮೌಲ್ಯ ಮತ್ತು ಗೌರವವನ್ನು ಎತ್ತಿ ಹಿಡಿಯುವ ಕಾರ್ಯವನ್ನು ಎಲ್ಲ ಪತ್ರಕರ್ತರು ಮಾಡಬೇಕು ಪತ್ರಕರ್ತರು ಎಲ್ಲಿಯತನಕ ಪ್ರಾಮಾಣಿಕ ಮತ್ತು ದಕ್ಷತೆಯಿಂದ ಕಾರ್ಯ ನಿರ್ವಹಿಸುತ್ತಾನೆ ಅವನ ವೃತ್ತಿಯ ಬಗ್ಗೆ ಗೌರವ ಹೆಚ್ಚಾಗುತ್ತದೆ
ಅಲ್ಲದೆ ಜನರ ಪ್ರೀತಿ ವಿಶ್ವಾಸವನ್ನು ಗಳಿಸಲು ಸಾಧ್ಯವಾಗುತ್ತದೆ ಪತ್ರಿಕೆಗಳ ಸಮಾಜದ ಕನ್ನಡಿಯಾಗಿ ಕಾರ್ಯನಿರ್ವಹಿಸಬೇಕು ಎಂದರು.
ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾದ ಟಿಜೆ. ತಿಪ್ಪೇಸ್ವಾಮಿ ಮಾತನಾಡಿ ಎಲ್ಲರ ಆಯ್ಕೆಯನ್ನು ನಾನು ಸ್ವಾಗತಿಸುತ್ತೇನೆ ನನಗೆ ಜವಾಬ್ದಾರಿಯುತವಾದ ಸ್ಥಾನವನ್ನು ನೀಡಿದ್ದೀರಿ ಬರುವ ದಿನಗಳಲ್ಲಿ ಎಲ್ಲರನ್ನು ವಿಶ್ವಾಸಗಳಿಸಿ ಪತ್ರಕರ್ತರಿಗೆ ಸಿಗುವಂತಹ ಅನುಕೂಲಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲಾಗುವುದು ಎಂದರು.
ಜಿಲ್ಲಾ ಉಪಾಧ್ಯಕ್ಷರಾದ ಡಿ. ಈಶ್ವರಪ್ಪ ಮಾತನಾಡಿ ಬರುವ ದಿನಗಳಲ್ಲಿ ಕಾರ್ಯನಿರತ ಪತ್ರಕರ್ತರಿಗೆ ನಿವೇಶನ ಹಾಗೂ ಆರೋಗ್ಯ ವಿಮೆ ಕಾರ್ಡಗಳನ್ನು ಮಾಡಿಸಲು ರಾಜ್ಯ ಅಧ್ಯಕ್ಷರಿಗೆ ಮನವಿ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಟಿ.ಜೆ ತಿಪ್ಪೇಸ್ವಾಮಿ, ಗೌರವಾಧ್ಯಕ್ಷರಾಗಿ ಕೆಎಸ್ ರಾಘವೇಂದ್ರ. ಉಪಾಧ್ಯಕ್ಷರಾಗಿ ಕೊರ್ಲಕುಂಟೆ ತಿಪ್ಪೇಸ್ವಾಮಿ. ಬೊಮ್ಮಲಿಂಗ, ಪ್ರಧಾನ ಕಾರ್ಯದರ್ಶಿಯಾಗಿ ಎನ್. ವೀರೇಶ್, ಕಾರ್ಯದರ್ಶಿಯಾಗಿ ಕೆ ರಾಮಾಂಜನೇಯ , ಬಷೀರ್ ಆಯಾತ್, ಖಜಾಂಚಿಯಾಗಿ ಸುರೇಶ್ ಬೆಳಗೆರೆ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಡಿ ಈಶ್ವರಪ್ಪ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಖಜಾಂಚಿ ಕುಮಾರಸ್ವಾಮಿ, ಕಾರ್ಯದರ್ಶಿ ವಿ.ವೀರೇಶ್, ಜಿಲ್ಲಾ ಸಮಿತಿ ಸದಸ್ಯ ಲಕ್ಷ್ಮಣ್, ನಾವೆಲ್ಲಾ ಮಹೇಶ, ಹನುಮಂತರಾಯ, ವಿವಿ ಚಿದಾನಂದಮೂರ್ತಿ ಗಂಗಾಧರ್ ಮುಂತಾದವರು ಇದ್ದರು.