ವಿದ್ಯಾರ್ಥಿಗಳಿಗೆ ಬ್ಯಾಂಕ್ ವ್ಯವಹಾರಗಳ ಜ್ಞಾನ ಅತ್ಯವಶ್ಯಕ: ಲೀಡ್ ಬ್ಯಾಂಕ್ ವ್ಯವಸ್ಥಾಪಕ ಸಿಟಿಕೆ ಬಾಬು ಅಭಿಮತ
ಚಳ್ಳಕೆರೆ: ಇಂದಿನ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಜಗತ್ತಿನೊಂದಿಗೆ ದಿನನಿತ್ಯ ಒಡನಾಟ ಬೆಳೆಸಬೇಕಾದರೆ ಕನ್ನಡ ಭಾಷೆಯ ಜೊತೆಗೆ ಆಂಗ್ಲ ಭಾಷೆ ಕಲಿಯುವುದು ಸೂಕ್ತವಾಗಿದೆ ಇದರಿಂದಾಗಿ ವಿದೇಶ ಹಾಗೂ ರಾಷ್ಟ್ರಮಟ್ಟದಲ್ಲಿ ವಿದ್ಯಾರ್ಥಿಗಳು ತಮ್ಮ ಭವಿಷ್ಯ ರೂಪಿಸಿಕೊಳ್ಳಲು ಸಹಕಾರಿಯಾಗಲಿದೆ ಎಂದು ಲೀಡ್ ಬ್ಯಾಂಕ್ ವ್ಯವಸ್ಥಾಪಕ ಸಿಟಿಕೆ ಬಾಬು ಅಭಿಪ್ರಾಯ ಪಟ್ಟರು.
ನಗರದ ಬಾಪೂಜಿ ಪದವಿಪೂರ್ವ ಕಾಲೇಜು ಆವರಣದಲ್ಲಿ ಅಮೂಲ್ಯ ಆರ್ಥಿಕ ಸಾಕ್ಷರತಾ ಕೇಂದ್ರ ಕೆನರಾ ಬ್ಯಾಂಕ್, ಕರ್ನಾಟಕ ಗ್ರಾಮೀಣ ಬ್ಯಾಂಕ್ ಹಾಗೂ ಬಾಪೂಜಿ ಕಾಲೇಜು ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳಿಗೆ ಬ್ಯಾಂಕಿಂಗ್ ಕ್ಷೇತ್ರದ ಬಗ್ಗೆ ಅರಿವು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಭಾರತ ದೇಶ ಅಭಿವೃದ್ಧಿ ಹೊಂದುವಲ್ಲಿ ಯುವಜನತೆಯ ಪಾತ್ರ ಪ್ರಮುಖವಾಗಿದ್ದು ವಾಣಿಜ್ಯ ಶಾಸ್ತ್ರದ ವಿದ್ಯಾರ್ಥಿಗಳು ತಮ್ಮ ಪಠ್ಯ ಚಟುವಟಿಕೆಗಳಲ್ಲಿ ಬ್ಯಾಂಕಿಂಗ್ ಕ್ಷೇತ್ರದ ಕಾರ್ಯವಿಧಾನಗಳ ಬಗ್ಗೆ ತಿಳಿದುಕೊಳ್ಳುತ್ತಾರೆ ಆದರೆ ಬ್ಯಾಂಕ್ ಸೇವೆಗಳಲ್ಲಿ ವಿವಿಧ ರೀತಿಯ ಬ್ಯಾಂಕ್ ಗಳಿದ್ದು ಸಹಕಾರ ಕ್ಷೇತ್ರ ಬ್ಯಾಂಕ್ ವಾಣಿಜ್ಯ ಬ್ಯಾಂಕ್ ಪೇಮೆಂಟ್ ಬ್ಯಾಂಕ್ ಗಳು ಸೇವೆ ನೀಡುತ್ತಿವೆ ಇಂತಹ ಬ್ಯಾಂಕುಗಳ ಸೇವೆಗಳನ್ನು ಕೂಲಂಕುಶವಾಗಿ ತಿಳಿದುಕೊಂಡು ತಮ್ಮ ವೃತ್ತಿ ಜೀವನದ ಬದುಕನ್ನು ರೂಪಿಸಿಕೊಳ್ಳಬೇಕು ವಿದ್ಯಾರ್ಥಿಗಳಿಗಾಗಿ ಬ್ಯಾಂಕುಗಳಲ್ಲಿ ವಿವಿಧ ರೀತಿಯ ಸಾಲ ಸೌಲಭ್ಯವು ದೊರೆಯುತ್ತದೆ ಈ ಸೌಲಭ್ಯಗಳನ್ನು ಉಪಯೋಗಿಸಿಕೊಂಡು ವಿದ್ಯಾರ್ಥಿಗಳು ಉನ್ನತ ವ್ಯಾಸಂಗ ಮಾಡಿ ಪೋಷಕರ ಕನಸುಗಳನ್ನು ಸಾಕಾರಗೊಳಿಸಬೇಕು ಎಂದು ಕಿವಿಮಾತು ಹೇಳಿದರು.
ಆರ್ಥಿಕ ಕೌನ್ಸಿಲರ್ ಸೌಮ್ಯ ಮಾತನಾಡಿ ಭಾರತದ ಕೇಂದ್ರ ಸರ್ಕಾರ ಕಳೆದ ಹತ್ತು ಹದಿನೈದು ವರ್ಷಗಳಲ್ಲಿ ಬ್ಯಾಂಕಿಂಗ್ ಕ್ಷೇತ್ರಗಳಲ್ಲಿ ಅನೇಕ ಬದಲಾವಣೆಗಳನ್ನು ತಂದಿದ್ದು ಇಂದು ಗ್ರಾಮೀಣ ಹಾಗೂ ನಗರ ಪ್ರದೇಶದ ಜನಸಾಮಾನ್ಯರು ಮೊಬೈಲ್ ಗಳ ಮೂಲಕ ಹಣ ವರ್ಗಾವಣೆ ಮಾಡುತ್ತಿದ್ದು ಪೇಮೆಂಟ್ ಬ್ಯಾಂಕ್ ನೆಟ್ ಬ್ಯಾಂಕಿಂಗ್ ಪೆಪ್ಟೈಡ್ ಹಾಗೂ ಆರ್ ಟಿ ಜಿ ಎಸ್ ಗಳಂತಹ ಸೇವೆಗಳನ್ನು ಬಳಸುತ್ತಿದ್ದಾರೆ ವಿದ್ಯಾವಂತ ಯುವಜನತೆ ಖಾಸಗಿ ಕಂಪನಿಗಳ ಫೋನ್ ಪೇ ಗೂಗಲ್ ಪೇ ಗಳಂತಹ ಆಪ್ ಗಳನ್ನು ಬಳಸುವ ಬದಲು ತಮ್ಮ ಖಾತೆ ಹೊಂದಿರುವ ಬ್ಯಾಂಕುಗಳ ಆಪ್ ಗಳನ್ನು ಬಳಸಿ ಹಣ ವರ್ಗಾವಣೆ ಮಾಡಿದರೆ ಉತ್ತಮವಾಗಿರುತ್ತದೆ ಇದರಿಂದಾಗಿ ತಮ್ಮ ಹಣದ ವಹಿವಾಟು ಸುರಕ್ಷತೆಯಿಂದ ಕೂಡಿರುತ್ತದೆ ಬ್ಯಾಂಕುಗಳ ವಹಿವಾಟುಗಳ ಬಗ್ಗೆ ವಿದ್ಯಾರ್ಥಿಗಳು ಕಾಲಕಾಲಕ್ಕೆ ತಿಳಿದುಕೊಂಡರೆ ಮೋಸ ಹೋಗುವುದು ತಪ್ಪುತ್ತದೆ ಹಾಗೂ ಅನಕ್ಷರಸ್ಥರಿಗೆ ತಿಳುವಳಿಕೆ ಮೂಡಿಸಲು ಸಹಕಾರಿಯಾಗುತ್ತದೆ. ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಸುರಕ್ಷಾ ಭೀಮ ಯೋಜನೆ ಅಪಘಾತ ವಿಮೆ ಪ್ರಧಾನ ಮಂತ್ರಿ ಜೀವನ ಜ್ಯೋತಿ ಯೋಜನೆ ಅಟಲ್ ಪೆನ್ಷನ್ ಯೋಜನೆಗಳ ಲಾಭವನ್ನು ಪಡೆಯುವ ಮೂಲಕ ಮುಂದಿನ ಭವಿಷ್ಯಕ್ಕೆ ದಾರಿದೀಪವಾಗಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲ ಜೆಕೆ ಜಗದೀಶ್ ಉಪನ್ಯಾಸಕ ಕೆ ವಿ ವೆಂಕಟೇಶಮೂರ್ತಿ ನಿವೃತ್ತ ವ್ಯವಸ್ಥಾಪಕ ಸಿದ್ದಲಿಂಗಪ್ಪ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.