ನಿಜಲಿಂಗಪ್ಪನವರ ನಿವಾಸ “ವಿನಯ” ಜಿಲ್ಲಾಡಳಿತಕ್ಕೆ ಹಸ್ತಾಂತರ
ಸ್ಮಾರಕವಾಗಿಸುವ ನಿಟ್ಟಿನಲ್ಲಿ ಕ್ರಮ-ಜಿಲ್ಲಾಧಿಕಾರಿ ಟಿ.ವೆಂಕಟೇಶ್
ಚಿತ್ರದುರ್ಗ :
ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿ ನಾಡೋಜ ದಿ.ಎಸ್.ನಿಜಲಿಂಗಪ್ಪ ಅವರ ನಿವಾಸದ ಕೀಯನ್ನು ಸೋಮವಾರ ನಿಜಲಿಂಗಪ್ಪ ಸ್ಮಾರಕ ಟ್ರಸ್ಟಿ ಕೆಇಬಿ ಷಣ್ಮುಖಪ್ಪ ಅವರು ಜಿಲ್ಲಾಡಳಿತಕ್ಕೆ ಹಸ್ತಾಂತರಿಸಿದರು.
ಚಿತ್ರದುರ್ಗ ನಗರದ ವಿ.ಪಿ.ಬಡಾವಣೆಯಲ್ಲಿರುವ ದಿ.ಎಸ್.ನಿಜಲಿಂಗಪನವರು ವಾಸವಿದ್ದ ಮನೆಯನ್ನು ಸರ್ಕಾರ ವತಿಯಿಂದ ಖರೀದಿ ಮಾಡಲಾಗಿದ್ದು, ಈ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹಾಗೂ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಅವರು ನಿಜಲಿಂಗಪ್ಪ ಅವರ ನಿವಾಸದ ಕಟ್ಟಡದ ಸುಸ್ಥಿತಿಯನ್ನು ಪರಿಶೀಲನೆ ನಡೆಸಿದರು.
ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಮಾಜಿ ಮುಖ್ಯಮಂತ್ರಿಗಳಾದ ದಿ. ಎಸ್.ನಿಜಲಿಂಗಪ್ಪ ಅವರ ವಾಸವಿದ್ದ ಮನೆಯನ್ನು ಸರ್ಕಾರದಿಂದ ಖರೀದಿ ಮಾಡಿ ಸಂರಕ್ಷಣೆ ಮಾಡಿ, ಸ್ಮಾರಕ ಮಾಡಬೇಕು ಎಂಬ ಬೇಡಿಕೆ ಹಿನ್ನಲೆಯಲ್ಲಿ ಸರ್ಕಾರದ ನಿರ್ದೇಶನದಂತೆ ಕಳೆದ ವಾರ ಸರ್ಕಾರ ವತಿಯಿಂದ ಖರೀದಿ ಮಾಡಲಾಗಿದ್ದು, ಪುನರುಜ್ಜೀವನ ಮಾಡುವ ಉದ್ದೇಶದಿಂದ ಎಸ್.ನಿಜಲಿಂಗಪ್ಪ ಅವರ ಮನೆಗೆ ಭೇಟಿ ನೀಡಿ, ಪರಿಶೀಲನೆ ನಡೆಸಲಾಗುತ್ತಿದೆ ಎಂದು ಹೇಳಿದರು.
ನಿಜಲಿಂಗಪ್ಪ ಅವರ ಮನೆಯನ್ನು ಸ್ಮಾರಕವನ್ನಾಗಿ ಮಾಡುವ ನಿಟ್ಟಿನಲ್ಲಿ ಇಂಜಿನಿಯರ್‍ಗಳೊಂದಿಗೆ ಚರ್ಚಿಸಿ, ಮೊಟ್ಟ ಮೊದಲನೇಯದಾಗಿ ಸಿವಿಲ್ ಕಾಮಗಾರಿಗಳನ್ನು ದುರಸ್ಥಿ ಪಡಿಸಿ, ನಂತರ ಸರ್ಕಾರದೊಂದಿಗೆ ಚರ್ಚಿಸಿ, ಮುಂದಿನ ಕಾರ್ಯಗಳನ್ನು ಕೈಗೊಳ್ಳಲಾಗುವುದು. ಸ್ಮಾರಕ ಮಾಡುವ ನಿಟ್ಟಿನಲ್ಲಿ ತುರ್ತಾಗಿ ಎಸ್ಟಿಮೆಟ್ ಮಾಡಲು ಇಂಜಿನಿಯರ್‍ಗಳಿಗೆ ಸೂಚಿಸಲಾಗಿದ್ದು, ತಕ್ಷಣದಿಂದಲೇ ಪರಿಶೀಲನೆ ನಡೆಸಿ, ದುರಸ್ಥಿ ಕಾರ್ಯ ಕೈಗೊಳ್ಳುವರು ಎಂದು ಹೇಳಿದರು.
ಲೋಕೋಪಯೋಗಿ ಇಲಾಖೆ ಇಂಜಿನಿಯರ್‍ಗಳು ಅಂದಾಜಿಸಿದಂತೆ ರೂ.4,18,49,016 ಗಳಿಗೆ ಮಾಜಿ ಮುಖ್ಯಮಂತ್ರಿಗಳಾದ ದಿ.ಎಸ್.ನಿಜಲಿಂಗಪ್ಪನವರ ವಾರಸುದಾರರಿಂದ ಮನೆ ಖರೀದಿ ಮಾಡಲಾಗಿದ್ದು, ಇನ್ನೂ ರೂ.80 ಲಕ್ಷ ಅನುದಾನ ಉಳಿಕೆಯಾಗಿದ್ದು, ಈ ಅನುದಾನದಲ್ಲಿ ಸಿವಿಲ್ ಕಾಮಗಾರಿಗಳನ್ನು ನಿರ್ವಹಣೆ ಮಾಡಲಾಗುವುದು. ಇನ್ನೂ ಹೆಚ್ಚಿನ ಅನುದಾನದ ಅವಶ್ಯಕತೆ ಇದ್ದರೆ ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದು ತಿಳಿಸಿದ ಅವರು, ನಿಜಲಿಂಗಪ್ಪ ಅವರ ನಿವಾಸದಲ್ಲಿ ನಿಜಲಿಂಗಪ್ಪ ಅವರಿಗೆ ಸಂಬಂಧಪಟ್ಟ ಫೋಟೋಗ್ರಾಫಿ, ಉಡುಗೊರೆಗಳು ಹಾಗೂ ಅವರು ಉಪಯೋಗಿಸುತ್ತಿದ್ದ ವಸ್ತುಗಳು ಇದ್ದು, ಅವುಗಳನ್ನು ಯಥಾವತ್ತಾಗಿ ಪ್ರಾಚ್ಯ ವಸ್ತು ಸಂಗ್ರಾಲಯದ ಸಹಯೋಗದೊಂದಿಗೆ ಸಂರಕ್ಷಣೆ ಮಾಡಿ, ಸ್ಮಾರಕ ಹಾಗೂ ವಸ್ತು ಸಂಗ್ರಹಾಲಯವನ್ನಾಗಿ ಪರಿವರ್ತಿಸಿ, ಸಾರ್ವಜನಿಕರ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ನಿಜಲಿಂಗಪ್ಪ ಸ್ಮಾರಕ ಟ್ರಸ್ಟಿ ಕೆಇಬಿ ಷಣ್ಮುಖಪ್ಪ ಇದ್ದರು.