ನಿಮ್ಮ ಭವಿಷ್ಯಕ್ಕೆ ನೀವೇ ಶಿಲ್ಪಿಗಳಾಬೇಕು” :- ಶ್ರೀಶಾರದಾಶ್ರಮದ ಪೂಜ್ಯ ಮಾತಾಜೀ ತ್ಯಾಗಮಯೀ ಅಭಿಮತ.
ಚಳ್ಳಕೆರೆ:-ನಗರದ ಬೆಂಗಳೂರು ರಸ್ತೆಯ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದಲ್ಲಿ ಚಳ್ಳಕೆರೆಯ ಮದಕರಿ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಮದಕರಿನಗರದ ಉರ್ದು ಶಾಲೆ ಹಾಗೂ ಸಿದ್ದಾಪುರ ಗ್ರಾಮದ ಶ್ರೀಶಾರದಾಂಬ ಗ್ರಾಮಾಂತರ ಪ್ರೌಢಶಾಲೆಯ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ “ವ್ಯಕ್ತಿತ್ವ ನಿರ್ಮಾಣಕಾರಿ ತರಗತಿ” ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಚಳ್ಳಕೆರೆಯ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ತ್ಯಾಗಮಯೀ ಅವರು ಮಾತನಾಡಿ, ವಿದ್ಯಾರ್ಥಿ ಜೀವನ ಎನ್ನುವುದು ಬಹಳ ಅಮೂಲ್ಯವಾದ ಸಮಯವಾಗಿದ್ದು ಅದನ್ನು ಹಾಳು ಮಾಡಿಕೊಳ್ಳದೆ ಸಮಯವನ್ನು ಸದುಪಯೋಗ ಪಡಿಸಿಕೊಂಡು ನಿಮ್ಮ ಭವಿಷ್ಯವನ್ನು ನೀವೆ ಉತ್ತಮವಾಗಿ ನಿರ್ಮಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ವಿದ್ಯಾರ್ಥಿಯಾದವನು ನಾನು ಆದರ್ಶ ವಿದ್ಯಾರ್ಥಿಯಾಗುತ್ತೇನೆ ಎಂಬ ಸಕಾರಾತ್ಮಕ ಮನೋಭಾವದಿಂದ ತನ್ನ ವಿದ್ಯಾಭ್ಯಾಸವನ್ನು ಪೂರ್ಣ ಆತ್ಮವಿಶ್ವಾಸ ಮತ್ತು ಪರಿಪೂರ್ಣ ಏಕಾಗ್ರತೆಯಿಂದ ಮಾಡಬೇಕು. “ಮನಸ್ಸಿದ್ದರೆ ಮಾರ್ಗ”ಎಂಬ ಮಾತಿನಂತೆ ನಮ್ಮ ಮನಸ್ಸನ್ನು ಒಳ್ಳೆಯ ಗುರಿಯ ಕಡೆಗೆ ಹರಿಸಬೇಕು.
ಇದರಿಂದ ನಾವು ಶೈಕ್ಷಣಿಕವಾಗಿ ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು. ವಿದ್ಯಾರ್ಥಿಗಳಲ್ಲಿ ವೈಯಕ್ತಿಕ ಶಿಸ್ತು ಮತ್ತು ಸ್ವಾಮಿ ವಿವೇಕಾನಂದರಲ್ಲಿದ್ದ ಏಕಾಗ್ರತೆಯಂತೆ ನಾವು ಸಹ ಶಾಲೆಯ ಎಲ್ಲಾ ವಿಷಯಗಳನ್ನು ಗಮನವಿಟ್ಟು ಓದಿದರೆ ಉತ್ತಮ ಅಂಕಗಳನ್ನು ಪಡೆಯಲು ಸಾಧ್ಯ ಎಂದು ವಿದ್ಯಾರ್ಥಿಗಳಿಗೆ ವಿವಿಧ ಕಥೆಗಳ ಮೂಲಕ ಅನೇಕ ನೈತಿಕ ಮೌಲ್ಯಗಳ ಬಗ್ಗೆ ಮಾತಾಜೀ ಅವರು ತಿಳಿಸಿದರು.
ಈ ಸತ್ಸಂಗ ಕಾರ್ಯಕ್ರಮಕ್ಕೆ ಮೊದಲು ಶ್ರೀಶಾರದಾಶ್ರಮದ ಸದ್ಭಕ್ತರಾದ ಯತೀಶ್ ಎಂ ಸಿದ್ದಾಪುರ ಅವರು ವಿದ್ಯಾರ್ಥಿಗಳಿಗೆ ಭಜನೆಗಳನ್ನು ಹೇಳಿಕೊಟ್ಟರು.
ಈ ಸಂದರ್ಭದಲ್ಲಿ ದಿವ್ಯತ್ರಯರಿಗೆ ಸಂಬಂಧಿಸಿದ ಪುಸ್ತಕಗಳ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿತ್ತು.ಈ ವ್ಯಕ್ತಿತ್ವ ನಿರ್ಮಾಣಕಾರಿ ತರಗತಿ ಕಾರ್ಯಕ್ರಮದಲ್ಲಿ ಶಿಕ್ಷಕರಾದ ಬಸವರಾಜ್, ಅಂಜಿನಪ್ಪ, ಎನ್,ಶೋಭ, ಉಮಾ, ಮುಖ್ಯ ಶಿಕ್ಷಕ ಚನ್ನಕೇಶವ.ಎ. ಶಿಕ್ಷಕರಾದ ನಸ್ರೀನ್ ಕೌಸರ್,ರಮ್ಯ,ನಂದಿನಿ, ಅಡುಗೆ ಸಿಬ್ಬಂದಿ ಪರ್ವಿನ್ ತಾಜ್ ಎಸ್, ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಮಾಣಿಕ್ಯ ಸತ್ಯನಾರಾಯಣ, ಯತೀಶ್ ಎಂ ಸಿದ್ದಾಪುರ,ಸಂತೋಷ್, ಡಾ.ಭೂಮಿಕ, ವಿನೋದ್, ರೂಪಗಿರೀಶ್ ಸೇರಿದಂತೆ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.