ಚಿತ್ರದುರ್ಗ ಮೇ 26 : ಸದ್ವಿಚಾರ, ಸದ್ಭಾವನೆ, ಪರೋಪಕಾರದಿಂದ ಒಳ್ಳೆಯ ಕೀರ್ತಿಯನ್ನು ಪಡೆಯಲು ಸಾಧ್ಯ. ಸಮರ್ಪಣಾ ಭಾವದಿಂದ ಬದುಕು ಸಾರ್ಥಕವಾಗುತ್ತದೆ ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ಹೇಳಿದರು.
ಚಿತ್ರದುರ್ಗದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗು ಪರಿವರ್ತನಪರ ಧರ್ಮಸಂಸತ್ ವತಿಯಿಂದ ಕಾರವಾರ ಜಿಲ್ಲೆ ಉಳವಿಯಲ್ಲಿ ಆಯೋಜಿಸಲಾಗಿರುವ ಧಾರ್ಮಿಕರಿಗಾಗಿ ಚಿಂತನ ಕಮ್ಮಟ-2022 ಕರ‍್ಯಾಗಾರದಲ್ಲಿ ಸುರಕ್ಷಿತ ಜೀವನ ಅದರ ವಿಧಾನ ವಿಷಯ ಕುರಿತು ಮಾತನಾಡಿದ ಶ್ರೀಗಳು,
ನಮ್ಮೊಳಗೆ ಸಮತೋಲನ ಸ್ಥಿತಿ ಬೇಕು. ದುಃಖ ಬಂದರೂ ಸುಖ ಬಂದರೂ, ದುಃಖ, ನೋವು ಬಂದರೂ ಸಹನೆಯಿಂದ ಪರಿಸ್ಥಿತಿಯನ್ನು ನಿಭಾಯಿಸಬೇಕು. ಶಿವಯೋಗ (ಧ್ಯಾನ)ದಿಂದ ಶಾಂತಿ, ಸಹನೆ, ಸಮತೋಲನ ಸ್ಥಿತಿ ಸಾಧ್ಯವಾಗುತ್ತದೆ. ಜಗದ್ಗುರು ಎಂದು ಹೆಸರಿಟ್ಟುಕೊಂಡ ತಕ್ಷಣ ಜಗದ್ಗುರುವಾಗುವುದಿಲ್ಲ.
ಯಾರು ಜಗತ್ತಿನ ಆಗುಹೋಗುಗಳಿಗೆ ಮಿಡಿಯುವರೋ ಅವರೇ ಜಗದ್ಗುರುಗಳು ಸಮಾಜದಲ್ಲಿ ಸಂಘರ್ಷವನ್ನು ತಡೆಯುವುದೇ ಸ್ವಾಮಿಗಳ ಆದ್ಯ ಕರ್ತವ್ಯವಾಗಿದೆ. ತಾತ್ವಿಕತೆ, ನಿಸ್ವಾರ್ಥತೆ, ಸದ್ಭಾವನೆಗಳಿಂದ ಸುರಕ್ಷಿತ ಜೀವನಕ್ಕೆ ಪ್ರವೇಶ ಪಡೆಯಬಹುದು ಎಂದು ಹಿತ ನುಡಿದರು.
ಸ್ವಾಮಿಗಳು ನಿದ್ರೆಯ ಮೂರ್ತಿಗಳಾಗದೆ ಸ್ಫೂರ್ತಿಯ ಮೂರ್ತಿಗಳಾಗಬೇಕು, ಸಾಧನೆ ಇಲ್ಲದೇ ಹೋದರೆ ಸಿದ್ಧಿ ಸಾಧ್ಯವಿಲ್ಲ, ಶುದ್ಧಿ + ಸದ್ಬುದ್ಧಿ = ಸಿದ್ಧಿ, ಸಿದ್ಧಿ ಸಾಧನೆಯಿಂದ ಸಂತೃಪ್ತಿ ದೊರೆಯುತ್ತದೆ ಎಂದು ತಿಳಿಸಿದರು.
ಪರಿವರ್ತನಪರ ಧರ್ಮಸಂಸತ್‌ನ ಪ್ರಧಾನ ಕರ‍್ಯದರ್ಶಿ ಶ್ರೀ ಬಸವಮೂರ್ತಿ ಮಾದಾರಚೆನ್ನಯ್ಯ ಸ್ವಾಮಿಗಳು, ಅಥಣಿ ಶ್ರೀ ಗಚ್ಚಿನಮಠದ ಶ್ರೀ ಶಿವಬಸವ ಗುರುಮುರುಘರಾಜೇಂದ್ರ ಸ್ವಾಮಿಗಳು, ಗಾಣಿಗ ಗುರುಪೀಠದ ಡಾ. ಬಸವಕುಮಾರ ಸ್ವಾಮಿಗಳು ವೇದಿಕೆಯಲ್ಲಿದ್ದರು.