ವೀರಶೈವ ಲಿಂಗಾಯತ ವರ್ಗಕ್ಕೆ ಅಪಮಾನ

ಬಿಜೆಪಿ ನಿಜವಾದ ಮುಖವಾಡ ಬಯಲು

ಚಿತ್ರದುರ್ಗ, ಜೂ. 10
ಲಿಂಗಾಯತರು ಹಾಗೂ ಅಹಿಂದ ಸಮುದಾಯದ ಜನರು ಮತ ಹಾಕಲು ಅಷ್ಟೇ ಸೀಮಿತ, ಅಧಿಕಾರಕ್ಕೆ ಅಲ್ಲ ಎಂಬ ಬಿಜೆಪಿಯ ಮನಸ್ಥಿತಿ ಕೇಂದ್ರ ಸಚಿವ ಸಂಪುಟ ರಚನೆ ವೇಳೆ ಬಹಿರಂಗಗೊಂಡಿದೆ ಎಂದು ಮಾಜಿ ಸಚಿವ, ಕೆಪಿಸಿಸಿ ಉಪಾಧ್ಯಕ್ಷ ಎಚ್.ಆಂಜನೇಯ ದೂರಿದ್ದಾರೆ.

ಸೋಮವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ರಾಜ್ಯದಲ್ಲಿ ಬಿಜೆಪಿ ಉಸಿರಾಡುತ್ತಿರುವುದೇ ವೀರಶೈವ ಲಿಂಗಾಯತ ಸಮುದಾಯದ ಮತಗಳ ಮೇಲೆ. ಆದರೆ ಈ ಸಮುದಾಯದ ಸಂಸದರಿಗೆ ಕ್ಯಾಬಿನೆಟ್ ದರ್ಜೆಯ ಖಾತೆ ನೀಡದೇ, ಕವಡೆ ಕಾಸು ಕಿಮ್ಮತ್ತು ಇಲ್ಲದ ರಾಜ್ಯ ದರ್ಜೆ ಮಂತ್ರಿ ಸ್ಥಾನ ನೀಡುವ ಮೂಲಕ ಇಡೀ ಲಿಂಗಾಯತ ವರ್ಗವನ್ನೇ ಅವಮಾನಕಾರವಾಗಿ ನಡೆಸಿಕೊಂಡಿದೆ. ಈ ಹಿಂದೆಯೂ ಬಿ.ಎಸ್.ಯಡಿಯೂರಪ್ಪ ನೆರಳಲ್ಲಿ ಅಧಿಕಾರಕ್ಕೆ ಬಂದ ಬಳಿಕ ಅವರನ್ನು ಅತ್ಯಂತ ಕೆಟ್ಟದಾಗಿ ನಡೆಸಿಕೊಂಡಿದ್ದ ಬಿಜೆಪಿ ಈಗ ಅದಕ್ಕಿಂತೂ ಹೆಚ್ಚು ಅಪಮಾನ ಮಾಡುವ ರೀತಿ ಕೇಂದ್ರ ಸಚಿವ ಸಂಪುಟ ರಚನೆ ವೇಳೆ ನಡೆದುಕೊಂಡಿದೆ ಎಂದು ಬೇಸರಿಸಿದ್ದಾರೆ.

ಜೊತೆಗೆ ಎಸ್ಸಿ, ಎಸ್ಟಿ, ಹಿಂದುಳಿದ ವರ್ಗಕ್ಕೆ ಚುನಾವಣೆ ಸಂದರ್ಭದಲ್ಲಿ ಅಧಿಕಾರದ ಆಸೆ ತೋರಿಸಿ ಮತ ಪಡೆದು ಅಧಿಕಾರದ ಗದ್ದುಗೆ ಏರಿದ ಬಳಿಕ ಅತ್ಯಂತ ನಿಕೃಷ್ಠವಾಗಿ ಈ ಸಮುದಾಯಗಳನ್ನು ಬಿಜೆಪಿ ನಡೆಸಿಕೊಳ್ಳುತ್ತದೆ ಎಂಬುದಕ್ಕೆ ಈಗಿನ ಕೇಂದ್ರ ಸಚಿವ ಸಂಪುಟದಲ್ಲಿ ಆಗಿರುವ ಅನ್ಯಾಯವೇ ಸ್ಪಷ್ಟ ಉದಾಹರಣೆ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಮಾದಿಗ, ಭೋವಿ, ನಾಯಕ ಹಾಗೂ ಒಬಿಸಿ ವರ್ಗದ ಅನೇಕರು ಎನ್.ಡಿ.ಎ ಒಕ್ಕೂಟದಡಿ ಗೆದ್ದಿದ್ದಾರೆ. ಆದರೆ, ಇವರ್ಯಾರಿಗೂ ಮಂತ್ರಿ ಸ್ಥಾನ ನೀಡದೇ ನೀವುಗಳು ನಮ್ಮ ಕಾಲಾಳುಗಳು. ಮತ ಹಾಕಲಷ್ಟೇ ನೀವು ನಮಗೆ ಬೇಕು, ಅಧಿಕಾರ ಬಂದ ಬಳಿಕ ನೀವು ಬೇಕಿಲ್ಲ ಎಂಬುದನ್ನು ಬಿಜೆಪಿ ಸ್ಪಷ್ಟವಾಗಿ ತನ್ನ ವರ್ತನೆ ಮೂಲಕ ತೋರ್ಪಡಿಸಿದೆ ಎಂದು ದೂರಿದ್ದಾರೆ.

ಇನ್ನೂ ರಾಜ್ಯದಲ್ಲಿ ಬಹುದೊಡ್ಡ ಸಂಖ್ಯೆಯಲ್ಲಿರುವ ಕುರುಬ ಸಮುದಾಯಕ್ಕೆ ಒಂದು ಟಿಕೆಟ್ ನೀಡಲಿಲ್ಲ. ಇದನ್ನು ಪ್ರಶ್ನಿಸಿದ ಪಕ್ಷದ ಕಟ್ಟಾಳು ಕೆ.ಎಸ್.ಈಶ್ವರಪ್ಪ ಅವರನ್ನೇ ಉಚ್ಚಾಟಿಸಿ, ಹಿಂದುಳಿದ ಹಿರಿಯಣ್ಣನ ಸ್ಥಾನದಲ್ಲಿರುವ ಕುರುಬ ಸಮುದಾಯಕ್ಕೆ ಅಪಮಾನ ಮಾಡಿದೆ. ಜೊತೆಗೆ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧ ರಾಜಕಾರಣ ಮಾಡುವ ವ್ಯಕ್ತಿಗಳಿಗೆ ಕೇಂದ್ರ ಸಚಿವ ಸಂಪುಟದಲ್ಲಿ ಸ್ಥಾನ ನೀಡಲಾಗಿದೆ. ಈ ಮೂಲಕ ತಾನು ಲಿಂಗಾಯತ ವರ್ಗದ ವಿರೋಧಿ ಎಂಬುದನ್ನು ಸಚಿವ ಸಂಪುಟ ರಚನೆ ವೇಳೆ ಸ್ಪಷ್ಟವಾಗಿ ಬಿಜೆಪಿ ಹೇಳಿದೆ ಎಂದಿದ್ದಾರೆ.

ಆದ್ದರಿಂದ ವೀರಶೈವ ಲಿಂಗಾಯತ ಹಾಗೂ ಅಹಿಂದ ವರ್ಗ ಈಗಲೇ ಸಿಡಿದೇಳಬೇಕು. ತಕ್ಷಣ ನಮ್ಮ ರಾಜಕೀಯ ಹಕ್ಕು ಆಗಿರುವ ಕ್ಯಾಬಿನೆಟ್ ದರ್ಜೆಯ ಖಾತೆ ನೀಡುವಂತೆ ಒತ್ತಡ ತರಬೇಕು. ಇಲ್ಲದಿದ್ದರೇ ಜಿಲ್ಲಾ, ತಾಲ್ಲೂಕು ಪಂಚಾಯಿತಿ, ಬಿಬಿಎಂಪಿ ಸೇರಿ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಬಿಜೆಪಿ ಪಕ್ಷವನ್ನು ಧೂಳಿಪಟ ಮಾಡಲು ಸಂಕಲ್ಪ ಮಾಡಬೇಕು. ನಮ್ಮನ್ನು ಮತ ಬ್ಯಾಂಕ್ ಮಾಡಿಕೊಂಡು, ಅಧಿಕಾರದ ಬಾಗಿಲಿನಿಂದ ತಬ್ಬುವ ಬಿಜೆಪಿಗೆ ತಕ್ಕ ಪಾಠ ಕಲಿಸಬೇಕು. ಈ ವಿಷಯದಲ್ಲಿ ಮುಖ್ಯವಾಗಿ ವೀರಶೈವ ಲಿಂಗಾಯತ ಸಮುದಾಯ ಜನಜಾಗೃತಿಗೆ ಮುಂದಾಗಬೇಕು. ಈ ಹೋರಾಟಕ್ಕೆ ಅಹಿಂದ ವರ್ಗ ಬೆಂಬಲವಾಗಿ ನಿಲ್ಲಬೇಕು. ಈ ಮೂಲಕ ಮತದಾನವಷ್ಟೇ ಅಲ್ಲ; ಅಧಿಕಾರವೂ ನಮ್ಮ ಹಕ್ಕು ಎಂಬುದನ್ನು ಮಂಡಿಸಬೇಕು ಎಂದು ಕೋರಿದ್ದಾರೆ.

ಭದ್ರಾ ಮೇಲ್ದಂಡೆ ಅಭಿವೃದ್ಧಿಗೆ ಆಸಹಕಾರ, ಘೆರಾವ್ ಎಚ್ಚರಿಕೆ:
ಕರುನಾಡು ವತಿಯಿಂದ ರಾಜ್ಯಸಭೆ ಪ್ರತಿನಿಧಿಸುವ ನಿರ್ಮಲಾ ಸೀತರಾಮನ್, ರಾಜ್ಯದ ಅಭಿವೃದ್ಧಿ ಹಾಗೂ ಮಧ್ಯಕರ್ನಾಟಕಕ್ಕೆ ನೀರುಣಿಸುವ ಭದ್ರಾ ಮೇಲ್ದಂಡೆ ಯೋಜನೆಗೆ ಅಸಹಕಾರ ತೋರಿಸುವ ಮೂಲಕ ತೀವ್ರ ಅನ್ಯಾಯ ಮಾಡಿದ್ದು, ಈಗಲೂ ತಮ್ಮ ನಡೆ ಮುಂದುವರಿಸಿದರೇ ಅವರ ರಾಜ್ಯ ಪ್ರವೇಶದ ವೇಳೆ ಘೇರಾವ್ ಹಾಕಲಾಗುವುದು ಎಂದು ಎಚ್.ಆಂಜನೇಯ ಎಚ್ಚರಿಸಿದ್ದಾರೆ.
ಕಳೆದ ಅಧಿಕಾರದ ಅವಧಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗಲೂ ಬಳಿಕ ಕಾಂಗ್ರೆಸ್ ಸರ್ಕಾರದಲ್ಲಂತೂ ನಮ್ಮ ಪಾಲಿನ ತೆರಿಗೆ ನೀಡದೆ ವಂಚಿಸಿ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತಂದಿದ್ದರು. ಜೊತೆಗೆ ಭದ್ರಾ ಮೇಲ್ದಂಡೆ ಯೋಜನೆಗೆ ಬಜೆಟ್ ನಲ್ಲಿ ಘೋಷಿಸಿದ್ದ 5300 ಕೋಟಿ ಹಣದಲ್ಲಿ ಒಂದು ರುಪಾಯಿ ಬಿಡುಗಡೆ ಮಾಡದೇ ಅನ್ಯಾಯ ಮಾಡಲಾಯಿತು. ಬಿಜೆಪಿಯ 25 ಸಂಸದರು ಖಂಡಿಸದೆ ಮೌನವಹಿಸಿ ತಮ್ಮನ್ನು ಗೆಲ್ಲಿಸಿದ ಕನ್ನಡಿಗರಿಗೆ ಅನ್ಯಾಯ ಮಾಡಿದ್ದರು. ಈಗಲೂ ನಿರ್ಮಲಾ ಸೀತಾರಾಮನ್ ಅವರು ರಾಜ್ಯದ ಅಭಿವೃದ್ಧಿಗೆ ನಿರ್ಲಕ್ಷ್ಯ ವಹಿಸಿದರೆ ಘೇರಾವ್ ಹಾಕಲಾಗುವುದು ಎಂದು ಎಚ್ಚರಿಸಿದ್ದಾರೆ.

ಕನ್ನಡಿಗರಿಗೆ ಪ್ರಧಾನಿ ಹುದ್ದೆ ನೀಡಿದ್ದು ಕಾಂಗ್ರೆಸ್:
ಕಾಂಗ್ರೆಸ್ ಪಕ್ಷ ಕೇಂದ್ರದಲ್ಲಿ ಅಧಿಕಾರ ನಡೆಸಿದ ಸಂದರ್ಭದಲ್ಲಿ ರಾಜ್ಯದ ಸಂಸದರಿಗೆ ಉತ್ತಮ ಖಾತೆ ನೀಡಿ ಕರುನಾಡನ್ನು ಗೌರವಿಸಿತ್ತು. ಆದರೆ, ಬಿಜೆಪಿ ಸರ್ಕಾರ ಸಂಪೂರ್ಣ ನಿರ್ಲಕ್ಷಿಸಿದೆ ಎಂದು ಆಂಜನೇಯ ದೂರಿದ್ದಾರೆ.

ಸಿ.ಕೆ.ಜಾಫರ್ ಷರೀಫ್‍ಗೆ ರೈಲ್ವೆ, ಎಸ್.ಎಂ.ಕೃಷ್ಣ ಅವರಿಗೆ ವಿದೇಶಾಂಗ, ಕೆ.ಎಚ್.ಮುನಿಯಪ್ಪ ಅವರಿಗೆ ಹೆದ್ದಾರಿ ಹೀಗೆ ಅನೇಕರಿಗೆ ಪ್ರಮುಖ ಖಾತೆ ನೀಡುವ ಮೂಲಕ ರಾಜ್ಯದ ಅಭಿವೃದ್ದಿಗೆ ಸಹಕರಿಸಿತ್ತು. ಜೊತೆಗೆ ಪ್ರಧಾನಿ ಹುದ್ದೆ ಎಚ್.ಡಿ.ದೇವೇಗೌಡರು ಅಲಂಕರಿಸಲು ಬೆಂಬಲ ವ್ಯಕ್ತಪಡಿಸಿ, ಕನ್ನಡದ ವ್ಯಕ್ತಿ ಮೊದಲ ಬಾರಿಗೆ ಪ್ರಧಾನಿಯನ್ನಾಗಿ ಮಾಡಿದ ಹೆಮ್ಮೆ ಕಾಂಗ್ರೆಸ್ ಪಕ್ಷಕ್ಕೆ ಇದೆ. ಆದರೆ, ಬಿಜೆಪಿ ರಾಜ್ಯದ ಲಿಂಗಾಯತರು ಮತ್ತು ಅಹಿಂದ ವರ್ಗವನ್ನು ಕೇವಲ ಮತಗಳಿಗೆ ಸೀಮಿತ ಮಾಡಿಕೊಂಡು ಬಣ್ಣದ ಮಾತಿನಲ್ಲಿ ವಂಚಿಸುತ್ತಿದೆ. ಈ ಕುರಿತು ಕನ್ನಡಿಗರು ಅದರಲ್ಲೂ ಲಿಂಗಾಯತ, ಅಹಿಂದ ಸಮುದಾಯ ಹೆಚ್ಚು ಎಚ್ಚರಿಕೆ ವಹಿಸಬೇಕು. ಬಿಜೆಪಿಯ ನಯವಂಚನೆ ವಿರುದ್ಧ ಸಿಡಿದೇಳಬೇಕು ಎಂದು ಎಚ್.ಆಂಜನೇಯ ತಿಳಿಸಿದ್ದಾರೆ.

Namma Challakere Local News
error: Content is protected !!